ನೆನಪು ಮರೆವಿನ ಕಣ್ಣುಮುಚ್ಚಾಲೆಯಾಟ
ಹಾಳು ಮರೆವು ಎಂದು ಗೊಣಗದವರಿಲ್ಲ. ಮರೆವಿನ ನೆರವು ಪಡೆದು ತಮ್ಮ ಅರೆಕೊರೆಗಳನ್ನು ಮುಚ್ಚಿಟ್ಟುಕೊಳ್ಳುವುದು ಎಲ್ಲರೂ ಆಡುವ ಆಟವೇ ಸರಿ. ಹಾಗೆಯೇ ನೆನಪು ಚೆನ್ನಾಗಿರುವವರು ನಮ್ಮ ಮೆಚ್ಚುಗೆಯನ್ನು ಪಡೆಯುತ್ತಾರೆ.;ಜಾಣರೆಂದೆನಿಕೊಳ್ಳುತ್ತಾರೆ. ಈ ನೆನಪು ಮರೆವಿನ ಕಣ್ಣುಮುಚ್ಚಾಲೆಯಲ್ಲಿ ಭಾಷೆಗೇನಾದರೂ ಜಾಗವಿದೆಯೇ ಎನ್ನುವುದನ್ನು ಈಗ ನೋಡೋಣ. ನಮಗೆ ಒಬ್ಬರು ಚೆನ್ನಾಗಿ ಗೊತ್ತು ಎಂದಿಟ್ಟುಕೊಳ್ಳಿ. ಕೆಲಕಾಲ ನಮ್ಮ ಕಣ್ಣಿಗೆ ಬೀಳದಿದ್ದರೆ ಅವರನ್ನು ನಾವು ಮರೆಯುವುದುಂಟು. ಆದರೆ ಈ ಮರೆವಿಗೆ ಎರಡು ನೆಲೆಗಳಿವೆ. ಈಗ ಅವರು ನಮ್ಮ ಕಣ್ಣೆದುರಿಗೆ ಬಂದರೆ ಅವರು ನಮಗೆ ಗೊತ್ತಿರುವವರು ಎನಿಸಿದರೂ ಅವರ ಹೆಸರು ನಮ್ಮ ನೆನಪಿಗೆ ಬಾರದೇ ಹೋಗಬಹುದು. ಮತ್ತೆ ಕೆಲವೊಮ್ಮೆ ಅವರ ಹೆಸರು ನಮ್ಮ ನೆನಪಿನಲ್ಲಿ ಉಳಿದಿದ್ದರೂ ಅವರೇ ಎದುರಿಗೆ ಬಂದು ನಿಂತರೂ ನಾವು ಅವರನ್ನು ಗುರುತಿಸಿದೇ ಹೋಗಬಹುದು. ಇವೆಲ್ಲವೂ ನಮ್ಮೆಲ್ಲರಿಗೂ ಆಗಿರುವ ಅನುಭವಗಳೇ ಸರಿ. ಈ ಎರಡು ಬಗೆಯ ಮರೆವನ್ನು ಭಾಷೆಯ ನೆರವಿನಿಂದ ಅರಿತುಕೊಳ್ಳೋಣ. ಒಂದು ಪದಕ್ಕೆ ದನಿಯ ನೆಲೆ ಇರುವಂತೆ ತಿರುಳಿನ ನೆಲೆಯೂ ಇರುವುದಷ್ಟೆ. ಬಲ್ಲವರು ಈ ಎರಡು ನೆಲೆಗಳನ್ನು ಪದ-ಪದಾರ್ಥಗಳ ನೆಲೆ ಎಂದಿದ್ದಾರೆ. ದನಿ ಮತ್ತು ತಿರುಳುಗಳೆರಡೂ ನಮಗೆ ಗೊತ್ತಿದ್ದರೆ ಆ ಪದವನ್ನು ಬಳಸಬಹುದು. ಇವೆರಡರಲ್ಲಿ ಯಾವುದೊಂದನ್ನು ಮರೆತರೂ ನಾವು ಗೊಂದಲಕ್ಕೆ ಒಳಗಾಗುತ್ತೇವೆ.;ಎರಡನ್ನೂ ಮರೆತರಂತೂ ನಮ್ಮ ಪಾಡು ಇನ್ನಷ್ಟು ಇಕ್ಕಟ್ಟಿಗೆ ಸಿಕ್ಕುವುದು. ನಾವು ನೆನಪಿಟ್ಟುಕೊಳ್ಳುವ ಬಗೆಯಲ್ಲೂ ಈ ಎರಡು ನೆಲೆಗಳಿರುವಂತೆ ತೋರುತ್ತದೆ. ನೆನಪಿನ ’ದನಿಯ’ನೆಲೆ ಒಂದು; ನೆನಪಿನ ತಿರುಳಿನ ನೆಲೆ ಇನ್ನೊಂದು. ’ದನಿ’ ಯ ನೆಲೆ ಮರೆತರೆ ಏನೋ ಮರೆತಂತೆ ಅನ್ನಿಸುತ್ತದೆ. ಆದರೆ ಏನು ಮರೆತೆವೆಂದು ಹೇಳಲಾರೆವು. ’ತಿರುಳಿನ’ ನೆಲೆ ಮರೆತರೆ ಬೇರೇನೋ ನೆನಪಿಗೆ ಬರುತ್ತದೆಯಾದರೂ ಬೇಕಾದ್ದು ನೆನಪಿಗೆ ಬರುವುದಿಲ್ಲ.ಒಮ್ಮೆ ಕಲಿತ ಹಾಡೊಂದನ್ನು ಈಗ ನೆನೆದುಕೊಳ್ಳಿ. ಸರಿಯಾಗಿ ಹೇಳಲು ಬಂದರೆ ಸರಿ. ಮರೆತಿದ್ದರೆ ಏನಾಗುವುದೆಂದು ನೋಡಿ. ಆ ಹಾಡಿನ ಧಾಟಿ ಮರೆತಿದ್ದರೆ ಅದರ ಪದಗಳನ್ನು ನೆನಪಿಟ್ಟುಕೊಂಡಿದ್ದರೂ ಹಾಡಲಾಗುವುದಿಲ್ಲ. ಧಾಟಿ ನೆನಪಿದ್ದು ಪದಗಳು ಮರೆತಿದ್ದರೆ ನಾವು ಹಾಡನ್ನು ಗುನುಗ ತೊಡಗುತ್ತೇವೆ. ಸಾಲುಗಟ್ಟಲೆ ಗುನುಗಿಯೇ ಹಾಡಿ ಮುಗಿಸುತ್ತೇವೆ. ಮೊದಲನೆಯದು ’ದನಿ’ ಯ ನೆಲೆಯ ಮರೆವು;ಎರಡನೆಯದು ’ತಿರುಳಿನ’ನೆಲೆಯ ಮರೆವು.
ಸರಿ. ಹೀಗೇಕಾಗುತ್ತದೆ? ಹಿಂದೆ ಈ ಅಂಕಣದಲ್ಲಿ ಬರೆದಿದ್ದ ಒಂದು ಮಾತನ್ನು ಮರೆತಿದ್ದರೆ ನೆನಪು ಮಾಡಿಕೊಳ್ಳಿ. ನಮ್ಮ ಮೆದುಳಿನಲ್ಲಿ ದನಿ ಮತ್ತು ತಿರುಳನ್ನು ಕೂಡಿಟ್ಟುಕೊಳ್ಳುವ ಮತ್ತು ಮರಳಿ ನಮ್ಮ ಬಳಕೆಗೆ ಒದಗಿಸುವ ತಾಣಗಳು ಬೇರೆಬೇರೆಯಾಗಿವೆ. ದನಿಯ ನೆಲೆಯು ಬ್ರಾಕಾನ ತಾಣದಲ್ಲಿದ್ದರೆ ತಿರುಳಿನ ನೆಲೆಯು ವರ್ನಿಕೆಯ ತಾಣದಲ್ಲಿರುತ್ತದೆ. ಇವೆರಡಲ್ಲಿ ಯಾವೊಂದು ತಾಣಕ್ಕೆ ತೊಂದರೆಯಾದರೂ ಮಾತು ಕಟ್ಟುತ್ತದೆ. ಅಂದರೆ ನೆನಪು ಕುಗ್ಗುತ್ತದೆ. ಬ್ರಾಕಾನ ತಾಣಕ್ಕೆ ತೊಂದರೆಯಾದರೆ ಏನನ್ನೋ ಹೇಳಬೇಕೆಂದರೂ ಹೇಳಲು ತಕ್ಕ ಪದಗಳು ದಕ್ಕುವುದಿಲ್ಲ. ಏಕೆಂದರೆ ಆ ಪದಗಳನ್ನು ದನಿಯ ನೆಲೆಗೆ ಒಯ್ಯುಲು ನಮಗೆ ಆಗುವುದಿಲ್ಲ. ಹಾಗೆಯೇ ವರ್ನಿಕೆಯ ತಾಣಕ್ಕೆ ತೊಂದರೆಯಾದರೆ ಏನು ಹೇಳಬೇಕೆಂದಿರುತ್ತೇವೋ ಅದನ್ನು ಹೇಳಲಾಗದೆ ಬೇರೆ ಏನನ್ನೋ ಹೇಳುತ್ತಿರುತ್ತೇವೆ. ಮರ ಎನ್ನುವ ಬದಲು ಹಕ್ಕಿ,ಹಣ್ಣು, ಎಲೆ, ದೆವ್ವ ಹೀಗೆ ಏನನ್ನಾದರೂ ( ಆದರೂ ಮರದೊಡನೆ ನಂಟಿರುವ ಯಾವುದೋ ಪದವನ್ನು) ಹೇಳಬಹುದು. ನೆನಪುಗಳೆಲ್ಲವೂ ಭಾಷೆಯೊಡನೆ ನಂಟನ್ನು ಪಡೆದಿರುತ್ತವೆಂದು ಹೇಳಲಾಗದು. ಆದರೂ ನೆನಪಿನ ಕಟ್ಟೋಣಕ್ಕೂ ಭಾಷೆಯ ಕಟ್ಟೋಣಕ್ಕೂ ಹೊಂದಾಣಿಕೆ ಇದೆ ಎನ್ನುವುದಂತೂ ದಿಟ. ಅಂದರೆ ಭಾಷೆಯಲ್ಲಿ ಇರುವ ಎರಡು ನೆಲೆಗಳಂತೆ ನೆನಪಿಗೂ ಎರಡು ನೆಲೆಗಳಿರುತ್ತವೆ ಎಂದಾಯ್ತು.
ನೆನಪಿಟ್ಟುಕೊಳ್ಳುವುದು ಎಂದರೇನು? ಬೇಕಾದಾಗ,ಬೇಕಾದ್ದು ಬೇಕಾದಷ್ಟು ನಮ್ಮ ಎಚ್ಚರದ ನೆಲೆಗೆ ಬಂದರೆ ಅದನ್ನು ನೆನಪು ಎನ್ನುತ್ತೇವೆ ತಾನೆ? ಹೀಗೆ ನೆನಪಿಟ್ಟುಕೊಳ್ಳುವವರ ಬಗೆಗಳನ್ನು ಗಮನಿಸಿ. ಕೆಲವರು ಮಾತಾಡುವಾಗ ಯಾವುದೋ ಗಾದೆ ಮಾತನ್ನು ಹೇಳಬೇಕೆಂದು ಬಯಸುತ್ತಾರೆ. ಆದರೆ ಆ ಗಾದೆ ನೆನಪಿಗೆ ಬರುವುದಿಲ್ಲ. ಅದರ ಬದಲಿಗೆ ’ಅದೇನೋ ಅಂತಾರಲ್ಲ ಹಾಗಾಯ್ತು ನಿನ್ನ ಕತೆ’ ಎಂದು ಬಿಡುತ್ತಾರೆ. ಇವರು ಪದವನ್ನು ಮರೆತು ಹಾಡು ಗುನುಗುವ ಬಗೆಯವರು. ಮತ್ತೆ ಕೆಲವರು ಗಂಟೆಗಟ್ಟಲೆ ಒಂದು ಕತೆಯನ್ನು ಹಾಡಿನಲ್ಲಿ ಹೇಳುವವರಿದ್ದಾರೆಂದು ಕೊಳ್ಳಿ. ಇವರು ಎಂದೋ ಯಾರೋ ಹೇಳಿದ ಹಾಡನ್ನು ’ಕಲಿತು’ ತಾವೂ ಹೇಳ ತೊಡಗಿದವರು. ಮತ್ತೆ ಮತ್ತೆ ಅದೇ ಹಾಡನ್ನು ಹೇಳಬಲ್ಲರು. ಇಂತವರು ಆ ಹಾಡನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆಂಬುದು ಒಂದು ಸೋಜಿಗ. ಕೆಲವರು ಹೇಳುವಂತೆ ಆ ಹಾಡಿನಲ್ಲಿ ಮತ್ತೆ ಮತ್ತೆ ಬರುವ ಕೆಲವು ಮಾತುಗಳಿರುತ್ತವೆ; ಹಾಗೆಯೇ ಅದರ ಓಟವನ್ನು ಕಟ್ಟಿಕೊಡುವ ಧಾಟಿಯೊಂದಿರುತ್ತದೆ. ಆ ಧಾಟಿ ಕೂಡ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಈ ಎರಡೂ ನೆಲೆಗಳು ಆ ನೀಳವಾದ ಹಾಡನ್ನು ಮರೆಯದಂತೆ ನೆನಪಿಟ್ಟುಕೊಳ್ಳಲು ಆ ಹಾಡುಗಾರರಿಗೆ ನೆರವಾಗುತ್ತವೆ. (ಚಿಕ್ಕವರಿದ್ದಾಗ ನಮಗೆ’ಕಲಿಸಿದ’/ ನಾವು ’ ಕಲಿತ’ ಮಕ್ಕಳ ಹಾಡುಗಳನ್ನು ಈಗ ಒಮ್ಮೆ ನೆನಪು ಮಾಡಿಕೊಂಡರೆ ಈ ಮೇಲೆ ಹೇಳಿದ್ದು ಇನ್ನಷು ಚೆನ್ನಾಗಿ ಗೊತ್ತಾಗುತ್ತದೆ.)
ಮರೆಯದೇ ಇರಬೇಕೆಂದು ನಾವೆಲ್ಲರೂ ಬಯಸುವವರು. ’ ನಾನು ಹೇಳಿದ್ದನ್ನು ಸೆರಗಿಗೆ ಗಂಟು ಹಾಕಿಟ್ಟುಕೋ, ಮರೀಬೇಡ’ ಎನ್ನುವವರುಂಟು. ’ಆಗಿದ್ದನ್ನೆಲ್ಲ ಕಂಕುಳಲ್ಲಿರಿಸಿಕೊಂಡಿದ್ದೇನೆ, ಮರೆತೇನೆಯೇ’ ಎಂದು ಮತ್ತೆ ಕೆಲವರು ಹೇಳುತ್ತಾರೆ. ನೆನಪಿಟ್ಟುಕೊಳ್ಳುವುದಕ್ಕೂ ಅವರು ಹೇಳುತ್ತಿರುವ ಕೆಲಸಕ್ಕೂ ಏನೂ ನಂಟಿಲ್ಲ. ಆದರೂ ಹೀಗೆ ಹೇಳುವುದೇಕೆ? ಸೆರಗಿನ ಗಂಟನ್ನು ನೋಡಿದಾಗ ಏನನ್ನೋ ನೆನಪಿಸಿಕೊಳ್ಳಬೇಕೆಂದು ಅನಿಸುತ್ತದೆ; ಆಗ ಅದನ್ನು ನೆನಪಿಸಿಕೊಳ್ಳುತ್ತೇವೆ ಎನ್ನಬಹುದೇ? ಅದೇನೋ ಸರಿ. ಆದರೆ ಏನೋ ನೆನಪಿಟ್ಟುಕೊಳ್ಳ ಬೇಕಿತ್ತು ಎನ್ನುವುದಷ್ಟೆ ನೆನಪಿಗೆ ಬಂದು ಏನು ನೆನಪಿಸಿಕೊಳ್ಳಬೇಕೋ ಅದೇ ಮರೆತು ಹೋದರೇನು ಮಾಡುವುದು? ಮನೆಗೆ ಬರುವಾಗ ಅಂಗಡಿಯಿಂದ ಏನನ್ನೋ ತರಲು ಮನೆಯಲ್ಲಿ ಹೇಳಿದ್ದಾರೆಂದುಕೊಳ್ಳಿ. ಹಿಂದಿರುಗಿ ಬರುವಾಗ ಅಂಗಡಿ ಕಣ್ಣಿಗೆ ಬೀಳುತ್ತದೆ. ಏನನ್ನೋ ಇಲ್ಲಿಂದ ತೆಗೆದುಕೊಂಡು ಹೋಗಬೇಕಿದೆ ಎನ್ನುವುದು ನೆನಪಿಗೆ ಬರುತ್ತದೆ. ಆದರೆ ಏನದು ಎಂಬುದು ನೆನಪಿಗೆ ಬರುವುದಿಲ್ಲ. ಇದನ್ನು ನೆನಪು ಎನ್ನಬೇಕೋ ಮರೆವು ಎನ್ನಬೇಕೋ?
ಭಾಷೆಯ ನೆಲೆಯ ನೆನಪುಗಳು ಹೇಗೆ ನೆಲೆಗೊಂಡಿರುತ್ತವೆ ಎನ್ನುವುದನ್ನು ತಿಳಿಯಲು ಹಲವರು ಮುಂದಾಗಿದ್ದಾರೆ; ಆ ದಿಕ್ಕಿನಲ್ಲಿ ತುಂಬ ಕೆಲಸಗಳನ್ನು ಮಾಡಿದ್ದಾರೆ. ಅವರ ತಿಳುವಳಿಕೆಯನ್ನು ಈಗ ಕೊಂಚ ಗೊತ್ತು ಮಾಡಿಕೊಳ್ಳೋಣ. ನಾವು ಒಂದು ಪದವನ್ನು ನೆನಪಿನಲ್ಲಿರಿಸಿಕೊಳ್ಳಲು ಇಲ್ಲವೇ ಅದನ್ನು ನೆನಪು ಮಾಡಿಕೊಳ್ಳಲು ಎರಡು ದಾರಿಗಳನ್ನು ಹಿಡಿಯಬಹುದು. ಒಂದು: ಆ ಪದದ ದನಿಯ ಹೋಲಿಕೆ ಇರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಎರಡು; ಆ ಪದದ ತಿರುಳಿನೊಡನೆ ನಂಟಿರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಕವಿಗಳು ತಮ್ಮ ಕವಿತೆಗಳಲ್ಲಿ ಪದಗಳನ್ನು ಜೋಡಿಸುವಾಗ ಈ ಎರಡೂ ಹಾದಿಗಳನ್ನು ಹಿಡಿಯುತ್ತಾರೆ. ’ಯಾರಾಗ ಹಾಡಿದರೂ ಯಾರಾಗ ಕೇಳುವರು’ ’ಗಿಡಗಂಟಿಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಈ ಎರಡೂ ಸಾಲುಗಳಲ್ಲಿ ಮೊದಲನೆಯದು ಒಂದು ಪದದ ದನಿಯ ನೆಲೆಯ ನಂಟನ್ನು ಹೊಂದಿರುವ ಇನ್ನೊಂದು ಪದವನ್ನು ಜೋಡಿಸಿಟ್ಟುಕೊಂಡಿದೆ. ’ಯಾ(ವ)ರಾಗ ಹಾಡಿದರೂ ಯಾರಾ(ರು,ಆ)ಗ ಕೇಳುವರು.’ ಎರಡನೆಯ ಸಾಲಿನಲ್ಲಿ ತಿರುಳಿನ ನಂಟಿರುವ ಪದವನ್ನು ಬಳಸಿಕೊಳ್ಳಲಾಗಿದೆ.ಗಿಡಗಳ ಕೊರಳು ಅ ಗಿಡದಲ್ಲಿ ಅಡಗಿದ ಹಕ್ಕಿಗಳ ಕೊರಳಾಗಿ ಬಿಡುತ್ತದೆ. ಈ ಸಾಲುಗಳನ್ನು ಇಲ್ಲಿ ಹೇಳಿದ್ದೇಕೆ? ಭಾಷೆಯಲ್ಲಿ ಈ ಹಾದಿಗಳನ್ನು ಹಿಡಿದು ನಾವು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಮರೆಯದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು. ಈ ಎರಡು ಹಾದಿಗಳಲ್ಲಿ ಒಂದು ಹೋಲಿಕೆಯನ್ನು(=ಸಾದೃಶ್ಯವನ್ನು) ನೆಮ್ಮಿದರೆ ಇನ್ನೊಂದು ನಂಟನ್ನು (=ಸಂಬಂಧವನ್ನು) ನೆಮ್ಮುತ್ತದೆ.
ನಮ್ಮ ಸಂಸ್ಕೃತಿಯಲ್ಲಿ ಕೂಡಿಕೊಂಡ ನೆನಪುಗಳು ಕೂಡ ಹೀಗೆ ಹೋಲಿಕೆ ಮತ್ತು ನಂಟನ್ನು ನೆಮ್ಮಿಕೊಂಡಿರುತ್ತವೆ. ಇಲ್ಲಿರುವ ನೂರಾರು ಆಚರಣೆಗಳು, ಕತೆಗಳು, ಹಾಡುಗಳು ಹೀಗೆ ನೆನಪಿಗೆ ನೆರವಾಗುವ ಮೀಟುಗೋಲಾಗುವ ಬಯಕೆಯನ್ನು ಹೊಂದಿರುತ್ತವೆ. ಆದರೆ ಅವೆಲ್ಲವೂ ದಿನಕಳೆದಂತೆ ಹೀಗೆ ನೆನಪಿಗೆ ತಂದುಕೊಡಬಲ್ಲ ನೆಲೆಯನ್ನು ಕಾಯ್ದುಕೊಳ್ಳುತ್ತವೋ ಇಲ್ಲವೇ ಅದನ್ನು ಕಳೆದುಕೊಳ್ಳುತ್ತವೋ ಎನ್ನುವುದು ಬೇರೆಯ ಮಾತು. ನೆನಪು ಮರೆವಿನ ಕಣ್ಣು ಮಚ್ಚಾಲೆಯಾಟ ಒಬ್ಬೊಬ್ಬರ ಮಟ್ಟಿಗೆ ಎಷ್ಟು ದಿಟವೋ ಇಡೀ ಸಮುದಾಯಕ್ಕೂ ಅಷ್ಟೇ ದಿಟ.
Wednesday, June 25, 2008
Subscribe to:
Posts (Atom)