ಭಾಷೆ ಯಾರ ಸ್ವತ್ತು?
ಈಚೆಗೆ ಹಿರಿಯರೊಬ್ಬರು ಕೇಳಿದ ಪ್ರಶ್ನೆಯಿದು: ’ಭಾಷೆ ಯಾರ ಸ್ವತ್ತು?’ ಇದೊಂದು ಕಾಡಿಸುವ ಪ್ರಶ್ನೆಯೆಂದು ಮೇಲು ನೋಟಕ್ಕೆ ಅನ್ನಿಸುವುದಿಲ್ಲ. ಕನ್ನಡ ಯಾರಿಗೆ ಸೇರಿದ್ದು ಎಂದು ಕೇಳಿದರೆ ಅದು ಆ ಭಾಷೆಯನ್ನು ಬಳಸುವ ಎಲ್ಲರಿಗೂ ಸೇರಿದ್ದು ಎಂದು ಉತ್ತರ ಕೊಡುತ್ತೇವೆ. ಆದರೆ ಈ ಭಾಷೆಯನ್ನು ಈ ಹಿಂದೆಯೂ ಆಡಿದವರಿದ್ದಾರೆ ಮುಂದೆ ಆಡುವವರೂ ಇದ್ದಾರೆ. ಆಂದರೆ ಕನ್ನಡ ಅವರೆಲ್ಲರಿಗೂ ಸೇರಿದ್ದು ಎಂದು ಹೇಳಬೇಕಾಗುತ್ತದೆ. ಯಾವುದೇ ಸ್ವತ್ತನ್ನು ನನಗೆ ಸೇರಿದ್ದು; ಕೆಲವರಿಗೆ ಸೇರಿದ್ದು ಇಲ್ಲವೇ ಎಲ್ಲರಿಗೂ ಸೇರಿದ್ದು ಎಂದು ಬಗೆಬಗೆಯಾಗಿ ನೋಡುತ್ತೇವೆ. ಸ್ವತ್ತು ಯಾರಿಗೆ ಸೇರಿದ್ದು ಎನ್ನುವುದನ್ನು ಅವಲಂಬಿಸಿ ಅದನ್ನು ಯಾರು ಹೇಗೆ ಬಳಸಬೇಕು ಮತ್ತು ಅದರ ಫಲವನ್ನು ಉಣ್ಣಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಅದನ್ನು ಬಹುಮಟ್ಟಿಗೆ ಒಪ್ಪಿ ಆಚರಿಸುತ್ತವೆ. ಈ ಒಪ್ಪಂದವನ್ನು ಮೀರಿದ ಪ್ರಸಂಗಗಳು ತಿಕ್ಕಾಟಗಳಿಗೆ,ಕಾನೂನು ಸಮರಗಳಿಗೆ ಕಾರಣವಾಗುತ್ತವೆ. ಹಾಗಿದ್ದಲ್ಲಿ ಭಾಷೆ ಎನ್ನುವ ಎಲ್ಲರಿಗೆ ಸೇರಿದ ಸ್ವತ್ತಿನ ನಿರ್ವಹಣೆ ಹೇಗೆ ಆಗುತ್ತಿದೆ?
ಎಲ್ಲರಿಗೆ ಸೇರಿದ ಸ್ವತ್ತನ್ನು ಎಲ್ಲರೂ ಬಳಸದೇ ಇರಬಹುದು.ಬಳಸುವವರೂ ಕೂಡ ಬಳಸುವ ಪ್ರಮಾಣದಲ್ಲಿ ಏರುಪೇರುಗಳಿರುತ್ತವೆ. ಊರೊಟ್ಟಿನ ಮೈದಾನವೊಂದನ್ನು ಕೆಲವರು ಆಟ ಆಡಲು ಬಳಸಿಯಾರು. ಮತ್ತೆ ಕೆಲವರು ಹಾದು ಹೋಗುವ ದಾರಿ ಅದರ ನಡುವೆ ಇದ್ದೀತು. ಕೆಲವರು ತಿರುಗಾಡಿ ಬಂದಾರು. ಮತ್ತೆಕೆಲವರು ಎಂದೂ ಅದರೆಡೆಗೆ ತಲೆಹಾಕದೆಯೂ ಇದ್ದುಬಿಡುತ್ತಾರೆ. ಆದರೆ ಇದರಿಂದ ಆ ಮೈದಾನ ಊರೊಟ್ಟಿನದು ಎಂಬುದಕ್ಕೆ ಧಕ್ಕೆಯೇನೂ ಇಲ್ಲ. ಅದನ್ನು ಕೆಲವರು ತಮ್ಮದನ್ನಾಗಿ ಮಾಡಿಕೊಂಡು ಬೇರೆಯವರ ಬಳಕೆಗೆ ಸಿಗದಂತೆ ಮಾಡಿದಾಗ ತಕರಾರುಗಳು ಹುಟ್ಟಿಕೊಳ್ಳುತ್ತವೆ.ಇಲ್ಲವೇ ಆ ಮೈದಾನವನ್ನು ಯಾವಾಗ ಯಾರು ಮತ್ತು ಏಕೆ ಬಳಸಬೇಕು ಎಂಬುದನ್ನು ಕುರಿತು ಒಮ್ಮುಖದ ನಿರ್ಧಾರಗಳನ್ನು ತೆಗೆದುಕೊಂಡಾಗಲೂ ಗೊಂದಲಗಳು ಉಂಟಾಗುತ್ತವೆ.
ಭಾಷೆ ಎಲ್ಲರಿಗೆ ಸೇರಿದ ಸ್ವತ್ತು ಎಂದರೂ ಅದು ಇತರ ಸ್ವತ್ತುಗಳ ಹಾಗೆ ಇರುವಂತೆ ತೋರುತ್ತಿಲ್ಲ. ಏಕೆಂದರೆ ಅದಕ್ಕೆ ಎಲ್ಲರೂ ನೋಡಬಹುದಾದ ಗ್ರಹಿಸಬಹುದಾದ ಹೊರ ನೆಲೆಯೊಂದು ಇಲ್ಲ. ನಾವು ಆಡುವ ಇಲ್ಲವೇ ಕೇಳುವ ಮಾತುಗಳೆಲ್ಲ ಆ ಸ್ವತ್ತಿನ ಫಲಿತಗಳೇ ಹೊರತು ಆ ಮಾತುಗಳೇ ಸ್ವತ್ತುಗಳಲ್ಲ. ಹಾಗಾಗಿ ಎಲ್ಲರಿಗೂ ಸೇರಿದ ಭಾಷೆಯೆಂಬ ಸ್ವತ್ತಿನ ದುರುಪಯೋಗ,ಅತಿಕ್ರಮಣಗಳು ನಡೆಯುತ್ತಿವೆಯೇ ಎನ್ನುವುದನ್ನು ಸುಲಭವಾಗಿ ಗುರುತಿಸಲು ಆಗುವುದಿಲ್ಲ. ನಮಗೆ ಗೊತ್ತಿಲ್ಲದಂತೆ ಎಲ್ಲರಿಗೂ ಸೇರಿದ ಸ್ವತ್ತಿನ ಮೇಲಿನ ಹಿಡಿತ ಕೆಲವರ ಕೈಸೇರಿರಲೂ ಬಹುದು. ಅದು ಹಾಗಾಗಿದೆ ಎನ್ನವುದು ನಮಗೆ ಗೊತ್ತಾಗದೆಯೂ ಇರಬಹುದು.
ಎಲ್ಲರಿಗೂ ಸೇರಿದ ಸ್ವತ್ತುಗಳಾದ ನೆಲ ಮತ್ತು ನೀರು ಈಗ ಎಲ್ಲರಿಗೂ ಸೇರಿದ ಸ್ವತ್ತುಗಳಾಗಿ ಉಳಿದಿಲ್ಲ. ನೆಲ ಮತ್ತು ನೆಲಕ್ಕೆ ಸೇರಿದ ಪ್ರತಿಯೊಂದು ಈಗ ಕೆಲವರ ಕೈಸೇರಿದೆ. ಇಲ್ಲವೆ ಕೆಲವರು ಅದರ ಬಳಕೆ ಹೇಗಾಗ ಬೇಕೆಂದು ತೀರ್ಮಾನಿಸುತ್ತಿದ್ದಾರೆ; ನೀರಿನ ಮಟ್ಟಿಗೂ ಇದೆ ಮಾದರಿ ಹೊಂದುವಂತೆ ತೋರುತ್ತಿದೆ. ಭಾಷೆಯ ನೆಲೆಯಲ್ಲಿಯೂ ಈ ಮಾತು ನಿಜವೇ ಎನ್ನುವುದನ್ನು ಈಗ ನಾವು ಗಮನಿಸಬೇಕಾಗಿದೆ. ಸ್ವತ್ತಿನ ಹಕ್ಕಿನ ಉಲ್ಲಂಘನೆ ಸುಲಭವಾಗಿ ಗುರುತಿಸುವಂತಿರುವ ಕೆಲಲವು ಪ್ರಸಂಗಗಳನ್ನು ಮೊದಲು ನೋಡೋಣ.
ಜಗತ್ತಿನಲ್ಲೆಲ್ಲಾ ಜನ ಸಮುದಾಯಗಳು ತಾವು ಹುಟ್ಟಿದ ನೆಲೆಗಳನ್ನು ತೊರೆದು ಬೇರೆಬೇರೆ ಕಡೆಗಳಿಗೆ ಹೋಗಿ ಬದುಕಿನ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ನೆಲದ ಮೇಲಿನ ಹಕ್ಕು ಯಾರಿಗೆ ಸೇರಿದ್ದು ಎಂಬ ಬಗೆಗೆ ಈಗಾಗಲೇ ಒಪ್ಪಿಕೊಂಡಿರುವ ವಿಭಜಬೆಯ ನೆಲೆಯಲ್ಲಿ ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ವಲಸೆಗಳೆಂದು ಕರೆಯುವುದು ರೂಢಿಯಲ್ಲಿದೆ. ಹೀಗೆ ವಲಸೆ ಹೋದವರಿಗೆ ಮೂಲ ನಿವಾಸಿಗಳಿಗೆ ಒದಗುವ ಎಲ್ಲ ಹಕ್ಕುಗಳೂ ದೊರಕುವುದಿಲ್ಲ. ಇದು ಭಾಷೆಯ ಮಟ್ಟಿಗೂ ನಿಜ. ವಲಸೆ ಬಂದವರು ತಮ್ಮ ಸ್ವತ್ತಾದ ಭಾಷೆಯನ್ನು ಹೇಗೆ ಬಳಸಬೇಕು ಇಲ್ಲವೇ ಅದನ್ನು ಬಳಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವವರು ಸ್ವತಃ ಅವರಲ್ಲ. ಅವರು ವಲಸೆ ನಿಂತ ನಾಡಿನ ಕೆಲವರು. ಹೀಗೆ ಮಾಡುವಾಗ ವಲಸೆ ಸಮುದಾಯಗಳು ತಮ್ಮ ಭಾಷೆಯ ಮೇಲಿನ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಬೇರೊಂದು ಭಾಷೆಯನ್ನು ಬಳಸುವವರಾಗಬೇಕಾಗುತ್ತದೆ. ಆ ಭಾಷೆಯನ್ನು ಅವರು ಬಳಸುತ್ತಿದ್ದರೂ ಅದರ ಹಕ್ಕುದಾರಿಕೆಯಲ್ಲಿ ಅವರಿಗೆ ಪಾಲಿರುವುದಿಲ್ಲ. ಟರ್ಕಿ,ಇರಾಕ್ ಮತ್ತು ಇರಾನ್ ನಾಡುಗಳ ನಡುವೆ ಇರುವ ಗುಡ್ಡಗಾಡು ಪ್ರದೇಶದಲ್ಲಿ ಕುರ್ದ್ ಎಂಬ ಸಮುದಾಯವಿದೆ. ಇವರು ಆಡುವ ಕುರ್ದಿಶ್ ಭಾಷೆಯು ಅವರ ಸ್ವತ್ತಾಗಿ ಇರಬೇಕೋ ಇಲ್ಲವೇ ಅವರು ಅದನ್ನು ಬಿಟ್ಟುಕೊಟ್ಟು ಟರ್ಕಿಶ್,ಪರ್ಶಿಯನ್ ಇಲ್ಲವೇ ಇರಾಕಿಗಳಿಗೆ ಒಗ್ಗಿಕೊಳ್ಳಬೇಕೋ ಎಂಬುದು ಹಲವು ದಶಕಗಳ ಹೋರಾಟದ ಸಂಗತಿಯಾಗಿದೆ. ಹೀಗೆಯೇ ನೂರಾರು ಕಡೆಗಳಲ್ಲಿ ವಲಸೆ ಸಮುದಾಯಗಳು ತಮ್ಮ ಭಾಷೆಯೆಂಬ ಸ್ವತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿವೆ.ಅಮೇರಿಕಾ ದೇಶದಲ್ಲಿ ರೆಡ್ ಇಂಡಿಯನ್ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಂಡದ್ದು ಒಂದು ಕತೆಯಾದರೆ ಈಗ ಆ ನಾಡಿನಲ್ಲಿ ಇರುವ ದೊಡ್ಡ ವಲಸೆ ಸಮುದಾಯ ಸ್ಪಾನಿಶ್ ಮಾತಾಡುವವರದಾಗಿದ್ದು ಅವರು ತಮ್ಮ ನುಡಿಯನ್ನು ಕಾಯ್ದುಕೊಳ್ಳಲು ಎಚ್ಚರದ ಹೆಜ್ಜೆಗಳನ್ನು ಇರಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಮಾನವ ಹಕ್ಕುಗಳ ಪಟ್ಟಿಯಲ್ಲಿ ಭಾಷೆಯೆಂಬ ಸ್ವತ್ತಿನ ಹಕ್ಕನ್ನೂ ಕೂಡ ಈಗ ಸೇರಿಸಲಾಗಿದೆಯಾದರೂ ಅದನ್ನು ಉಳಿಸಿಕೊಳ್ಳಲು ದೊಡ್ಡದೊಡ್ಡ ಹೋರಾಟಗಳು ನಡೆಯುವುದು ಅನುವಾರ್ಯವಾಗುತ್ತಿದೆ.
ಇದು ಒಂದು ನೆಲೆ. ಇನ್ನೊಂದು ನೆಲೆ ಬೇರೆಯದೇ ಬಗೆಯದ್ದು. ಇಲ್ಲಿ ಒಂದೇ ಭಾಷೆಯನ್ನಾಡುವ ಜನ ಸಮುದಾಯದಲ್ಲಿ ಆ ಭಾಷೆ ಯಾರ ಸ್ವತ್ತು ಎಂಬುದನ್ನು ಗೊತ್ತು ಮಾಡುವುದು ಕಷ್ಟವಾಗುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಭಾಷೆಯ ಸಂಪನ್ಮೂಲಗಳ ಸ್ವರೂಪವನ್ನು ನಿರ್ಧರಿಸುವಲ್ಲಿ ,ಅದರ ಬಳಕೆಯ ಮಾದರಿಗಳ ಚೌಕಟ್ಟುಗಳನ್ನು ರೂಪಿಸುವಲ್ಲಿ ಕೆಲವರು ಮಾತ್ರ ನಿರ್ಣಯಗಳನ್ನು ಮಾಡುವವರಾಗಿದ್ದು ಉಳಿದೆಲ್ಲ ಜನರೂ ಆ ನಿರ್ದೇಶನಗಳನ್ನು ಮತ್ತು ಮಾದರಿಗಳನ್ನು ಅನುಸರಿಸುವ ಇಕ್ಕಟ್ಟು ರೂಪುಗೊಳ್ಳುತ್ತದೆ. ಈ ನಿರ್ದೇಶನಗಳನ್ನು ಮೀರಿದ ಭಾಷಾ ಬಳಕೆಗೆ ಅಧಿಕೃತ ಮನ್ನಣೆ ದೊರೆಯುವುದಿಲ್ಲ; ಅದನ್ನು ಅಂಚಿನ ಬಳಕೆಯೆಂದು,ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲವೆಂದು ತೀರ್ಮಾನಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾಷೆ ಎಲ್ಲರ ಸ್ವತ್ತು ಎನ್ನುವ ತಿಳುವಳಿಕೆಗೆ ಯಾವ ಬೆಲೆಯೂ ಇಲ್ಲವಾಗುತ್ತದೆ.
ಈ ಬಗೆಯ ನಿರ್ದೇಶನಗಳನ್ನು ಕೊಡುವವರು ತಮ್ಮ ಕ್ರಮವನ್ನು ಸರಿಯೆಂದು ಒಪ್ಪಿಸಲು ತಕ್ಕ ಕಾರಣಗಳನ್ನು ಮುಂದೊಡ್ಡುತ್ತಾರೆ. ಭಾಷೆ ಎಲ್ಲರ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಕೂಡ ಎಲ್ಲರಿಗೂ ’ಅನುಕೂಲ’ವಾಗುವಂತೆ ಇರಬೇಕು ಎನ್ನುವುದು ಒಂದು ಕಾರಣ. ಎಲ್ಲರಿಗೂ ಸಮಾನವಾದ ರೂಪವೊಂದನ್ನು ಮುಂದಿಡುವ ಮೂಲಕ ಮತ್ತು ಅದನ್ನು ಬಳಸಲು ಕಲಿಸಿಕೊಡುವ ಮೂಲಕ ಭಾಷೆಯನ್ನು ಆಡುವವರ ನಡುವೆ ಇರುವ ’ಅಸಮಾನತೆ’ಗಳನ್ನು ನಿವಾರಿಸುವ ದಾರಿಯಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಂತಾಯಿತು ಎನ್ನುವುದು ಇನ್ನೊಂದು ಕಾರಣ. ಆದರೆ ಈ ಈ ಕಾರಣಗಳ ಹಿಂದೆ ಇರುವ ತರ್ಕವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಬಳಕೆಗೆ ಎಲ್ಲರಿಗೂ ಅನುಕೂಲವಾಗಿಸುವುದು ಮತ್ತು ಅಸಮಾನತೆಯನ್ನು ತೆಗೆದು ಹಾಕುವುದು ಎಂಬುದು ಪರುವದ ಊಟವನ್ನು ತಯಾರಿಸಿದಂತಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಾಗ ತಯಾರಿಸುವ ಅಡುಗೆಯಂತಲ್ಲ. ಭಾಷೆಯು ಎಲ್ಲರಿಗೂ ಸೇರಿದ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಅವರವರ ಅಗತ್ಯಕ್ಕೆ ತಕ್ಕಂತೆ ಬೇರೆಬೇರೆಯಾಗಿರುವುದೇ ಹೆಚ್ಚು ಸಹಜವಾದುದು. ಇದು ಎಲ್ಲರಿಗೂ ತಿಳಿಯಲಾರದೆಂಬ ಕಾರಣವನ್ನು ಮುಂದೊಡ್ಡಿ ಎಲ್ಲರಿಗೂ ತಿಳಿಯುವ ಮಾದರಿಯೊಂದಿದೆ ಎನ್ನುವ ಭ್ರಮೆಯೊಂದನ್ನು ಹುಟ್ಟಿ ಹಾಕಲಾಗುತ್ತದೆ. ಭಿನ್ನತೆಯಲ್ಲಿ ಅಡ್ಡಿಗಳಿಲ್ಲ;ಆದರೆ ಆ ಭಿನ್ನತೆಗಳು ತರತಮದ ನೆಲೆಗಳಾಗಿ ಬದಲಾದಾಗ ಮಾತ್ರ ಅಡ್ಡಿಗಳು ಹುಟ್ಟಿಕೊಳ್ಳುತ್ತವೆ. ಅಂದರೆ ಬಹುತ್ವವೆನ್ನುವುದರಲ್ಲಿ ತೊಂದರೆಯಿಲ್ಲ. ಬಹುತ್ವದ ನಿರ್ವಹಣೆಯ ತಂತ್ರಗಳನ್ನು ಸಮುದಾಯಕ್ಕೆ ಒದಗಿಸಿಕೊಡಬೇಕಾಗುತ್ತದೆ.
ಇದಲ್ಲದೆ ಇಂದೇ ಸಮುದಾಯ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ತನ್ನ ಸ್ವತ್ತುಗಳನ್ನಾಗಿ ಪಡೆದಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಇಲ್ಲಿಯೂ ಆಯಾ ಭಾಷೆಗಳನ್ನು ಆಡುವ ಕೆಲವರ ನಿರ್ಧಾರಗಳು ಮೇಲುಗೈ ಪಡೆದು ಸ್ವತ್ತಿನ ಜಂಟಿ ನಿರ್ವಹಣೆಗೆ ಹೊರಗಿನಿಂದ ನಿರ್ದೇಶನಗಳನ್ನು ನೀಡುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ. ಇದು ಇನ್ನೂ ಹೆಚ್ಚಿನ ಗೊಂದಲಕ್ಕೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಭಾಷೆಯು ಇತರ ನೈಸರ್ಗಿಕ ಮತ್ತು ನಿಸರ್ಗನೀಡಿದ ಸಾಮುದಾಯಿಕ ಹಕ್ಕಿನ ಸ್ವತ್ತು ಎನ್ನುವಾದದರೆ ಅದರ ಮೇಲಿನ ಸ್ವಾಮ್ಯ ಎಲ್ಲರಿಗೂ ಇರಬೇಕೆಂಬ ನಿಟ್ಟಿನಲ್ಲಿ ನಾವೀಗ ಭಾಷಾನೀತಿ ಮತ್ತು ಭಾಷಾ ಯೋಜನೆಗಳನ್ನು ರೂಪಿಸಬೇಕಾದ ದಿನಗಳು ಬಂದಿವೆ.
Tuesday, August 26, 2008
Subscribe to:
Posts (Atom)