Wednesday, June 25, 2008

ನೆನಪುಮರವಿನ ಕಣ್ಣುಮುಚ್ಚಾಲೆಯಾಟ

ನೆನಪು ಮರೆವಿನ ಕಣ್ಣುಮುಚ್ಚಾಲೆಯಾಟ

ಹಾಳು ಮರೆವು ಎಂದು ಗೊಣಗದವರಿಲ್ಲ. ಮರೆವಿನ ನೆರವು ಪಡೆದು ತಮ್ಮ ಅರೆಕೊರೆಗಳನ್ನು ಮುಚ್ಚಿಟ್ಟುಕೊಳ್ಳುವುದು ಎಲ್ಲರೂ ಆಡುವ ಆಟವೇ ಸರಿ. ಹಾಗೆಯೇ ನೆನಪು ಚೆನ್ನಾಗಿರುವವರು ನಮ್ಮ ಮೆಚ್ಚುಗೆಯನ್ನು ಪಡೆಯುತ್ತಾರೆ.;ಜಾಣರೆಂದೆನಿಕೊಳ್ಳುತ್ತಾರೆ. ಈ ನೆನಪು ಮರೆವಿನ ಕಣ್ಣುಮುಚ್ಚಾಲೆಯಲ್ಲಿ ಭಾಷೆಗೇನಾದರೂ ಜಾಗವಿದೆಯೇ ಎನ್ನುವುದನ್ನು ಈಗ ನೋಡೋಣ. ನಮಗೆ ಒಬ್ಬರು ಚೆನ್ನಾಗಿ ಗೊತ್ತು ಎಂದಿಟ್ಟುಕೊಳ್ಳಿ. ಕೆಲಕಾಲ ನಮ್ಮ ಕಣ್ಣಿಗೆ ಬೀಳದಿದ್ದರೆ ಅವರನ್ನು ನಾವು ಮರೆಯುವುದುಂಟು. ಆದರೆ ಈ ಮರೆವಿಗೆ ಎರಡು ನೆಲೆಗಳಿವೆ. ಈಗ ಅವರು ನಮ್ಮ ಕಣ್ಣೆದುರಿಗೆ ಬಂದರೆ ಅವರು ನಮಗೆ ಗೊತ್ತಿರುವವರು ಎನಿಸಿದರೂ ಅವರ ಹೆಸರು ನಮ್ಮ ನೆನಪಿಗೆ ಬಾರದೇ ಹೋಗಬಹುದು. ಮತ್ತೆ ಕೆಲವೊಮ್ಮೆ ಅವರ ಹೆಸರು ನಮ್ಮ ನೆನಪಿನಲ್ಲಿ ಉಳಿದಿದ್ದರೂ ಅವರೇ ಎದುರಿಗೆ ಬಂದು ನಿಂತರೂ ನಾವು ಅವರನ್ನು ಗುರುತಿಸಿದೇ ಹೋಗಬಹುದು. ಇವೆಲ್ಲವೂ ನಮ್ಮೆಲ್ಲರಿಗೂ ಆಗಿರುವ ಅನುಭವಗಳೇ ಸರಿ. ಈ ಎರಡು ಬಗೆಯ ಮರೆವನ್ನು ಭಾಷೆಯ ನೆರವಿನಿಂದ ಅರಿತುಕೊಳ್ಳೋಣ. ಒಂದು ಪದಕ್ಕೆ ದನಿಯ ನೆಲೆ ಇರುವಂತೆ ತಿರುಳಿನ ನೆಲೆಯೂ ಇರುವುದಷ್ಟೆ. ಬಲ್ಲವರು ಈ ಎರಡು ನೆಲೆಗಳನ್ನು ಪದ-ಪದಾರ್ಥಗಳ ನೆಲೆ ಎಂದಿದ್ದಾರೆ. ದನಿ ಮತ್ತು ತಿರುಳುಗಳೆರಡೂ ನಮಗೆ ಗೊತ್ತಿದ್ದರೆ ಆ ಪದವನ್ನು ಬಳಸಬಹುದು. ಇವೆರಡರಲ್ಲಿ ಯಾವುದೊಂದನ್ನು ಮರೆತರೂ ನಾವು ಗೊಂದಲಕ್ಕೆ ಒಳಗಾಗುತ್ತೇವೆ.;ಎರಡನ್ನೂ ಮರೆತರಂತೂ ನಮ್ಮ ಪಾಡು ಇನ್ನಷ್ಟು ಇಕ್ಕಟ್ಟಿಗೆ ಸಿಕ್ಕುವುದು. ನಾವು ನೆನಪಿಟ್ಟುಕೊಳ್ಳುವ ಬಗೆಯಲ್ಲೂ ಈ ಎರಡು ನೆಲೆಗಳಿರುವಂತೆ ತೋರುತ್ತದೆ. ನೆನಪಿನ ’ದನಿಯ’ನೆಲೆ ಒಂದು; ನೆನಪಿನ ತಿರುಳಿನ ನೆಲೆ ಇನ್ನೊಂದು. ’ದನಿ’ ಯ ನೆಲೆ ಮರೆತರೆ ಏನೋ ಮರೆತಂತೆ ಅನ್ನಿಸುತ್ತದೆ. ಆದರೆ ಏನು ಮರೆತೆವೆಂದು ಹೇಳಲಾರೆವು. ’ತಿರುಳಿನ’ ನೆಲೆ ಮರೆತರೆ ಬೇರೇನೋ ನೆನಪಿಗೆ ಬರುತ್ತದೆಯಾದರೂ ಬೇಕಾದ್ದು ನೆನಪಿಗೆ ಬರುವುದಿಲ್ಲ.ಒಮ್ಮೆ ಕಲಿತ ಹಾಡೊಂದನ್ನು ಈಗ ನೆನೆದುಕೊಳ್ಳಿ. ಸರಿಯಾಗಿ ಹೇಳಲು ಬಂದರೆ ಸರಿ. ಮರೆತಿದ್ದರೆ ಏನಾಗುವುದೆಂದು ನೋಡಿ. ಆ ಹಾಡಿನ ಧಾಟಿ ಮರೆತಿದ್ದರೆ ಅದರ ಪದಗಳನ್ನು ನೆನಪಿಟ್ಟುಕೊಂಡಿದ್ದರೂ ಹಾಡಲಾಗುವುದಿಲ್ಲ. ಧಾಟಿ ನೆನಪಿದ್ದು ಪದಗಳು ಮರೆತಿದ್ದರೆ ನಾವು ಹಾಡನ್ನು ಗುನುಗ ತೊಡಗುತ್ತೇವೆ. ಸಾಲುಗಟ್ಟಲೆ ಗುನುಗಿಯೇ ಹಾಡಿ ಮುಗಿಸುತ್ತೇವೆ. ಮೊದಲನೆಯದು ’ದನಿ’ ಯ ನೆಲೆಯ ಮರೆವು;ಎರಡನೆಯದು ’ತಿರುಳಿನ’ನೆಲೆಯ ಮರೆವು.

ಸರಿ. ಹೀಗೇಕಾಗುತ್ತದೆ? ಹಿಂದೆ ಈ ಅಂಕಣದಲ್ಲಿ ಬರೆದಿದ್ದ ಒಂದು ಮಾತನ್ನು ಮರೆತಿದ್ದರೆ ನೆನಪು ಮಾಡಿಕೊಳ್ಳಿ. ನಮ್ಮ ಮೆದುಳಿನಲ್ಲಿ ದನಿ ಮತ್ತು ತಿರುಳನ್ನು ಕೂಡಿಟ್ಟುಕೊಳ್ಳುವ ಮತ್ತು ಮರಳಿ ನಮ್ಮ ಬಳಕೆಗೆ ಒದಗಿಸುವ ತಾಣಗಳು ಬೇರೆಬೇರೆಯಾಗಿವೆ. ದನಿಯ ನೆಲೆಯು ಬ್ರಾಕಾನ ತಾಣದಲ್ಲಿದ್ದರೆ ತಿರುಳಿನ ನೆಲೆಯು ವರ್ನಿಕೆಯ ತಾಣದಲ್ಲಿರುತ್ತದೆ. ಇವೆರಡಲ್ಲಿ ಯಾವೊಂದು ತಾಣಕ್ಕೆ ತೊಂದರೆಯಾದರೂ ಮಾತು ಕಟ್ಟುತ್ತದೆ. ಅಂದರೆ ನೆನಪು ಕುಗ್ಗುತ್ತದೆ. ಬ್ರಾಕಾನ ತಾಣಕ್ಕೆ ತೊಂದರೆಯಾದರೆ ಏನನ್ನೋ ಹೇಳಬೇಕೆಂದರೂ ಹೇಳಲು ತಕ್ಕ ಪದಗಳು ದಕ್ಕುವುದಿಲ್ಲ. ಏಕೆಂದರೆ ಆ ಪದಗಳನ್ನು ದನಿಯ ನೆಲೆಗೆ ಒಯ್ಯುಲು ನಮಗೆ ಆಗುವುದಿಲ್ಲ. ಹಾಗೆಯೇ ವರ್ನಿಕೆಯ ತಾಣಕ್ಕೆ ತೊಂದರೆಯಾದರೆ ಏನು ಹೇಳಬೇಕೆಂದಿರುತ್ತೇವೋ ಅದನ್ನು ಹೇಳಲಾಗದೆ ಬೇರೆ ಏನನ್ನೋ ಹೇಳುತ್ತಿರುತ್ತೇವೆ. ಮರ ಎನ್ನುವ ಬದಲು ಹಕ್ಕಿ,ಹಣ್ಣು, ಎಲೆ, ದೆವ್ವ ಹೀಗೆ ಏನನ್ನಾದರೂ ( ಆದರೂ ಮರದೊಡನೆ ನಂಟಿರುವ ಯಾವುದೋ ಪದವನ್ನು) ಹೇಳಬಹುದು. ನೆನಪುಗಳೆಲ್ಲವೂ ಭಾಷೆಯೊಡನೆ ನಂಟನ್ನು ಪಡೆದಿರುತ್ತವೆಂದು ಹೇಳಲಾಗದು. ಆದರೂ ನೆನಪಿನ ಕಟ್ಟೋಣಕ್ಕೂ ಭಾಷೆಯ ಕಟ್ಟೋಣಕ್ಕೂ ಹೊಂದಾಣಿಕೆ ಇದೆ ಎನ್ನುವುದಂತೂ ದಿಟ. ಅಂದರೆ ಭಾಷೆಯಲ್ಲಿ ಇರುವ ಎರಡು ನೆಲೆಗಳಂತೆ ನೆನಪಿಗೂ ಎರಡು ನೆಲೆಗಳಿರುತ್ತವೆ ಎಂದಾಯ್ತು.

ನೆನಪಿಟ್ಟುಕೊಳ್ಳುವುದು ಎಂದರೇನು? ಬೇಕಾದಾಗ,ಬೇಕಾದ್ದು ಬೇಕಾದಷ್ಟು ನಮ್ಮ ಎಚ್ಚರದ ನೆಲೆಗೆ ಬಂದರೆ ಅದನ್ನು ನೆನಪು ಎನ್ನುತ್ತೇವೆ ತಾನೆ? ಹೀಗೆ ನೆನಪಿಟ್ಟುಕೊಳ್ಳುವವರ ಬಗೆಗಳನ್ನು ಗಮನಿಸಿ. ಕೆಲವರು ಮಾತಾಡುವಾಗ ಯಾವುದೋ ಗಾದೆ ಮಾತನ್ನು ಹೇಳಬೇಕೆಂದು ಬಯಸುತ್ತಾರೆ. ಆದರೆ ಆ ಗಾದೆ ನೆನಪಿಗೆ ಬರುವುದಿಲ್ಲ. ಅದರ ಬದಲಿಗೆ ’ಅದೇನೋ ಅಂತಾರಲ್ಲ ಹಾಗಾಯ್ತು ನಿನ್ನ ಕತೆ’ ಎಂದು ಬಿಡುತ್ತಾರೆ. ಇವರು ಪದವನ್ನು ಮರೆತು ಹಾಡು ಗುನುಗುವ ಬಗೆಯವರು. ಮತ್ತೆ ಕೆಲವರು ಗಂಟೆಗಟ್ಟಲೆ ಒಂದು ಕತೆಯನ್ನು ಹಾಡಿನಲ್ಲಿ ಹೇಳುವವರಿದ್ದಾರೆಂದು ಕೊಳ್ಳಿ. ಇವರು ಎಂದೋ ಯಾರೋ ಹೇಳಿದ ಹಾಡನ್ನು ’ಕಲಿತು’ ತಾವೂ ಹೇಳ ತೊಡಗಿದವರು. ಮತ್ತೆ ಮತ್ತೆ ಅದೇ ಹಾಡನ್ನು ಹೇಳಬಲ್ಲರು. ಇಂತವರು ಆ ಹಾಡನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆಂಬುದು ಒಂದು ಸೋಜಿಗ. ಕೆಲವರು ಹೇಳುವಂತೆ ಆ ಹಾಡಿನಲ್ಲಿ ಮತ್ತೆ ಮತ್ತೆ ಬರುವ ಕೆಲವು ಮಾತುಗಳಿರುತ್ತವೆ; ಹಾಗೆಯೇ ಅದರ ಓಟವನ್ನು ಕಟ್ಟಿಕೊಡುವ ಧಾಟಿಯೊಂದಿರುತ್ತದೆ. ಆ ಧಾಟಿ ಕೂಡ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಈ ಎರಡೂ ನೆಲೆಗಳು ಆ ನೀಳವಾದ ಹಾಡನ್ನು ಮರೆಯದಂತೆ ನೆನಪಿಟ್ಟುಕೊಳ್ಳಲು ಆ ಹಾಡುಗಾರರಿಗೆ ನೆರವಾಗುತ್ತವೆ. (ಚಿಕ್ಕವರಿದ್ದಾಗ ನಮಗೆ’ಕಲಿಸಿದ’/ ನಾವು ’ ಕಲಿತ’ ಮಕ್ಕಳ ಹಾಡುಗಳನ್ನು ಈಗ ಒಮ್ಮೆ ನೆನಪು ಮಾಡಿಕೊಂಡರೆ ಈ ಮೇಲೆ ಹೇಳಿದ್ದು ಇನ್ನಷು ಚೆನ್ನಾಗಿ ಗೊತ್ತಾಗುತ್ತದೆ.)

ಮರೆಯದೇ ಇರಬೇಕೆಂದು ನಾವೆಲ್ಲರೂ ಬಯಸುವವರು. ’ ನಾನು ಹೇಳಿದ್ದನ್ನು ಸೆರಗಿಗೆ ಗಂಟು ಹಾಕಿಟ್ಟುಕೋ, ಮರೀಬೇಡ’ ಎನ್ನುವವರುಂಟು. ’ಆಗಿದ್ದನ್ನೆಲ್ಲ ಕಂಕುಳಲ್ಲಿರಿಸಿಕೊಂಡಿದ್ದೇನೆ, ಮರೆತೇನೆಯೇ’ ಎಂದು ಮತ್ತೆ ಕೆಲವರು ಹೇಳುತ್ತಾರೆ. ನೆನಪಿಟ್ಟುಕೊಳ್ಳುವುದಕ್ಕೂ ಅವರು ಹೇಳುತ್ತಿರುವ ಕೆಲಸಕ್ಕೂ ಏನೂ ನಂಟಿಲ್ಲ. ಆದರೂ ಹೀಗೆ ಹೇಳುವುದೇಕೆ? ಸೆರಗಿನ ಗಂಟನ್ನು ನೋಡಿದಾಗ ಏನನ್ನೋ ನೆನಪಿಸಿಕೊಳ್ಳಬೇಕೆಂದು ಅನಿಸುತ್ತದೆ; ಆಗ ಅದನ್ನು ನೆನಪಿಸಿಕೊಳ್ಳುತ್ತೇವೆ ಎನ್ನಬಹುದೇ? ಅದೇನೋ ಸರಿ. ಆದರೆ ಏನೋ ನೆನಪಿಟ್ಟುಕೊಳ್ಳ ಬೇಕಿತ್ತು ಎನ್ನುವುದಷ್ಟೆ ನೆನಪಿಗೆ ಬಂದು ಏನು ನೆನಪಿಸಿಕೊಳ್ಳಬೇಕೋ ಅದೇ ಮರೆತು ಹೋದರೇನು ಮಾಡುವುದು? ಮನೆಗೆ ಬರುವಾಗ ಅಂಗಡಿಯಿಂದ ಏನನ್ನೋ ತರಲು ಮನೆಯಲ್ಲಿ ಹೇಳಿದ್ದಾರೆಂದುಕೊಳ್ಳಿ. ಹಿಂದಿರುಗಿ ಬರುವಾಗ ಅಂಗಡಿ ಕಣ್ಣಿಗೆ ಬೀಳುತ್ತದೆ. ಏನನ್ನೋ ಇಲ್ಲಿಂದ ತೆಗೆದುಕೊಂಡು ಹೋಗಬೇಕಿದೆ ಎನ್ನುವುದು ನೆನಪಿಗೆ ಬರುತ್ತದೆ. ಆದರೆ ಏನದು ಎಂಬುದು ನೆನಪಿಗೆ ಬರುವುದಿಲ್ಲ. ಇದನ್ನು ನೆನಪು ಎನ್ನಬೇಕೋ ಮರೆವು ಎನ್ನಬೇಕೋ?

ಭಾಷೆಯ ನೆಲೆಯ ನೆನಪುಗಳು ಹೇಗೆ ನೆಲೆಗೊಂಡಿರುತ್ತವೆ ಎನ್ನುವುದನ್ನು ತಿಳಿಯಲು ಹಲವರು ಮುಂದಾಗಿದ್ದಾರೆ; ಆ ದಿಕ್ಕಿನಲ್ಲಿ ತುಂಬ ಕೆಲಸಗಳನ್ನು ಮಾಡಿದ್ದಾರೆ. ಅವರ ತಿಳುವಳಿಕೆಯನ್ನು ಈಗ ಕೊಂಚ ಗೊತ್ತು ಮಾಡಿಕೊಳ್ಳೋಣ. ನಾವು ಒಂದು ಪದವನ್ನು ನೆನಪಿನಲ್ಲಿರಿಸಿಕೊಳ್ಳಲು ಇಲ್ಲವೇ ಅದನ್ನು ನೆನಪು ಮಾಡಿಕೊಳ್ಳಲು ಎರಡು ದಾರಿಗಳನ್ನು ಹಿಡಿಯಬಹುದು. ಒಂದು: ಆ ಪದದ ದನಿಯ ಹೋಲಿಕೆ ಇರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಎರಡು; ಆ ಪದದ ತಿರುಳಿನೊಡನೆ ನಂಟಿರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಕವಿಗಳು ತಮ್ಮ ಕವಿತೆಗಳಲ್ಲಿ ಪದಗಳನ್ನು ಜೋಡಿಸುವಾಗ ಈ ಎರಡೂ ಹಾದಿಗಳನ್ನು ಹಿಡಿಯುತ್ತಾರೆ. ’ಯಾರಾಗ ಹಾಡಿದರೂ ಯಾರಾಗ ಕೇಳುವರು’ ’ಗಿಡಗಂಟಿಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಈ ಎರಡೂ ಸಾಲುಗಳಲ್ಲಿ ಮೊದಲನೆಯದು ಒಂದು ಪದದ ದನಿಯ ನೆಲೆಯ ನಂಟನ್ನು ಹೊಂದಿರುವ ಇನ್ನೊಂದು ಪದವನ್ನು ಜೋಡಿಸಿಟ್ಟುಕೊಂಡಿದೆ. ’ಯಾ(ವ)ರಾಗ ಹಾಡಿದರೂ ಯಾರಾ(ರು,ಆ)ಗ ಕೇಳುವರು.’ ಎರಡನೆಯ ಸಾಲಿನಲ್ಲಿ ತಿರುಳಿನ ನಂಟಿರುವ ಪದವನ್ನು ಬಳಸಿಕೊಳ್ಳಲಾಗಿದೆ.ಗಿಡಗಳ ಕೊರಳು ಅ ಗಿಡದಲ್ಲಿ ಅಡಗಿದ ಹಕ್ಕಿಗಳ ಕೊರಳಾಗಿ ಬಿಡುತ್ತದೆ. ಈ ಸಾಲುಗಳನ್ನು ಇಲ್ಲಿ ಹೇಳಿದ್ದೇಕೆ? ಭಾಷೆಯಲ್ಲಿ ಈ ಹಾದಿಗಳನ್ನು ಹಿಡಿದು ನಾವು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಮರೆಯದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು. ಈ ಎರಡು ಹಾದಿಗಳಲ್ಲಿ ಒಂದು ಹೋಲಿಕೆಯನ್ನು(=ಸಾದೃಶ್ಯವನ್ನು) ನೆಮ್ಮಿದರೆ ಇನ್ನೊಂದು ನಂಟನ್ನು (=ಸಂಬಂಧವನ್ನು) ನೆಮ್ಮುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಕೂಡಿಕೊಂಡ ನೆನಪುಗಳು ಕೂಡ ಹೀಗೆ ಹೋಲಿಕೆ ಮತ್ತು ನಂಟನ್ನು ನೆಮ್ಮಿಕೊಂಡಿರುತ್ತವೆ. ಇಲ್ಲಿರುವ ನೂರಾರು ಆಚರಣೆಗಳು, ಕತೆಗಳು, ಹಾಡುಗಳು ಹೀಗೆ ನೆನಪಿಗೆ ನೆರವಾಗುವ ಮೀಟುಗೋಲಾಗುವ ಬಯಕೆಯನ್ನು ಹೊಂದಿರುತ್ತವೆ. ಆದರೆ ಅವೆಲ್ಲವೂ ದಿನಕಳೆದಂತೆ ಹೀಗೆ ನೆನಪಿಗೆ ತಂದುಕೊಡಬಲ್ಲ ನೆಲೆಯನ್ನು ಕಾಯ್ದುಕೊಳ್ಳುತ್ತವೋ ಇಲ್ಲವೇ ಅದನ್ನು ಕಳೆದುಕೊಳ್ಳುತ್ತವೋ ಎನ್ನುವುದು ಬೇರೆಯ ಮಾತು. ನೆನಪು ಮರೆವಿನ ಕಣ್ಣು ಮಚ್ಚಾಲೆಯಾಟ ಒಬ್ಬೊಬ್ಬರ ಮಟ್ಟಿಗೆ ಎಷ್ಟು ದಿಟವೋ ಇಡೀ ಸಮುದಾಯಕ್ಕೂ ಅಷ್ಟೇ ದಿಟ.

Monday, February 26, 2007

ಯಾವ ಭಾಷೆಯ ಮೂಲಕ ಕಲಿಯಬೇಕು?

ಮಕ್ಕಳು ಯಾವ ಭಾಷೆಯ ಮೂಲಕ ಚೆನ್ನಾಗಿ ಕಲಿಯುತ್ತಾರೆ ಎನ್ನುವ ವಿಷಯವನ್ನು ಕುರಿತು ವಾದವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಎರಡು ಪಕ್ಷಗಳಿವೆ. ಒಂದು ಪಕ್ಷದವರು ಕನ್ನಡ ಪರವಾದವರು;ಇನ್ನೊಂದು ಪಕ್ಷದವರನ್ನು ಮೊದಲ ಪಕ್ಷದವರು ಕನ್ನಡ ವಿರೋಧಿಗಳು ಎಂದು ಗುರುತಿಸುತ್ತಾರೆ. ಕನ್ನಡ ಪರವಾದ ವಾದಿಗಳು ಮಕ್ಕಳಿಗೆ ಕನ್ನಡದ ಮೂಲಕ ಕಲಿಸುವುದು ಸರಿಯಾದ ಬಗೆಯೆಂದು ವಾದಿಸುತ್ತಾರೆ. ತಮ್ಮ ವಾದದ ಸಮರ್ಥನೆಗೆ ಎರದು ದಾರಿಗಳನ್ನು ಅವರು ಹಿಡಿಯುತ್ತಾರೆ. ಮೊದಲನೆಯದು ಭಾವನಾತ್ಮಕವಾದುದು. ಮಗುವಿಗೆ ಪರಿಚಿತವಾದ ಮೊದಲ ನುಡಿಯಲ್ಲೇ ಕಲಿಕೆ ನಡೆಯುವುದು ಹೆಚ್ಚು ಸರಿಯೆಂದೂ ಅದಿನ್ನೂ ಕಲಿತಿಲ್ಲದ ಬೇರೆ ಭಾಷೆಯ ಮೂಲಕ ಕಲಿಸುವುದರಿಂದ ಕಲಿಕೆ ಎನ್ನುವುದು ಹಿಂಸೆಯಾಗುತ್ತದೆಂದು ಹೇಳುತ್ತಾರೆ. ಇದಲ್ಲದೆ ಇನ್ನೊಂದು ಅಪಾಯದ ಸೂಚನೆಯನ್ನೂ ನೀಡುತ್ತಾರೆ. ಹೀಗೆ ಮಗುವಿಗೆ ಕನ್ನಡವಲ್ಲದ ಇನ್ನೊಂದು ಭಾಷೆಯ ಮೂಲಕ ಕಲಿಸುವುದರಿಂದ ಮಗು ಭಾವನಾತ್ಮಕವಾಗಿ ತನ್ನ ನುಡಿಯ ಪರಿಸರದಿಂದ ಹೊರಗುಳಿಯುತ್ತದೆಂದೂ ಹೀಗೆ ಹೊರಗುಳಿಯುವ ಮಕ್ಕಳು ಕನ್ನಡ ಸಂಸ್ಕೃತಿಗೆ ಅನ್ಯರಾಗುತ್ತಾರೆಂದು ಹೇಳುತ್ತಾರೆ. ಅವರ ವಾದದ ಇನ್ನೊಂದು ದಾರಿ ಕಲಿಕೆಯ ತಾತ್ವಿಕ ನೆಲೆಗಳಿಂದ ರೂಪಿತವಾದದ್ದು. ಪರಿಚಿತವಾದ್ದರಿಂದ ಅಪರಿಚಿತವಾದದ್ದರ ಕಡೆಗೆ ಕಲಿಕೆಯು ನಮ್ಮನ್ನು ಒಯ್ಯುವುದು ಎಂದು ನಂಬುವುದಾದರೆ ಮಗುವಿನ ಮೊದಲ ಭಾಷೆಯಲ್ಲೇ ಅದರ ಕಲಿಕೆ ನಡೆಯ ಬೇಕೆಂದು ಒಪ್ಪಲೇ ಬೇಕಾಗುತ್ತದೆಂದು ಈ ವಾದದ ತಿರುಳು.ಭಾರತದ ಸಂದರ್ಭದಲ್ಲಿ ಗಾಂಧಿ,ರವೀಂದ್ರನಾಥ ಟಾಗೋರರನ್ನು ಈ ವಾದದ ಸಮರ್ಥನೆಗಾಗಿ ಉಲ್ಲೇಖಿಸಲಾಗುತ್ತದೆ.

ಕನ್ನಡದ ಮೂಲಕವಲ್ಲದೆ ಬೇರೆ ಯಾವ ಭಾಷೆಗಳ ಮೂಲಕ ಕರ್ನಾಟಕದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ? ಸಾಮಾನ್ಯವಾಗಿ ನೆರೆಯ ರಾಜ್ಯಗಳ ಭಾಷೆಗಳಾದ ತಮಿಳು,ತೆಲುಗು,ಮಲೆಯಾಳಮ್,ಮರಾಠಿಗಳ ಜೊತೆಗೆ ಉರ್ದು,ಹಿಂದಿಗಳ ಮೂಲಕವೂ ಸಾಕಷ್ಟು ಮಕ್ಕಳು ತಮ್ಮ ಶಾಲಾಶಿಕ್ಷಣದ ಮೊದಲ ಕೆಲವು ವರ್ಷಗಳ ಅವಧಿಯಲ್ಲಿ ಕಲಿಯುತ್ತಿದ್ದಾರೆ. ಇವೆಲ್ಲದರ ಜೊತೆಗೆ ಇಂಗ್ಲಿಶ್ ಕೂಡ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಶಾಲಾಶಿಕ್ಷಣದ ಅನಂತರದ ಹಂತದಲ್ಲಿ ಇಂಗ್ಲಿಶ್ ಮಾತ್ರ ಅಧಿಕೃತ ಕಲಿಕೆಯ ಮಾಧ್ಯಮವಾಗಿದೆ. ಅನಧಿಕೃತವಾಗಿ ಮಾನವಿಕ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ(ಕನ್ನಡ ವಿಶ್ವವಿದ್ಯಾಲಯವನ್ನು ಹೊರತು ಪಡಿಸಿ) ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಶ್ ಆಗಿದೆಯಾದರೂ ವಿದ್ಯಾರ್ಥಿಗಳು ಬಿ.ಎ, ಎಂ.ಎ ತರಗತಿಳಲ್ಲಿ ಉತ್ತರವನ್ನು ಬರೆಯುವುದಂತೂ ಕನ್ನಡದಲ್ಲೇ ಸರಿ. ಆದರೆ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳಲ್ಲಿ ಇಂಗ್ಲಿಶ್ ಇನ್ನೂ ತನ್ನ ಆಧಿಪತ್ಯವನ್ನು ಉಳಿಸಿಕೊಂಡಿದೆ. ಈ ವಿಷಯಗಳು ಸಾಮಾಜಿಕವಾಗಿ ಪಡೆದುಕೊಂಡಿರುವ ಮನ್ನಣೆಯಿಂದಾಗಿ ಕಲಿಕೆಯ ಮೊದಲ ಹಂತದಿಂದಲೇ ಇಂಗ್ಲಿಶ್ ಭಾಷೆಯನ್ನು ಮಾಧ್ಯಮವನ್ನಾಗಿ ಆಯ್ಕೆಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದು ಸರಿಯೋ ತಪ್ಪೋ ಎಂಬುದು ಈಗ ಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ. ಇಂಗ್ಲಿಶಿನ ಮೂಲಕ ಕಲಿತರೂ ಕನ್ನಡದ ಸಾಹಚರ್ಯವನ್ನು ಮಕ್ಕಳಲ್ಲಿ ಉಳಿಸುವಂತೆ ಮಾಡುವುದು ಹೇಗೆ ಎಂಬುದಷ್ಟೇ ನಮಗೀಗ ಉಳಿದಿರುವ ಆಯ್ಕೆಯೆಂದು ತೋರುತ್ತದೆ.

ಆದರೆ ಮೊದಲ ಭಾಷೆ (ಕೆಲವರು ಹೇಳುವಂತೆ ಮಾತೃ ಭಾಷೆ)ಯ ಮೂಲಕ ಕಲಿಕೆ ನಡೆಯದಿದ್ದರೆ ಅದು ಮಕ್ಕಳಿಗೆ ಹಿಂಸೆಯಾಗುತ್ತದೆ ಎನ್ನುವುದನ್ನು ಸದ್ಯಕ್ಕೆ ಒಪ್ಪಿದರೂ ನಮ್ಮ ಸಮಾಜದ ರಚನೆಯ ಕೆಲವು ಲಕ್ಷಣಗಳ ಹಿನ್ನಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಭಾರತದಲ್ಲಿ ಅಧಿಕೃತವಾಗಿ ೧೬೫೦ ಮಾತೃ ಭಾಷೆಗಳನ್ನಾಡುವ ಜನರಿದ್ದಾರೆ. ಇವುಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಭಾಷೆಗಳ ಸಂಖ್ಯೆ ಐವತ್ತರ ಆಸುಪಾಸಿನಲ್ಲಿವೆ. ಉಳಿದ ಭಾಷೆಗಳ ಮೂಲಕ ಕಲಿಕೆ ನಡೆಸುವುದು ಸಾಧ್ಯವಾಗುತ್ತಿಲ್ಲ. ಹಾಗೆ ಕಲಿಸಲು ಮಾಡಿದ ಪ್ರಯತ್ನಗಳು ಪೂರ್ಣವಾಗಿ ಗೆಲುವನ್ನು ಕಂಡಿಲ್ಲ. ಆ ಭಾಷೆಗಳನ್ನಾಡುವ ಜನರು ತಮ್ಮ ಮಕ್ಕಳಿಗೆ ತಮ್ಮದೇ ಭಾಷೆಯ ಮೂಲಕ ಕಲಿಸುವುದರಿಂದ ಅವರಿಗಿರುವ ಅವಕಾಶಗಳು ಕಡಿಮೆಯಾಗುತ್ತವೆ ಎಂದು ವಾದಿಸುತ್ತಿದ್ದಾರೆ. ಕರ್ನಾಟಕದ ಪರಿಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಬುಡಕಟ್ಟು ಜನರ ಭಾಷೆಗಳಿರಲಿ ಸಾಕಷ್ಟು ಜನರು ಬಳಸುವ 'ಸಾಮಾಜಿಕ' ಭಾಷೆಗಳಾದ ತುಳು,ಕೊಡಗು,ಲಂಬಾಣಿ ಭಾಷೆಗಳ ಮೂಲಕ ಕೂಡ ಕಲಿಕೆಯು ನಡೆಯುತ್ತಿಲ್ಲ.

ಇಂತಹ ಪರಿಸ್ಥಿತಿಯನ್ನು ಮನಗಂಡವರು ಕಲಿಕೆಗೆ ಮೊದಲ ಭಾಷೆಯನ್ನು ಮಾಧ್ಯಮವಾಗಿ ಬಳಸಬೇಕು ಎನ್ನುವ ಬದಲು ಪ್ರಾದೇಶಿಕ ಭಾಷೆಯನ್ನು ಬಳಸಬೇಕು ಎಂಬ ವಾದವನ್ನು ಮಂಡಿಸುತ್ತಾರೆ. ಯುನೆಸ್ಕೋ ಕೂಡ ತನ್ನ ಐವತ್ತರ ದಶಕದ ಖ್ಯಾತ ದಾಖಲೆಯಲ್ಲಿ ಮಾತೃ ಭಾಷೆಯಲ್ಲಿ ಕಲಿಸಬೇಕು ಎಂದು ಹೇಳುವ ಬದಲು ವರ್ನಾಕ್ಯುಲರ್( ದೇಶೀಯ ಎಂದು ಹೇಳೋಣ) ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಬೇಕು ಎಂದು ಹೇಳಿದೆ. ವಸಾಹತು ಆಡಳಿತದಿಂದ ಬಿಡುಗಡೆ ಪಡೆದ ನೂರಾರು ರಾಷ್ಟ್ರಗಳ ಸಂದರ್ಭದಲ್ಲಿ ಯುನೆಸ್ಕೋದ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಇಂಗ್ಲಿಶ್, ಫ್ರೆಂಚ್,ಸ್ಪ್ಯಾನಿಶ್,ಡಚ್,ಪೋರ್‍ಚುಗೀಸ್ ಮುಂತಾದ ವಸಾಹತು ಭಾಷೆಗಳ ಜಾಗದಲ್ಲಿ ದೇಶಿಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಸಲಹೆ ನೀಡಿದ್ದು ಸರಿಯಾಗಿಯೇ ಇದೆ. ಈ ಕಾರಣದಿಂದಾಗಿಯೇ ಕಳೆದ ಶತಮಾನ ಆರು,ಏಳನೆಯ ದಶಕಗಳಲ್ಲಿ ದೇಶೀಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಜಾಗತಿಕವಾಗಿ ಹೆಚ್ಚಿನ ಪ್ರಯತ್ನಗಳು ನಡೆದವು. ಕನ್ನಡದಲ್ಲೂ ಇಂತಹ ಯತ್ನಗಳು ನಡೆದವು.

ಚಾರಿತ್ರಿಕ ಸಂದರ್ಭವನ್ನು ಅವಲಂಬಿಸಿದ ಮೇಲಿನ ವಿಚಾರಗಳನ್ನು ಒಪ್ಪಿದರೆ ಮೊದಲ ಭಾಷೆಯಲ್ಲಿ ಕಲಿಕೆ ನಡೆಯ ಬೇಕೆನ್ನುವುದಕ್ಕೆ ಭಾವುಕವಾದ ಕಾರಣಗಗಳನ್ನು ಅಥವಾ ಶೈಕ್ಷಣಿಕ ತತ್ವಗಳನ್ನು ಅಧರಿಸಿದ ಕಾರಣಗಳನ್ನು ನೀಡುವ ವಾದವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆ ವಾದದ ತಿರುಳು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ, ವಾಸ್ತವವಾಗಿ ಹಾಗೆ ನಡೆಯುವುದು ಸಾಧ್ಯವೋ ಇಲ್ಲವೋ ಎನ್ನುವುದಷ್ಟೇ ನಮಗೆ ಮುಖ್ಯ.

ಶಿಕ್ಷಣವೆನ್ನುವುದು ಈಗ ವ್ಯಕ್ತಿಗತ ನೆಲೆಯ ವ್ಯಾಖ್ಯಾನಕ್ಕೆ ಒಳಗಾಗುವ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದೀಗ ಸಾಮಾಜೀಕರಣದ ಒಂದು ಸಾಧನ. ಪಾರಂಪರಿಕ ಉತ್ಪಾದನಾ ವಿಧಾನಗಳನ್ನು ಬಿಟ್ಟುಕೊಟ್ಟ ಸಮಾಜ ಹೊಸಬಗೆಯ ದುಡಿಮೆಗಳಿಗಾಗಿ ತನ್ನ ಎಳೆಯ ತಲೆಮಾರನ್ನು ಕಟ್ಟುತ್ತಿರುತ್ತದೆ. ಹಾಗಾಗಿ ಕಲಿಕೆ ಎನ್ನುವುದು ಈ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯಾಗಿದೆ. ಇಲ್ಲಿ ಕಲಿಕೆಯು ಯಾವ ಭಾಷೆಯಲ್ಲಿ ಆಗಬೇಕು ಎನ್ನುವುದನ್ನು ಚಾರಿತ್ರಿಕವಾದ ಮತ್ತು ಸಾಮಾಜಿಕವಾದ ಸಂಗತಿಗಳು ನಿರ್ದೇಶಿಸುತ್ತಿರುತ್ತವೆ. ಹೀಗಾದಾಗ ಕನ್ನಡದಂತಹ ಭಾಷೆಗಳಿಗೆ ಹಲವಾರು ಅಡ್ಡಿಆತಂಕಗಳು ಬರುವುದು ಸಹಜ. ನಾವು ಕನ್ನಡಪರ ಇಲ್ಲವೇ ಕನ್ನಡ ವಿರೋಧ ಎನ್ನುವ ನೆಲೆಯಲ್ಲಿ ಯೋಚಿಸುತ್ತ ಕೂರುವುದು ಈಗ ಸಾಧ್ಯವಿಲ್ಲ. ಸಾಮಾಜಿಕ ಆಶೋತ್ತರ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವೆ ಸಹಬಾಳ್ವೆ ಹೇಗೆ ನಡೆಯಬೇಕು ಎಂಬ ಕಡೆಗೆ ನಮ್ಮ ಚಿಂತನೆ ಮತ್ತು ಕಾರ್ಯಯೋಜನೆಗಳು ರೂಪಗೊಳ್ಳ ಬೇಕು. ಹೀಗಾಗಿ ಕನ್ನಡ ಇಲ್ಲವೇ ಇಂಗ್ಲಿಶ್ ಎನ್ನುವ ನಿಲುವಿಗಿಂತ ಕನ್ನಡ ಮತ್ತು ಇಂಗ್ಲಿಶ್ ಎಂದು ಗ್ರಹಿಸುವುದು ಹೆಚ್ಚು ಸೂಕ್ತ. ಹೀಗೆ ಗ್ರಹಿಸಿದಾಗ ಕನ್ನಡ ಯಾವಾಗಲೂ ದುರ್ಬಲವಾಗಿಯೇ ಇರುತ್ತದೆ ಎಂದು ತಿಳಿಯಬೇಕಾಗಿಲ್ಲ. ಬದಲಾವಣೆಯ ಮಿಡಿತಗಳಿಗೆ ಅನುಗುಣವಾಗಿ 'ನಮ್ಮ ಕನ್ನಡ'ವನ್ನು ಹೊಂದಿಸಿಕೊಂಡರೆ ಅದು ಸಾಕಷ್ಟು ಸಬಲವಾಗಿ ಮತ್ತು ತನ್ನ ಜಾಗವನ್ನು ಕಾಯ್ದುಕೊಳ್ಳಲು ಶಕ್ತವಾಗಬಲ್ಲುದು. ಹಾಗಿಲ್ಲದೆ ಕನ್ನಡದ ಚಲನಶೀಲತೆಯನ್ನು ನಿರಾಕರಿಸಿ ಭಾವುಕ ನೆಲೆಯಲ್ಲಿ 'ಕಾಯ್ದುಕೊಳ್ಳುವ' ಹಾದಿ ಹಿಡಿದರೆ ಅದರಿಂದ ಆಗುವ ಪ್ರಯೋಜನಗಳು ಕಡಿಮೆ.

ವಿರುದ್ಧ ಪದ, ನಿಷೇಧ ಪದ: ಹೀಗೆಂದರ್‍ಏನು?

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ ಕೆಲವು ಪದಗಳನ್ನು ನೀಡಿ ಅವುಗಳಿಗೆ 'ವಿರುದ್ಧಾರ್ಥ'ವನ್ನು ಬರೆಯಲು ಹೇಳುತ್ತಾರೆ. ಎಲ್ಲ ಪಾಠಗಳ ಕೊನೆಯಲ್ಲಿ ಬರುವ ಭಾಷಾಭ್ಯಾಸವೆಂಬ ಭಾಗದಲ್ಲಿ ಈ ವಿರುದ್ಧಾರ್ಥದ ಅಭ್ಯಾಸ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳ ಮನೆಗೆಲಸವನ್ನು ಮುಗಿಸುವ ಹೊಣೆ ಹೊತ್ತಾಗ ಹೀಗೆ ವಿರುದ್ಧಾರ್ಥಗಳನ್ನು ಮಕ್ಕಳಿಗೆ ಹೇಳಿಕೊಡ ಬೇಕಾದ ಪ್ರಸಂಗವನ್ನು ಎದುರಿಸುತ್ತಾರೆ. ಆಗ ಕನ್ನಡ'ಬಲ್ಲವರನ್ನು" ಹುಡುಕಿಕೊಂಡು ತಂದೆ ತಾಯಂದಿರು ಹೋಗುವುದುಂಟು. ಫೋನಿನಲ್ಲಿ ಕೇಳುವುದೂ ಉಂಟು. ಅಂತೂ ಎಲ್ಲರೂ ಈ ವಿದುದ್ಧ ಪದಗಳಿಗಾಗಿ ಹುಡುಕಾಟವನ್ನು ಮುಂದುವರೆಸುತ್ತಾರೆ. ಇದರಿಂದ ದೊರಕುವುದೇನು? ರಾತ್ರಿಗೆ ಹಗಲು, ಗಂಡನಿಗೆ ಹೆಂಡತಿ, ಬಿಳಿಗೆ ಕಪ್ಪು, ಎಡಕ್ಕೆ ಬಲ, ಆಕಾಶಕ್ಕೆ ಭೂಮಿ,ಬೆಂಕಿಗೆ ನೀರು, ಹಿಂದೂಗೆ ಮುಸ್ಲಿಂ,ಬಡವನಿಗೆ ಬಲ್ಲಿದ ಹೀಗೆ ಇನ್ನೂ ಹಲವು ಸೋಜಿಗದ ಪದ ಜೋಡಿಗಳು ನಿಮಗೆ ಸಿಗುತ್ತವೆ. ಕೆಲವೊಮ್ಮೆ ಒಂದೇ ಪದಕ್ಕೆ ಒಂದಕ್ಕಿಂತ ಹೆಚ್ಚು ವಿರುದ್ಧ ಪದಗಳು ತಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತವೆ.ಯಾವುದು ಸರಿಯಾದ ವಿರುದ್ಧ ಪದ ಎಂದು ತೀರ್ಮಾನಿಸುವುದು ಅಷ್ಟು ಸುಲಭವೇನಲ್ಲ. ಉದಾಹರಣೆಗೆ ಸಿಹಿಗೆ ಕಹಿ ವಿರುದ್ಧ ಪದವೆಂದು ತಿಳಿದರೆ ಏನಾಗುತ್ತದೆ? ಸಿಹಿಯಲ್ಲದುದು ಕಹಿಯಾಗಿ ಇರುತ್ತದೆ ಎಂದು ಹೇಳಬೇಕಾಗುತ್ತದೆ. ಆದರೆ ಸಿಹಿಯಲ್ಲದುದು ಕಹಿಯಾಗಿಯೇ ಇರಬೇಕಿಲ್ಲವಲ್ಲ. ಸಿಹಿಯಲ್ಲದ ಆದರೆ ಕಹಿಯೂ ಅಲ್ಲದ ಹಲವು ರುಚಿಗಳು ಇವೆಯಲ್ಲವೇ? ಅಂದರೆ ವಿರುದ್ಧ ಅರ್ಥವುಳ್ಳ ಪದಗಳು ಎಂಬ ಚಿಂತನೆಯೇ ಸರಿಯಾದುದಲ್ಲ.

ಈ ಗೊಂದಲ ಇಲ್ಲಿಗೇ ಮುಗಿಯುವುದಿಲ್ಲ. ಶಾಲಾ ಪುಸ್ತಕಗಳು ನಿಷೇಧ ಪದಗಳು ಎಂಬ ಇನ್ನೊಂದು ಗುಂಪನ್ನು ಮಾಡಿಕೊಳ್ಳುತ್ತವೆ. ನೀತಿ-ಅನೀತಿ, ಅರ್ಥ-ಅನರ್ಥ, ಆಚಾರ-ಅನಾಚರ,ಆಹಾರ-ನಿರಾಹಾರ,ನಿಶ್ಚಿತ-ಅನಿಶ್ಚಿತ, ಕಲ್ಮಶ-ನಿಷ್ಕಲ್ಮಶ, ತಂತು-ನಿಸ್ತಂತು ಹೀಗೆ ಪದಪಟ್ಟಿಯನ್ನು ಬೆಳೆಸಬಹುದು. ಇವೆಲ್ಲ ಪದ ಮತ್ತು ನಿಷೇಧ ಪದಗಳ ಜೋಡಿಗಳು. ಈ ಪಟ್ಟಿಯನ್ನು ಗಮನಿಸಿದರೆ ಇವೆಲ್ಲವೂ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು ಎಂಬುದು ತಿಳಿಯುತ್ತದೆ. ಅಲ್ಲದೆ ಜೋಡಿ ಪದಗಳಲ್ಲಿ ಮೊದಲ ಪದಕ್ಕೆ ಮೊದಲಲ್ಲಿ ಏನನ್ನೋ ಕೂಡಿಸುವುದರಿಂದ ನಿಷೇಧ ಪದವನ್ನು ಪಡೆದಿರುವುದೂ ತಿಳಿಯುತ್ತದೆ. ಅಂದರೆ ನಿಷೇಧ ಪದಗಳು ಪದರಚನೆಯ ನೆಲೆಯಲ್ಲಿ ರೂಪುಗೊಳ್ಳುತ್ತವೆ. ಅವುಗಳಲ್ಲಿ ಒಂದು ಮೂಲಪದವಾಗಿದ್ದು ಇನ್ನೊಂದನ್ನು ಗೊತ್ತುಪಡಿಸಿದ ನಿಯಮದ ಮೂಲಕ ನಾವು ರಚಿಸಿಕೊಳ್ಳುತ್ತೇವೆ. ಮೇಲೆ ನೀಡಿದ ಪದಜೋಡಿಗಳನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಿದರೆ ಹೀಗೆ ನಿಷೇಧ ಪದಗಳನ್ನು ರಚಿಸುವಾಗ ಎರಡು ವಿಧಾನಗಳನ್ನು ನಾವು ಅನುಸರಿಸುವುದು ಗೊತ್ತಗುತ್ತದೆ. ಒಂದು ವಿಧಾನದಲ್ಲಿ ಮೂಲ ವಸ್ತು ಅಥವಾ ಗುಣ 'ಇಲ್ಲದಿರುವ' ಸ್ಥಿತಿಯನ್ನು ಸೂಚಿಸಲು ನಿಷೇಧ ರೂಪವನ್ನು ರಚಿಸುತ್ತೇವೆ. ಉದಾಹರಣೆಗೆ ಈ ಮುಂದಿನ ಪದಗಳ ಜೋಡಿಯನ್ನು ಗಮನಿಸಿ. ಚಿಂತೆ-ನಿಶ್ಚಿಂತೆ,ಫಲ-ನಿಷ್ಫಲ,ಜಲ-ನಿರ್ಜಲ,ಜನ-ನಿರ್ಜನ,ಚಲ-ನಿಶ್ಚಲ,ಶೇಷ-ನಿಶ್ಶೇಷ ಇತ್ಯಾದಿ. ಇವುಗಳಲ್ಲಿ ಮೊದಲ ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಇಲ್ಲದಿರುವುದನ್ನು' ಎರಡನೆಯ ಪದ ಸೂಚಿಸುತ್ತದೆ. ಇನ್ನೊಂದು ನಿಷೇಧ ರಚನೆಯ ಬಗೆಯಲ್ಲಿ ಒಂದು ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಅಲ್ಲದಿರುವುದನ್ನು' ನಿಷೇಧ ಪದದ ಮೂಲಕ ಸೂಚಿಸುತ್ತೇವೆ. ಈ ಮುಂದಿನ ಪದಜೋಡಿಗಳನ್ನು ಗಮನಿಸಿ. ಹಿಂಸೆ-ಅಹಿಂಸೆ, ಹಿತ-ಅಹಿತ, ಕಾಲ-ಅಕಾಲ, ವೇಳೆ-ಅವೇಳೆ, ಉದಾರ-ಅನುದಾರ, ಧೈರ್ಯ-ಅಧೈರ್ಯ, ನೀತಿ-ಅನೀತಿ ಇತ್ಯಾದಿ. ಇಲ್ಲೆಲ್ಲಾ ಮೊದಲ ಪದದಲ್ಲಿ ಸೂಚಿತವಾಗುವುದನ್ನು ಎರಡನೆಯ ಪದ ಅಲ್ಲಗಳೆಯುತ್ತದೆ. ಕನ್ನಡದ 'ಇಲ್ಲ' ಮತ್ತು 'ಅಲ್ಲ' ಎಂಬ ಪದಗಳ ಕೆಲಸವನ್ನು ಮೇಲೆ ಹೇಳಿದ ನಿಷೇಧ ರೂಪಗಳು ಮಾಡುತ್ತಿವೆ.ಹಾಗೆ ನೋಡಿದರೆ ಹೀಗೆ ಪದರಚನೆಯ ಮೂಲಕ ನಿಷೇಧ ರೂಪಗಳನ್ನು ರಚಿಸುವ ವಿಧಾನ ಕನ್ನಡದಲ್ಲಿ ಇಲ್ಲ. ನಾವು ಈ ಪದ ಜೋಡಿಗಳನ್ನು ನೇರವಾಗಿ ಸಂಸ್ಕೃತದಿಂದ ಪಡೆದುಕೊಂಡಿದ್ದೇವೆ. ಕನ್ನಡದ್ದೇ ಆದ ನಿಷೇಧ ರೂಪರಚನೆಯ ನಿಯಮಗಳು ಇಲ್ಲ. ಸಂಸ್ಕೃತದ ಈ ಪದರಚನೆಯ ನಿಯಮವನ್ನು ಕನ್ನಡದ ಮಕ್ಕಳು ತಮ್ಮಶಾಲಾ ಶಿಕ್ಷಣದ ಹಂತದಲ್ಲಿ ಕಲಿಯಬೇಕೆ ಬೇಡವೇ ಎಂಬುದು ಬೇರೆಯೇ ಪ್ರಶ್ನೆ. ಅಂದರೆ ಈ ಪದಜೋಡಿಗಳಲ್ಲಿ ಒಂದೊಂದು ಪದವನ್ನು ಮಕ್ಕಳು ಸ್ವತಂತ್ರ ಪದಗಳಾಗಿಯೇ ಕಲಿಯುತ್ತಾರೆಯೇ ಹೊರತು. ಒಂದು ಮೂಲಪದವನ್ನು ಕಲಿತು ಅದಕ್ಕೆ ನಿಷೇಧ ಪ್ರತ್ಯಯವನ್ನು ಹತ್ತಿಸುವ ನಿಯಮವನ್ನು ಬಳಸುವುದಿಲ್ಲ. ಸದ್ಯ ನಾವಿಲ್ಲಿ ಈ ವಿವರಗಳನ್ನು ಕುರಿತು ಚರ್ಚಿಸುವುದು ಬೇಕಾಗಿಲ್ಲ.

ಆದರೆ ವಿರುದ್ಧ ಪದಗಳು ಹೀಗಲ್ಲ. ಒಂದು ಪದ ಸೂಚಿಸುವ ವಸ್ತು ಇಲ್ಲವೇ ಸ್ಥಿತಿ ವಿರುದ್ಧವಾದ ವಸ್ತು ಇಲ್ಲವೇ ಸ್ಥಿತಿ ನಮ್ಮ ಸುತ್ತಣ ಜಗತ್ತಿನಲ್ಲಿ ಇರುತ್ತದೆ ಎನ್ನುವ ಊಹೆಯ ಮೇಲೆ ಈ ವಿರುದ್ಧ ಪದಗಳ ನೆಲೆಗಟ್ಟು ನಿಂತಿದೆ. ಇದು ಪದರಚನೆಯ ನೆಲೆಗೆ ಸಂಬಂಧಿಸಿದ್ದಲ್ಲ. ಲೋಕ ಗ್ರಹಿಕೆಯ ನೆಲೆಗೆ ಸಂಬಂಧಿಸಿದೆ. ಅಂದರೆ ಲೋಕವನ್ನು ಅದರ ಬಿಡಿಬಿಡಿ ನೆಲೆಗಳನ್ನು ನಾವು ಗ್ರಹಿಸುವಾಗಲೇ ಪ್ರತಿಯೊಂದಕ್ಕೂ ಅದಕ್ಕೆ ವಿರುದ್ಧವಾದುದು ಇರುತ್ತದೆ ಎನ್ನುವ ನೆಲೆಯಲ್ಲೇ ಗ್ರಹಿಸುವಂತೆ ಮಾಡುವುದು ಎಷ್ಟು ಸರಿಯಾದುದುದು? ನಾವು ವಿರುದ್ಧ ಪದಗಳು ಎಂದು ಸಾಮಾನ್ಯವಾಗಿ ಶಾಲೆಯಲ್ಲಿ ಹೇಳಿಕೊಡುತ್ತಿರುವ ಪದಗಳಲ್ಲಿ ಕೆಲವನ್ನು ಆಯ್ದು ಈಗ ಈ ಬಗೆಯ ಗ್ರಹಿಕೆಯಲ್ಲಿ ಇರುವ ಎಡರುತೊಡರುಗಳೇನು ಎಂಬುದನ್ನು ತಿಳಿಯೋಣ. ಮಿತ್ರ ಎಂಬುದಕ್ಕೆ ಶತ್ರು ವಿರುದ್ಧ ಪದ ಎಂದು ಹೇಳಿದರೆ ಏನಾಗುತ್ತದೆ? ಇವೆರಡೂ ಸಾಪೇಕ್ಷ ಮತ್ತು ಸ್ವತಂತ್ರ ಸ್ಥಿತಿಗಳು. ನನಗೆ ಮಿತ್ರನಲ್ಲದ ವ್ಯಕ್ತಿ ನನಗೆ ಶತ್ರು ಆಗಿರಲೇ ಬೇಕಾಗಿಲ್ಲ. ಅಲ್ಲದೆ ಮಿತ್ರ ಮತ್ತು ಶತ್ರು ಎಂಬುದು ಯಾರು ಆ ಪದಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಬದಲಾಗುತ್ತಲೇ ಹೋಗುತ್ತವೆ. ಮಿತ್ರ ಮತ್ತು ಶತ್ರು ಎಂಬ ಪದಗಳಿಂದ ಮಿತ್ರಪಕ್ಷ,ಶತ್ರುಪಕ್ಷ (ಅಥವಾ ಮಿತ್ರದೇಶ ಮತ್ತು ಶತ್ರುದೇಶ) ಎಂಬ ಪದಗಳನ್ನು ಪಡೆದುಕೊಂಡೆವು ಎಂದುಕೊಳ್ಳೋಣ. ಈ ಪದಗಳಿಗೆ ನಿರ್ದಿಷ್ಟವಾದ ಮತ್ತು ಕಾಲದೇಶ ಬದ್ಧವಲ್ಲದ ವ್ಯಾಖ್ಯಾನ ಇರುವುದು ಸಾಧ್ಯವೇ ಇಲ್ಲ. ಅಂದರೆ ಆ ಪದಗಳು ಹೇಗೆ ವಿರುದ್ಧ ಪದಗಳಾಗಬಲ್ಲವು? ಇದೇ ಬಗೆಯಲ್ಲಿ ವಿರುದ್ಧ ಪದಗಳ ಜೋಡಿಗಳನ್ನು ನಾವು ಬೇರೆಬೇರೆಯಾಗಿ ತೆಗೆದುಕೊಂಡು ನೋಡಬಹುದು. ಎಲ್ಲ ಕಡೆಗಳಲ್ಲೂ ಆ ಪದಗಳ ನಡುವೆ ವಿರುದ್ಧವಾದುದು ಏನೂ ಇರುವುದಿಲ್ಲ. ನಾವು ಆ ವಿರುದ್ಧ ಸ್ಥಿತಿಯನ್ನು ಆರೋಪಿಸುತ್ತೇವೆ. ಆ ಆರೋಪಿತ ಸ್ಥಿತಿಯನ್ನು ಮಕ್ಕಳಿಗೆ ಕಲಿಯ ಮೂಲಕ ರವಾನಿಸುತ್ತೇವೆ. ತನ್ನದು ತನ್ನದಲ್ಲದು ಅತ್ನವಾ ಸ್ವ ಮತ್ತು ಅನ್ಯ ಎಂಬ ಒಡೆದ ಸ್ಥಿತಿಯನ್ನು ಮೀರುವುದು ಎಲ್ಲ ಕಲಿಕೆಗಳ ಗುರಿಯಾಗ ಬೇಕಾಗಿರುವಾಗ ನಮಗೆ ಗೊತ್ತಿಲ್ಲದಂತೆ ಈ ನಿರಾಕರಣಗೊಳ್ಳಬೇಕಾದ ಮನೋಭಾವವೇ ನಮ್ಮ ಮಕ್ಕಳಲ್ಲಿ ಮೊಳಕೆಯೊಡುವಂತೆ ನಾವು ಮಾಡುತ್ತಿದ್ದೇವೆಯೇ?

ಇದೆಲ್ಲ ನಮ್ಮ ಕಲಿಕೆಯಲ್ಲಿ ಬೇರೂರಿದ್ದು ಹೇಗೆ? ವಸಾಹತು ಆಡಳಿತಕ್ಕೆ ಮಾದರಿಯಾಗಿದ್ದ ಪಬ್ಲಿಕ್ ಶಾಲೆಗಳ ಶಿಕ್ಷಣವು ಸಮಾನತಾ ಭಾವವನ್ನು ಬೆಳೆಸುವ ಗುರಿಯನ್ನು ಹೊಂದಿರಲಿಲ್ಲ.ತರತಮ ಭಾವವನ್ನೇ ಬೆಳೆಸಲು ಮುಂದಾಗಿದ್ದ ವಸಾಹತು ಮಾದರಿಯ ಕಲಿಕೆಯಲ್ಲಿ ಭಾಷಾ ಪಠ್ಯಕ್ರಮವು,ಮುಖ್ಯವಾಗಿ ಇಂಗ್ಲಿಶ್ ಭಾಷಾ ಕಲಿಕೆಯ ಪಠ್ಯ ಕ್ರಮವು ಸಿನಾನಿಮ್ ಮತ್ತು ಆಂಟಾನಿಮ್ ಗಳೆಂಬ ಪರಿಕಲ್ಪನೆಗಳನ್ನು ರೂಢಿಗೊಳಿಸಿತ್ತು. ನಾವು ಕಣ್ಣುಮುಚ್ಚಿ ಅದನ್ನೇ ನಮ್ಮ ಕಲಿಕೆಗೂ ನಕಲು ಮಾಡಿಕೊಂಡಿದ್ದರ ಪರಿಣಾಮವೇ ಇದು.ಕೊನೆಯ ಪಕ್ಷ ಉದ್ದೇಶದಲ್ಲಾದರೂ ಸಮಾನತಾ ಭವನ್ನು ಬೆಳೆಸುವ ಗುರಿ ನಮ್ಮ ಶಿಕ್ಷಣಕ್ಕೆ ಇದೆ.ಹಾಗಿದ್ದ ಮೇಲೆ ಇನ್ನಾದರೂ ಎಚ್ಚತ್ತು ಬದಲಾಗಬೇಕಲ್ಲವೇ?

ಊರಿಗೆಷ್ಟು ಹೆಸರು?

ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ?

ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ. ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ 'ಚಾಮರಾಜ ನಗರ' ಹಿಂದೆ 'ಅರಿಕೊಠಾರ'ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು 'ಪ್ರತಿನಾಮ' ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ. 'ಅತ್ತಿಬೆಲೆ'ಯು "ಔದುಂಬರಪುರ'ವಾಗುತ್ತದೆ;'ನಂಜನಗೂಡು' 'ಗರಳಪುರಿ'ಯಾಗುತ್ತದೆ;'ಹಾಡುವಳ್ಳಿ' 'ಸಂಗೀತಪುರ'ವಾಗುತ್ತದೆ.ಇನ್ನೂ ಕೆಲವೊಮ್ಮೆ ಊರುಗಳ ಹೆಸರುಗಳು ಕಳೆದುಹೋಗುವುದೂ ಉಂಟು. ಈಗ ನಾವು ಬೆಂಗಳೂರು ಎಂದು ಕರೆಯುತ್ತಿರುವ ಊರಿನಲ್ಲಿ ಸರಿಸುಮಾರು ಐವತ್ತು ಊರ ಹೆಸರುಗಳು ಕಳೆದುಹೋಗಿವೆ. ಗವಿಪುರ,ಸಿದ್ಧಾಪುರ,ಗುಟ್ಟಹಳ್ಳಿ,ಮಾರತ್ ಹಳ್ಳಿ,ಜಕ್ಕಸಂದ್ರ, ಸಾರಕ್ಕಿ,ಶಿವನ ಹಳ್ಳಿ, ಸಾಣೇ ಗುರವನ ಹಳ್ಳಿ, ಹೆಣ್ಣೂರು, ಬಾಣಸವಾಡಿ, ಹಲಸೂರು,ನಾಗಸಂದ್ರ, ಗಂಗೇನ ಹಳ್ಳಿ ಹೀಗೆ ಪಟ್ಟಿ ಇದೆ. ಇವುಗಳಲ್ಲಿ ಕೆಲವು ಹೆಸರುಗಳು ಬಡಾವಣೆಗಳ ಹೆಸರುಗಳಾಗಿ ಉಳಿದಿವೆ. ಆದರೆ ಊರ ಹೆಸರುಗಳಾಗಿ ಅಲ್ಲ.

ಇದೇನೇ ಇರಲಿ. ಹೆಸರುಗಳನ್ನು ಬಾಯಲ್ಲಿ ಹೇಳುವುದೂ ಅವನ್ನು ಬರೆಯುವುದೂ ಬೇರೆಬೇರೆ. ನಮ್ಮ ಸಾವಿರಾರು ಊರುಗಳ ಹೆಸರನ್ನು ಬರೆಯ ಬೇಕಾಗಿ ಬಂದದ್ದೇ ಈಚಿನ ವರುಷಗಳಲ್ಲಿ. ಅದರಲ್ಲೂ ಆ ಯ್ ಊರಿನ ದಾಖಲೆಗಳನ್ನು ಜತನವಾಗಿ ಇರಿಸಲು ಸರಕಾರದ ಬೇರೆ ಬೇರೆ ಇಲಾಖೆಗಳು ಮುಂದಾಗಿರುವುದರಿಂದ ಹೀಗೆ ಹೆಸರನ್ನು ಬರೆಯಬೇಕಾಗಿ ಬಂದಿದೆ. ಹೀಗೆ ಬರೆಯುವಾಗ ಒಂದೇ ಬಗೆಯಲ್ಲಿ ಬರೆಯುತ್ತಿಲ್ಲ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. ಅಂಚೆ ಇಲಾಖೆಯವರು ಒಂದು ಬಗೆಯಲ್ಲಿ ಬರೆದಿದ್ದರೆ,ಕಂದಾಯ ಇಲಾಖೆಯವರು ಮತ್ತೊಂದು ಬಗೆಯಲ್ಲಿ ಬರೆದಿರುತ್ತಾರೆ. ಪಂಚಾಯತ್ ರಾಜ್ಯ ಇಲಾಖೆಯವರು,ಪೋಲಿಸಿನವರು,ಮರಾಮತ್ ಇಲಾಖೆಯವರು,ಸಮಾಜ ಕಲ್ಯಾಣ ಇಲಾಖೆಯವರು ಹೀಗೆ ಹತ್ತು ಹಲವು ಕಡೆಗಳಲ್ಲಿ ಊರಿನ ಹೆಸರನ್ನು ಬರೆಯುವುದು ಈಗ ಬೇಕಾಗಿದೆ. ಒಮ್ಮೆ ಹೀಗೆ ಬರೆಯಲು ಮೊದಲು ಮಾಡಿದ ಮೇಲೆ ಊರಿನ ಹೆಸರುಗಳಿಗೆ ಎರಡು ರೂಪಗಳು ಉಳಿದುಕೊಳ್ಳುತ್ತವೆ. ಮಾತಿನ ರೂಪ ಮತ್ತು ಬರೆಹದ ರೂಪ. ಮಾತಿನ ರೂಪ ಮೊದಲಿನಂತೆ ಜನರ ನೆನಪನ್ನು ಹೊಂದಿಕೊಂಡು ಬದಲಾಗುವುದಿಲ್ಲ. ಬರೆದ ಬಗೆಯನ್ನು ಅನುಸರಿಸಿ ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುತ್ತದೆ. ಬರಹದ ರೂಪವಂತೂ ಈಗಿನ ದಾಖಲಾತಿ ಚೌಕಟ್ಟಿನಲ್ಲಿ ಹೆಚ್ಚು ಬದಲಾಗದೇ ಉಳಿಯಬಹುದಾಗಿದೆ.

ಜನರು ಊರಿನ ಹೆಸರನ್ನು ಬಾಯಲ್ಲಿ ಹೇಳುವಾಗ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆನಷ್ಟೆ. ಈ ಬದಲಾವಣೆ ಎರ್ರಾಬಿರ್ರಿಯಾಗಿರುವುದಿಲ್ಲ. ಊರಿನ ಹೆಸರಿನಲ್ಲಿ ಬಹುಮಟ್ತಿಗೆ ಎರಡು ಭಾಗ ಇರುತ್ತವೆ. ಎರಡನೆಯ ಭಾಗದಲ್ಲಿ 'ಊರು" ಎಂಬುದನ್ನು ಹೇಳುವಂತಿರುವ ಪದವಿರುತ್ತದೆ. ಊರು, ಪುರ, ನಗರ, ಕಲ್ಲು, ಗಾಲ, ಗಿ, ಹಾಳು, ಹಳ್ಳಿ, ವಾಡಿ, ಪಟ್ಟಣ, ಹಟ್ಟಿ, ಸಂದ್ರ, ಕೇರಿ, ಕೆರೆ, ಪೇಟೆ ಹೀಗೆ ಇಂತಹವು. ಮೊದಲ ಭಾದದಲ್ಲಿ ಚಿಕ್ಕ ಪದದಿಂದ ಹಿಡಿದು ಹಲವಾರು ಪದಗಳು ಇರುವುದೂ ಉಂಟು. ಜನರು ಈ ಎರಡು ಭಾಗಗಳನ್ನು ಚಿಕ್ಕದು ಮಾಡಿಕೊಳ್ಳುತ್ತಾರೆ. ಹೀಗೆ ಚಿಕ್ಕದು ಮಾಡಿಕೊಳ್ಳುವಾಗ ಮೊದಲ ಭಾಗದಲ್ಲಿ ಎರಡಕ್ಕಿಂತ ಹೆಚ್ಚು ಸ್ವರಗಳನ್ನು ಇರಿಸಿಕೊಳ್ಳುವುದಿಲ್ಲ.ಹಾಗೆಯೇ ಎರಡನೆಯ ಭಾಗದಲ್ಲಿ ಕೂಡ ಒಂದು ಅಥವಾ ಎರಡು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಕನ್ನಡ ನುಡಿಯ ಜಾಯಮಾನ ಎಂದಷ್ಟೇ ಹೇಳಬಹುದು. ಕೆಲವು ಊರುಗಳ ಹೆಸರು ಮಾತಿನಲ್ಲಿ ಏನಾಗುತ್ತದೆ ನೋಡಿ. ಕೃಷ್ಣರಾಜ ನಗರ ಕೆ.ಆರ್.ನಗರ, ತಿರುಮಕೂಡಲು ನರಸೀಪುರ, ಟಿ. ನರ್ಸಿಪುರ ಆಗುತ್ತವೆ.ಊರ ಹೆಸರಿನಲ್ಲಿ ಒಟ್ಟು ನಾಲ್ಕಕ್ಕಿಂತ ಹೆಚ್ಚು ಸ್ವರಗಳಿದ್ದರೆ ಆ ಸ್ವರಗಳನ್ನು ನಾಲ್ಕಕ್ಕೆ ಇಳಿಸಿಕೊಳ್ಳುವುದು ಕಂಡು ಬರುತ್ತದೆ.ಕೆಲವೊಮ್ಮೆ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳುವುದೂ ಉಂಟು. ಇರುವಷ್ಟು ವ್ಯಂಜನಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳುತ್ತಾರೆ.'ಚಿಕ್ಕನಾಯಕನ ಹಳ್ಳಿ'ಯಲ್ಲಿ ಎಂಟು ಸ್ವರಗಳಿವೆ. ಜನರ ಬಾಯಲ್ಲಿ ಅದು 'ಚಿಕ್ ನಾಯ್ಕ್ ನಳ್ಳಿ' ಎಂದು ಆಗುವುದು.ಬದಲಿಗೆ ಕೆಲವೊಮ್ಮೆ 'ಸಿ.ಎನ್.ಹಳ್ಳಿ' ಆದರೂ ಅಲ್ಲಿ ನಾಲ್ಕು ಸ್ವರಕ್ಕೆ ಇಳಿಯುತದೆ.'ಹಾಸನ' 'ಹಾಸನ್' ಅಥವಾ 'ಹಾಸ್ನ' ಆಗುತ್ತದೆ. 'ಚಾಮರಾಜನಗರ' 'ಚಾಮ್ರಾಜ್ ನಗ್ರ' ಎಂದಾಗುತ್ತದೆ. ಹೀಗೇ ಪಟ್ಟಿ ಬೆಳೆಸಬಹುದು. ಈ ಮಾತು ಹೇಳಿದ್ದೇಕೆಂದರೆ, ಜನರಿಗೆ ಊರಿನ ಬರಹ ರೂಪ ಹೇಗಿದೆ ಎನ್ನುವುದು ಅದರ ಹೆಸರನ್ನು ಹೇಳುವಾಗ ಅಷ್ಟು ಗಮನಿಸಬೇಕಾದ ಸಂಗತಿಯಾಗಿ ತೋರುವುದಿಲ್ಲ ಎಂದು ತಿಳಿಸುವುದು.

ಇನ್ನೂ ಒಂದು ಮಾತಿದೆ. ಬಲ್ಲವರು ನಮ್ಮ ಊರುಗಳ ಹೆಸರುಗಳನ್ನು 'ಕುಲಗೆಡಿಸಿ'ದವರು ಇಂಗ್ಲಿಶಿನವರು ಎನ್ನುತ್ತಾರೆ. ಇಂಗ್ಲಿಶಿನವರು ನಮ್ಮ ಊರುಗಳ ಹೆಸರುಗಳನ್ನು ನಾವು ಬರೆದಂತೆ ಬರೆಯಲಿಲ್ಲ. ಏಕೆಂದರೆ ಎಷ್ಟೋ ಊರುಗಳ ಹೆಸರನ್ನು ನಾವು ಬಾಯಲ್ಲಿ ಹೇಳುತ್ತಿದ್ದುದನ್ನು ಅವರು ಕೇಳಿಸಿಕೊಂಡಂತೆ ಬರೆದರು. ಹೀಗಾಗಿ ಅವರು ಕೇಳಿಸಿಕೊಂಡದ್ದು ಹೇಗೋ ಹಾಗೆ ಊರ ಹೆಸರುಗಳು ಬರಹದಲ್ಲಿ ದಾಖಲಾದವು. ಆದರೆ ಸಾವಿರಾರು ಊರುಗಳ ಹೆಸರುಗಳನ್ನು ಮೊದಲು ಬರೆದವರು ನಾವೇ ಆಗಿದ್ದೇವೆ. ಅವುಗಳಿಗೆ ನಮ್ಮ ನುಡಿಯಲ್ಲಿ, ಜತೆಗೆ ಇಂಗ್ಲಿಶಿನಲ್ಲಿ ಬರೆಹ ರೂಪವನ್ನು ಕೊಟ್ಟವರು ನಾವೇ. ಹಾಗಾಗಿ ಏನಾದರೂ ಗೊಂದಲಗಳಿದ್ದರೆ ಅದಕ್ಕೆ ನಾವು ಹೊಣೆಗಾರರಾಗಿದ್ದೇವೆ. ಹಿಗೆ ಅಡ್ಡಾದಿಡ್ಡಿ ಹೆಸರುಗಳನ್ನು ಬರೆಯುವುದನ್ನು ಬದಲಾಯಿಸಿ ಒಂದು ಸರಿಯಾದ ಬಗೆಯಲ್ಲಿ ಬರೆಯುವುದು ಮತ್ತು ಅದೇ ರೂಪವನ್ನು ಎಂದೂ, ಎಲ್ಲೆಲ್ಲೂ ಬಳಸುವುದು ಈಗ ಆಗ ಬೇಕಾಗಿರುವ ಕೆಲಸ; ಹೆಸರುಗಳ ಹಳೆಯ ರೂಪಗಳಿಗೆ ಮರಳಿ ಹೋಗುವುದಕ್ಕಿಂತ ಇದು ಮೊದಲು ಆಗ ಬೇಕಾದ ಕೆಲಸ.

ಮತ್ತೆ ಕೆಲವರು ಇಂಗ್ಲಿಶಿನವರು ಕುಲಗೆಡಿಸಿದ ಹೆಸರುಗಳಿಗೆ ಕೊನೆಯಲ್ಲಿ 'ಉ' ಸೇರಿಸಿ ಬಿಟ್ಟರೆ ಅದು ಕನ್ನಡದ ಹೆಸರಾಗಿಬಿಡುವುದೆಂದು ಹೇಳುವುದುಂಟು. ಇದು ಸರಿಯಾದ ಮಾತಲ್ಲ. ಕನ್ನಡ ಮಾತಾಡುವ ಕೆಲವರು ಕೆಲವೊಮ್ಮೆ ಮತ್ತು ಕೆಲವು ಕಡೆಗಳಲ್ಲಿ ಹೀಗೆ ಕೊನೆಯಲ್ಲಿ 'ಉ' ಸೇರಿಸುವುದುಂಟು. ಕನ್ನಡ ಮಾತಾಡುವವರೆಲ್ಲ ಹೀಗೆ ಮಾಡುವುದಿಲ್ಲ. ತುಂಗಭದ್ರೆಯ ಉತ್ತರಕ್ಕೆ ಹೋದರೆ ಅಲ್ಲಿ ವ್ಯಂಜನದಿಂದ ಕೊನೆಯಾಗುವ ಪದಗಳನ್ನು ಬರೆಯುವಾಗ ಕೊನೆಗೆ 'ಅ' ಸೇರಿಸುತ್ತಾರೆ.ಆ ಕಡೆಯಿಂದ ಬರುವ ಎಷ್ಟೋ ಬಸ್ಸುಗಳಲ್ಲಿ 'ಬೆಂಗಳೂರ','ಮೈಸೂರ''ಮಂಗಳೂರ' ಎಂದು ಬರೆದಿರುವುದನ್ನು ನೋದಬಹುದು. ಆದರೆ ಅಲ್ಲಿ ಕನ್ನಡ ಮಾತನಾಡುವವರು ಈ ಊರುಗಳ ಹೆಸರನ್ನು ಹೇಳುವಾಗ ಕೊನೆಯಲ್ಲಿ 'ಅ' ಹೇಳುವುದಿಲ್ಲ. ಕೊನೆಯಲ್ಲಿ ವ್ಯಂಜನವನ್ನೇ ಹೇಳುತ್ತಾರೆ. ಅಲ್ಲದೆ ವ್ಯಂಜನದಿಂದ ಕೊನೆಯಾಗುವ ಎಲ್ಲ ಕಡೆಯಲ್ಲೂ "ಉ' ಸೇರಿಸಲು ಬರುವುದಿಲ್ಲ. 'ಹೊಸ್ ಪೇಟ್','ಬಾಗಲ್ ಕೋಟ್'.'ಕೋಲಾರ್','ರಾಮ್ ನಗರ್' ಮುಂತಾದವನ್ನು ಏನು ಮಾಡುವುದು. ಎಲ್ಲ ಕಡೆಗೂ ಉಕಾರವೇ ಸಲ್ಲುವುದೆಂದು ಹೇಳಬಹುದೇ?

ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ನೆಲೆಸುವುದು ಎಂದಿಗಿಂತಲೂ ಈಗ ಹೆಚ್ಚಾಗಿದೆ. ಬೇರೆಬೇರೆ ನುಡಿಗಳನ್ನಾಡುವವರು ಒಂದೆಡೆ ನೆಲಸುತ್ತಿದ್ದಾರೆ. ಇದರಿಂದ ಊರುಗಳ ಹೆಸರನ್ನು ಬರೆಯುವ ಬಗೆಯಲ್ಲಿ ಒಂದು ಚೌಕಟ್ಟನ್ನು ತರಬಹುದೇ ಹೊರತು ಆ ಹೆಸರುಗಳನ್ನು ಜನರು ಹೇಳುವ ಬಗೆಯಲ್ಲಿ ಅಲ್ಲ. ಹೀಗೆ ಹೆಸರನ್ನು ಹೇಳುವ ಬಗೆಯಲ್ಲೂ ನಾವು ಅಂದುಕೊಳ್ಳುವಂತೆ ಏರುಪೇರುಗಳು ಇರುವುದಿಲ್ಲ. ಬೇರೆ ಬಗೆಯಲ್ಲಿ ಹೆಸರನ್ನು ಹೇಳುತ್ತಿದ್ದರೂ ಅದರಲ್ಲೂ ಒಂದು ಚೌಕಟ್ಟು ಇರುತ್ತದೆ. ಮತ್ತು ಹಾಗೆ ಹೇಳುವುದಕ್ಕೆ ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ.

ಕೊನೆಗೊಂದು ಮಾತು: ಲೋಕದಲ್ಲಿ ಅತಿ ದೊಡ್ಡ ಹೆಸರಿರುವ ಊರು ಯಾವುದು? ಆ ಊರಿನ ಹೆಸರನ್ನು ರೋಮನ್(ಇಂಗ್ಲಿಶ್) ಲಿಪಿಯಲ್ಲಿ ಬರೆದರೆ ಅದರಲ್ಲಿ ೮೪ ಅಕ್ಷರಗಳಿರುತ್ತವೆ.

ಶಾಲೆಯಲ್ಲಿ ವ್ಯಾಕರಣ

ನಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆಂದು ಮೀಸಲಾದ ಯಾವುದೇ ಪಠ್ಯ ಪುಸ್ತಕವನ್ನು ತೆರೆದರೂ ಅದರ ಪಾಠಗಳ ಕೊನೆಯಲ್ಲಿ ವ್ಯಾಕರಣಾಂಶಗಳನ್ನು ಕುರಿತು ಮಾಹಿತಿ ಇರುತ್ತದೆ. ಕಲಿಸುವವರು ಮಕ್ಕಳಿಗೆ ಈ ವ್ಯಾಕರಣಾಂಶಗಳನ್ನು ಹೇಳಿಕೊಡುತ್ತಾರೆ. ಪರೀಕ್ಷೆಯಲ್ಲಿ ಮಕ್ಕಳ ವ್ಯಾಕರಣ ಕುರಿತ ತಿಳುವಳಿಕೆಯನ್ನು ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನಮಾಡಲಾಗುತ್ತದೆ. ಕಲಿಕೆಯ ಈ ಕ್ರಮ ಎಷ್ಟು ಸರಿ ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದು: ನಾವು ಶಾಲೆಗಳಲ್ಲಿ ಕಲಿಸುತ್ತಿರುವ ವ್ಯಾಕರಣ ನಿಜವಾಗಿ ಕನ್ನಡದ ಸ್ವರೂಪವನ್ನು ವಿವರಿಸುತ್ತಿಲ್ಲ. ಎರಡು: ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವ ಮತ್ತು ಶಾಲೆಗೆ ಬರುವ ಮೊದಲೇ ಅನೌಪಚಾರಿಕವಾಗಿ ಕನ್ನಡ ಮಾತನಾಡಲು ಕಲಿತಿರುವ ಮಕ್ಕಳಿಗೆ ಈ ವ್ಯಾಕರಣದ ಕಲಿಕೆ ಆಗತ್ಯವಿಲ್ಲ. ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯವರಿಗೆ ಕನ್ನಡ ಮೊದಲ ಭಾಷೆ. ಉಳಿದವರಲ್ಲಿ ಹಲವರಿಗೆ ಶಾಲೆಗೆ ಬರುವ ಮೊದಲೇ ಕನ್ನಡ ಆಡು ಭಾಷೆಯಾಗಿ ಗೊತ್ತಿರುತ್ತದೆ. ಹೀಗೆ ಕನ್ನಡವನ್ನು ಶಾಲೆಯಲ್ಲೆ ಮೊದಲ ಬಾರಿಗೆ ಕೇಳಿಸಿಕೊಳ್ಳುತ್ತಿರುವ ಮಕ್ಕಳೂ ಇದ್ದಾರಾದರೂ ಅವರ ಬಗ್ಗೆ,ಅವರಿಗೆ ಕನ್ನಡವನ್ನು ಕಲಿಸುವ ರೀತಿಯ ಬಗ್ಗೆ ನಾವು ಯಾವ ವಿಶೇಷ ಎಚ್ಚರವನ್ನೂ ವಹಿಸಿಲ್ಲ. ಹೆಚ್ಚಿನ ಪಾಲು ಉರ್ದು ಮಾಧ್ಯಮದ ಶಾಲೆಗಳಲ್ಲಿ ಈ ಸಮಸ್ಯೆ ಇರುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಅವರಿಗೂ ಈ ವ್ಯಾಕರಣ ಬೇಡದ ಹೊರೆಯಾಗಿದೆ. ಮೂರು: ಹೀಗೆ ಒತ್ತಾಯಪೂರ್ವಕವಾಗಿ ಕಲಿಸುವ ವ್ಯಾಕರಣ ಕೂಡ ಮುಂದೆ ಕನ್ನಡ ಬಳಸುವವರ ನೆರವಿಗೆ ಬರುವುದಿಲ್ಲ. ಅದು 'ಕಲಿತು ಮರೆಯುವ' ವಿಷಯವಾಗಿರುತ್ತದೆ.

ಮೊದಲ ಕಾರಣವನ್ನು ಗಮನಿಸೋಣ. ನಾವು ಈಗ ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜವಾಗಿ ಕನ್ನಡದ ಚಹರೆಗಳನ್ನು ವಿವರಿಸುವ ರೀತಿಯಲ್ಲಿ ಇಲ್ಲ.ನಾವು ಬಳಸುತ್ತಿರುವ ಕನ್ನಡದ ರಚನೆಯನ್ನು ವಿವರಿಸುವ ನಿಯಮಗಳನ್ನು ನಾವಿನ್ನೂ ಸರಿಯಾಗಿ ತಿಳಿದುಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಹಳೆಗಾಲದ ಪಂಡಿತರು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿ ರೂಪಿಸಿದ ನಿಯಮಗಳನ್ನೇ ಈಗಲೂ ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಡಾ.ಡಿ.ಎನ್.ಶಂಕರಭಟ್ಟರು ಈ ಕೊರತೆಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಈ ವ್ಯಾಕರಣವು ಬರೆಹದ ಕನ್ನಡವನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳುತ್ತದೆ. ಆಡುಗನ್ನಡವನ್ನು ಗಮನಿಸುವುದಿಲ್ಲ. ಆದ್ದರಿಂದ ಮಕ್ಕಳು ತಾವು ಆಡುವ ಕನ್ನಡ ವ್ಯಾಕರಣ ಬದ್ಧವಲ್ಲ ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ. ಒಂದು ಚಿಕ್ಕ ನಿದರ್ಶನವನ್ನು ನೋಡಿ. ಸಪ್ತಮೀ ವಿಭಕ್ತಿಯ ಪ್ರತ್ಯಯಗಳೆಂದು 'ಒಳಗೆ' ಮತ್ತು 'ಅಲ್ಲಿ' ಎಂಬ ಎರಡು ರೂಪಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.(ಇವು ಪ್ರತ್ಯಯಗಳೇ ಎಂಬುದು ಬೇರೆಯೇ ಪ್ರಶ್ನೆ. ಅದು ಒತ್ತಟ್ಟಿಗಿರಲಿ).ಮನೆಯೊಳಗೆ,ಮನೆಯಲ್ಲಿ, ಊರಿನೊಳಗೆ(ಊರೊಳಗೆ),ಊರಿನಲ್ಲಿ(ಊರಲ್ಲಿ) ಮುಂತಾದ ಪದರೂಪಗಳನ್ನು ಉದಾಹರಣೆಯಾಗಿ ಹೇಳಿಕೊಡಲಾಗುತ್ತದೆ. ಆದರೆ ಕನ್ನಡದ ಬಹುಪಾಲು ಮಕ್ಕಳು ಅದರಲ್ಲೂ ತುಂಗಭದ್ರೆಯ ಉತ್ತರದ ಭಾಗದವರು ತಾವು ಕಲಿತು ಆಡುವ ಕನ್ನಡ ಮಾತಿನಲ್ಲಿ ಈ ಪ್ರತ್ಯಯಗಳ ಬದಲು 'ಆಗ' ಎಂಬ ರೂಪವನ್ನೇ ಬಳಸುತ್ತಾರೆ. ಮನೆಯಾಗ,ಊರಾಗ,ತಲೆಯಾಗ ಇತ್ಯಾದಿ. ಆದರೆ ನಮ್ಮ ಶಾಲೆಯ ಪಠ್ಯಗಳಲ್ಲಿ ಇದರ ಸುಳಿವೇ ಇಲ್ಲ. ಅಂದರೆ ನಾವು ಯಾವ ಕನ್ನಡದ ರಚನೆಯನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ? ಇದು ಒಂದು ಚಿಕ್ಕ ಉದಾಹರಣೆ. ಇಂತವು ಹಲವಾರಿವೆ. ಅಂದರೆ ಕನ್ನಡದ ನಿಜವಾದ ಎಲ್ಲ ಲಕ್ಷಣಗಳನ್ನು ನಿರೂಪಿಸದ ವ್ಯಾಕರಣವನ್ನು ಮಕ್ಕಳಿಗೆ ನಾವು ಹೇಳಿಕೊಡುತ್ತಿದ್ದೇವೆ.

ಇನ್ನೊಂದು ಕಾರಣವನ್ನು ಈಗ ನೋಡೋಣ. ನಾವು ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದೇಕೆ? ಅವರಿಗಾಗಲೇ ಕನ್ನಡ ಗೊತ್ತಿರುತ್ತದೆ. ಅದರ ವ್ಯಾಕರಣ ನಿಯಮಗಳನ್ನು ಅವರು ಅಂತಸ್ಥ ಮಾಡಿಕೊಂಡಿರುತ್ತಾರೆ. ನಿಯಮಗಳೇನು ಎಂದು ವಿವರಿಸಲು ಆಗದಿದ್ದರೂ ಎಲ್ಲರೂ ವ್ಯಾಕರಣ ಬದ್ಧವಾಗಿಯೇ ಕನ್ನಡವನ್ನು ಬಳಸುತ್ತಿರುತ್ತಾರೆ. ಹಾಗಿದ್ದಲ್ಲಿ ನಾವು ನಿಯಮಗಳನ್ನು ಮತ್ತೊಮ್ಮೆ ಕಲಿಸಬೇಕೇಕೆ? ಹಾಗೆ ನೋಡಿದರೆ ನಮ್ಮ ಕನ್ನಡ ಬೋಧನೆಯ ಗುರಿ ಮುಖ್ಯವಾಗಿ ೧) ಮಕ್ಕಳ ಪದಕೋಶವನ್ನು ಹೆಚ್ಚಿಸುವ ಕಡೆಗೆ ಇರಬೇಕು ೨) ಆ ಪದಕೋಶದ ನೆರವಿನಿಂದ ಹೊಸ ಪದರಚನೆಯನ್ನು ಮಾಡಲು ಮಕ್ಕಳು ಶಕ್ತರಾಗುವಂತೆ ಮಾಡಬೇಕು ಮತ್ತು ೩) ಆವರು ಕನ್ನಡವನ್ನು ಹಲವು ಹೊಸ ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗುವಂತೆ ತರಬೇತು ನೀಡಬೇಕು. ಹಾಗೆ ನೋಡಿದರೆ ಈ ಮೂರೂ ಗುರಿಗಳ ಸಾಧನೆಗೆ ವ್ಯಾಕರಣ ನಿಯಮಗಳನ್ನು ಕಲಿಸುವುದು ಅಗತ್ಯವೆಂದು ತೋರುವುದಿಲ್ಲ.

ವ್ಯಾಕರಣ ನಿಯಮಗಳನ್ನು ಶಾಲೆಗಳಲ್ಲಿ ಹೊಸದಾಗಿ ಕಲಿಯುವ ಮೂಲಕವೇ ಭಾಷೆಯ ಬಳಕೆಯು ಸಾಧ್ಯವಾಗುತ್ತದೆ ಎಂಬ ತಿಳುವಳಿಕೆಯು ನಮ್ಮಲ್ಲಿ ಬಲವಾಗಿ ಬೇರುಬಿಟ್ಟಿದೆ. ಸಾಮಾನ್ಯ ಕಲಿಕೆಯ ತತ್ವಗಳನ್ನು ನಾವು ಭಾಷೆಯ ನೆಲೆಗೂ ಅನ್ವಯಿಸುತ್ತೇವೆ. ಗಣಿತದಲ್ಲಿ ನಿಯಮಗಳನ್ನು ಕಲಿತ ಹಾಗೆ ಅಥವಾ ವಿಜ್ಞಾನ ವಿಷಯದಲ್ಲಿ ರಚನೆಗಳನ್ನು ತಿಳಿದ ಹಾಗೆ ಭಾಷೆಯ ಕಲಿಕೆಯಲ್ಲೂ ವ್ಯಾಕರಣ ಕಲಿಕೆ ಅಗತ್ಯವೆಂದು ಒಪ್ಪಿಬಿಟ್ಟಿದ್ದೇವೆ. ಆದರೆ ಈ ನಿಯಮಗಳು ಮಕ್ಕಳಿಗೆ ಮೊದಲೇ ತಿಳಿದಿರುತ್ತವೆ. ಹಾಗಿದ್ದಲ್ಲಿ ನಮ್ಮ ಶಾಲಾ ಶಿಕ್ಷಣದಲ್ಲಿ ವ್ಯಾಕರಣವನ್ನೂ ಏಕೆ ಅಳವಡಿಸಿಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಅನ್ಯ ಭಾಷೆಯೊಂದನ್ನು ಕಲಿಸುವ ಸಂದರ್ಭಕ್ಕೆ ಅನ್ವಯಿಸುವ ವಿಧಾನವಾಗಿದೆ. ಬ್ರಿಟಿಶರು ಇಂಗ್ಲಿಶನ್ನು ನಮಗೆ ಕಲಿಸಲು ಮೊದಲು ಮಾಡಿದಾಗ ಹೀಗೆ ಭಾಷೆಯ ವ್ಯಾಕರಣವನ್ನು ಹೇಳಿಕೊಡುವ ಮೂಲಕವೇ ಅದರ ಬಳಕೆಯನ್ನು ತಿಳಿದುಕೊಳ್ಳಲು ಸಾಧ್ಯವೆಂಬ ತತ್ವವನ್ನು ಶಿಕ್ಷಣದಲ್ಲಿ ಜಾರಿಗೊಳಿಸಿದರು. ಅದನ್ನು ನಾವು ಮಕ್ಕಳು ಈಗಾಗಲೇ ಅರಿತಿರುವ ಭಾಷೆಯ ವಿಷಯಕ್ಕೂ ಅನ್ವಯಿಸಿಕೊಂಡು ಬಿಟ್ಟಿದ್ದೇವೆ. ವಿಭಕ್ತಿ,ಕಾರಕ,ಆಖ್ಯಾತ,ಸಂಧಿ ಮುಂತಾದ ವ್ಯಾಕರಣ ಪ್ರಕ್ರಿಯೆಗಳನ್ನು,ಪರಿಕಲ್ಪನೆಗಳನ್ನು ನಾವು 'ಹೇಳಿಕೊಡುವ' ಅಗತ್ಯವಿಲ್ಲ. ಆದರೆ ಭಾಷೆಯನ್ನು ಹೊಸಹೊಸ ಸನ್ನಿವೇಶಗಳಲ್ಲಿ ಬಳಸಲು ಬೇಕಾದ ಉತ್ಪಾದಕತೆಯ ಸಾಮರ್ಥ್ಯವನ್ನು ಮಾತ್ರ ಮಕ್ಕಳಲ್ಲಿ ಬೆಳಸಬೇಕಾಗುತ್ತದೆ. ಹಾಗೆ ನೋಡಿದರೆ ನಮ್ಮ ಶಾಲೆಗಳಲ್ಲಿ ಈ ನೆಲೆಗೆ ದೊರಕುತ್ತಿರುವ ಒತ್ತು ತುಂಬಾ ಕಡಿಮೆಯಾಗಿದೆ. ಹಾಗಾಗಿ ನಮ್ಮ ಮಕ್ಕಳು ತಾವು ಬಲ್ಲ ಕನ್ನಡವನ್ನು ಜೀವನದ ಬೇರೆಬೇರೆ ಸಂದರ್ಭಗಳಲ್ಲಿ ಬಳಸಲು ಹಿಂಜರಿಯುವಂತಾಗಿದೆ. ಅವರು 'ಕಲಿತ' ವ್ಯಾಕರಣ ಅವರಿಗೆ ನೆರವಾಗುವುದಿಲ್ಲ. ಅಂದರೆ ಭಾಷೆಯ ರಚನೆಯನ್ನು 'ತಿಳಿಯುವುದು' ಒಂದು ನೆಲೆಯಾದರೆ ಅದರ ಬಳಕೆಯನ್ನು 'ಕಲಿಯುವುದು' ಇನ್ನೊಂದು ನೆಲೆ. ಮೊದಲನೆಯದನ್ನು 'ಕಲಿಯಬೇಕಾಗಿಲ್ಲ'. ಹಾಗೆ ಕಲಿಸಿದರೂ ಅದು ಅವರಿಗೆ ಬಳಕೆಯ ಸಾಮರ್ಥ್ಯಗಳನ್ನು ತಂದುಕೊಡುವುದಿಲ್ಲ. ಆದರೆ ಬಳಕೆಯ ಸಾಮರ್ಥ್ಯಗಳನ್ನು ಮಾತ್ರ ಹೊಸದಾಗಿಯೇ 'ಕಲಿತು' ಗಳಿಸಿಕೊಳ್ಳಬೇಕಾಗುತ್ತದೆ. ನಮ್ಮ ಶಾಲೆಗಳಲ್ಲಿ ಈ ಅಂಶದ ಕಡೆಗೆ ನಾವು ಗಮನವನ್ನು ನೀಡುತ್ತಿಲ್ಲ.

ಈಗ ಮೂರನೆಯ ಕಾರಣ ಉರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯ. ನಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ನಾವು ಕಲಿತ ವ್ಯಾಕರಣ ಮುಂದೆ ನಮ್ಮನ್ನು ಕೈಹಿಡಿದು ನಡೆಸುವುದಿಲ್ಲವೆಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೊಸ ಪದಗಳನ್ನು ರಚಿಸುವಾಗ ನಾವು ಕಲಿತ ಸಂಧಿಯ ನಿಯಮಗಳನ್ನು ನಾವು ಲೆಕ್ಕಕ್ಕೆ ಇರಿಸಿಕೊಳ್ಳುವುದೇ ಇಲ್ಲ. ದಿನದಿನವೂ ಪತ್ರಿಕೆಗಳಲ್ಲಿ ನಮಗೆ ಓದಲು ಸಿಗುವ ಮುಂದಿನ ಹಲವಾರು ರಚನೆಗಳನ್ನು ಗಮನಿಸಿ. ಹಸುರೋತ್ಸವ,ಚುಟುಕೋತ್ಸವ,ಕನ್ನಡೀಕರಣ,ನಗದೀಕರಣ,ಸಿದ್ಧರಾಮಯ್ಯಗೆ ಆಹ್ವಾನ,ದುರ್ನಡತೆ,ಸನ್ನಡತೆ,ಮಿಲಿಯಾಂತರ ಇತ್ಯಾದಿ. ಈ ರಚನೆಗಳನ್ನು ತಪ್ಪು ಎಂದು ಹೇಳಲು ನಾವೇನೋ ಸಿದ್ಧ. ಆದರೆ ಇಂತಹ ರಚನೆಗಳನ್ನು ಸಿದ್ಧಗೊಳಿಸಿ ಬಳಸುವವರಿಗೆ ಅವರು ಕಲಿತ ವ್ಯಾಕರಣ ಏಕೆ ನೆರವಾಗಲಿಲ್ಲ? ಅಥವಾ ಅವರು ವ್ಯಾಕರಣವನ್ನು ಸರಿಯಾಗಿ ಕಲಿಯದೇ ಇದ್ದುದರಿಂದ ಹೀಗಾಯಿತು ಎಂದು ವಾದಿಸಬೇಕೆ? ಹಾಗೇನೂ ಇಲ್ಲ. ಇಂತಹ ರಚನೆಗಳು ಏಕೆ ಸಿದ್ಧಗೊಳ್ಳುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನಮ್ಮ ಕನ್ನಡವನ್ನು ನಾವಿನ್ನೂ ವಿವರಿಸಿಕೊಂಡಿಲ್ಲ. ನಮ್ಮ ಶಾಲಾ ವ್ಯಾಕರಣ ನಿಯಮಗಳು ಭಾಷೆಯನ್ನು 'ಒಡೆಯುವಾಗ' ತೋರುವ ಚಹರೆಗಳನ್ನು ಹೇಳಲು ಯತ್ನಿಸುತ್ತವೆ. ಆದರೆ ಭಾಷೆಯನ್ನು 'ಕಟ್ಟುವಾಗ' ಏನಾಗುತ್ತದೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ನಾವು ಹೇಳಿಕೊಡುತ್ತಿಲ್ಲ. ಅದರ ಪರಿಣಾಮಗಳನ್ನು ನಾವೀಗ ದಿನವೂ ನೋಡುತ್ತಿದ್ದೇವೆ.

ಶಾಸ್ತ್ರೀಯ ಭಾಷೆ

ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಭಾಷೆಗಳ ನಡುವಣ ಸಂಬಂಧಗಳಲ್ಲಿ ಹಲವಾರು ಪಲ್ಲಟಗಳಾಗುತ್ತಿವೆ. ಹಿಂದೆ ಗಣನೆಗೆ ಬಾರದಿದ್ದ ಹಲವು ಭಾಷೆಗಳು ಈಗ ರಾಜ್ಯಾಂಗದ ಎಂಟನೆಯ ಅನುಚ್ಚೇದದಲ್ಲಿ ಸೇರತೊಡಗಿವೆ. ಲಿಪಿ ಇಲ್ಲದ ಆದರೆ ಬಹುಜನರು ಬಳಸುತ್ತಿರುವ ಕೆಲವು ಭಾಷೆಗಳೀಗ ತಮಗೊಂದು ರಾಜ್ಯಾಂಗದತ್ತವಾದ ಸ್ಥಾನಮಾನಗಳು ಬೇಕೆಂದು ಹೋರಾಟಮಾಡಿ ಗೆಲ್ಲುತ್ತಿವೆ. ಹೀಗಿರುವಾಗ ಎರಡು ಸಹಸ್ರಮಾನಗಳ ಚರಿತ್ರೆಯುಳ್ಳ ಭಾಷೆಗಳು ತಮಗೊಂದು ಹೆಚ್ಚಿನ ಸ್ಥಾನ ದೊರಕಬೇಕೆಂದು ಹಪಹಪಿಸುತ್ತಿರುವುದು ಈ ಮೇಲಾಟದ ಪರಿಣಾಮವಾಗಿದೆ. ಆದ್ದರಿಂದ ಸಮಾನ ಸ್ಥಾನಮಾನದ ಜತೆಗಾರರೊಡನೆ ಹೆಚ್ಚು ಸಮಾನರಾಗ ಬಯಸುವ ಹಳೆಯ ಭಾಷೆಗಳ ಗಡಣದಲ್ಲಿ ಕನ್ನಡವೂ ಸೇರುವ ಬಯಕೆಯನ್ನು ವ್ಯಕ್ತಪಡಿಸುತ್ತಿದೆ. ಆದರೆ ನಿಜದಲ್ಲಿ ಇದರಿಂದ ಈ ನುಡಿಗೆ ಹೆಚ್ಚಿನ ಅವಕಾಶಗಳು ತನ್ನಿಂದ ತಾನೆ ಒದಗಿ ಬರುವುದಿಲ್ಲ. ಏಕೆಂದರೆ ಕ್ಲಾಸಿಕಲ್ ಭಾಷೆಯ ಸ್ಥಾನ ಪಡೆದ ತಮಿಳು ಸರಿಸುಮಾರು ೧೬೫೦ಕಿಂತ ಹಿಂದಿನ ತಮಿಳನ್ನು ಕ್ಲಾಸಿಕಲ್ ತಮಿಳಿನ ಮಾದರಿ ಎಂದು ಗುರುತಿಸಿಕೊಂಡಿದೆ. ಅಂದರೆ ಕನ್ನಡವೂ ಕ್ಲಾಸಿಕಲ್ ಸ್ಥಾನವನ್ನು ಪಡೆದರೆ ಆಗ ತನ್ನ ಯಾವುದೋ ಒಂದು ಈಗ ಬಳಕೆಯಲ್ಲಿಲ್ಲದ ಮಾದರಿಯೊಂದಕ್ಕೆ ಕ್ಲಾಸಿಕಲ್ ಪಟ್ಟವನ್ನು ಕಟ್ಟಬೇಕಾಗುತ್ತದೆ. ಜನ ಬಳಸದ ಮಾದರಿಯೊಂದನ್ನು ಕುರಿತು ನಡೆಯುವ ಅಧ್ಯಯನಗಳಿಗೆ ಮಹತ್ವವಿದೆ. ಆದರೆ ಇದರಿಂದ ಕನ್ನಡ ಬಳಕೆಯ ವಲಯಗಳನ್ನು ಹೆಚ್ಚಿಸಲು ಆಗುವುದಿಲ್ಲ. ಇಂದು ಕನ್ನಡದ ಬಳಕೆಯ ವಲಯಗಳು ಕುಗ್ಗುತ್ತಿರುವುದೇ ಮುಖ್ಯ ಸಮಸ್ಯೆಯಾಗಿದೆ. ಬಳಕೆಯಾಗುತ್ತಿರುವ ವಲಯಗಳಲ್ಲೂ ಅನೌಪಚಾರಿಕ ಮಾದರಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಹಾಗಿದ್ದಲ್ಲಿ ಪರಿಹಾರವೇನು?
ಎರಡು ಸಹಸ್ರ ಮಾನಗಳ ಬಳಕೆಯ ಚರಿತ್ರೆ ಇರುವ ಕನ್ನಡದಂತಹ ಭಾಷೆಗಳನ್ನು ಪಾರಂಪರಿಕ ಭಾಷೆಗಳೆಂದು ಗುರುತಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಭಾಷೆಯ ಚಾರಿತ್ರಿಕ ಘನತೆಯನ್ನು ಒಪ್ಪುವುದರ ಜೊತೆಗೆ ಅದು ಈಗಲೂ ಜನಭಾಷೆಯಾಗಿ ಬಳಕೆಯಲ್ಲಿರುವುದನ್ನು ಗುರುತಿಸಿದಂತೆಯೂ ಆಗುತ್ತದೆ.ಪಾರಂಪರಿಕ ಭಾಷೆಗಳ ಬಗೆಗೆ ಇತರ ಭಾಷಿಕರಲ್ಲೂ ಆಸಕ್ತಿ ಇರುತ್ತದೆ.ಆಗ ವಲಸೆಹೋದ ಕನ್ನಡಿಗರು ಮತ್ತು ಇತರ ಭಾಷಿಕರು ಬೇರೆಬೇರೆ ಕಡೆಗಳಲ್ಲಿ ಕನ್ನಡವನ್ನು ಕಲಿಯಲು ಅವಕಾಶಗಳನ್ನು ಕಲ್ಪಿಸಿಸುವುದು ಸಾಧ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಗಡಿಗಳಾಚೆಗೂ ಕನ್ನಡದ ಬಳಕೆಯ ವಲಯಗಳನ್ನು ಹೆಚ್ಚಿಸಬಹುದು. ಪಾರಂಪರಿಕ ಭಾಷೆಯೆಂದು ಕನ್ನಡದಂತಹ ಭಾಷೆಗಳನ್ನು ಗುರುತಿಸುವುದರಿಂದ ಪರಂಪರೆ ಮತ್ತು ಅಧುನಿಕತೆಗಳೆರಡನ್ನೂ ಮಾನ್ಯಮಾಡಿದಂತಾಗುತ್ತದೆ.

ಪದವಿ ತರಗತಿಗಳಲ್ಲಿ ಕನ್ನಡ

ಪದವಿ ತರಗತಿಗಳಲ್ಲಿ ಕನ್ನಡವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭಾಷೆಯನ್ನು ಕುರಿತ ಪಠ್ಯಕ್ರಮವೊಂದನ್ನು ಕಳೆದ ಅರ್ಧ ಶತಮಾನದಿಂದಲೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇರಿಸಿಕೊಂಡಿದ್ದೇವೆ. ಕೆಲವು ವಿಷಯಗಳನ್ನು ವಿಸ್ತರಿಸುವ ಅಥವಾ ಕೆಲವನ್ನು ಹ್ರಸ್ವಗೊಳಿಸುವ ಕೆಲಸ ಮಾತ್ರ ಆಗಾಗ ನಡೆಯುತ್ತಿರುವಂತಿದೆ. ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕೆಂಬ ಚಿಂತನೆ ನಡೆದು ಕೆಲವು ಪ್ರಯೋಗಗಳು ಕೂಡ ನಡೆದಿವೆ. ಈ ಬದಲಾವಣೆಗಳಿಗೆ ಪಾಠ ಮಾಡುವ ಶಿಕ್ಷಕರೇ ಕೆಲವೊಮ್ಮೆ ಆಡ್ಡಿಯಾಗುತ್ತಾರೆ ಎಂಬ ಮಾತು ಕೇಳಬರುತ್ತಿದೆ. ತಾವು ಕಲಿತದ್ದನ್ನು ಮಾತ್ರ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಅವರು ಸಿದ್ಧರಿರುತ್ತಾರೆ. ಹೊಸ ಚಿಂತನೆಗಳು ಹೊಸ ಓದನ್ನು,ಹೆಚ್ಚಿನ ಸಿದ್ಧತೆಯನ್ನು ಬಯಸುತ್ತವೆ. ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹಳೆಯದನ್ನೇ ಸರಿಯೆಂದು ವಾದಿಸುವ ಬಗೆಯೊಂದು ಇದೆ. ಇದು ಸಹಜವೇ. ಅಲ್ಲದೆ ಬದಲಾವಣೆಗಳನ್ನು ಮಾಡಬೇಕೆಂದು ಬಯಸುವವರು ಏಕೆ ಬದಲಾವಣೆ ಬೇಕೆಂಬುದನ್ನು ಎಲ್ಲರಿಗೂ ತಿಳಿಹೇಳುವಲ್ಲಿ ವಿಫಲಾಗಿರಲೂ ಬಹುದು. ಇದು ಶಿಕ್ಷಕರನ್ನು ಕುರಿತ ಟೀಕೆಯಲ್ಲ. ಬದಲಾವಣೆಗಳನ್ನು ಬಯಸುವವರು ಅನುಸರಿಸಬೇಕಾದ ವಿಧಾನವನ್ನು ಕುರಿತು ಮರುಚಿಂತನೆ ಅಗತ್ಯವೆಂದು ಹೇಳುವುದು ನನ್ನ ಉದ್ದೇಶ.ಇಲ್ಲಿಂದ ಮುಂದೆ ಈಗಿರುವ ಪಠ್ಯಕ್ರಮದ ಬದಲಿಗೆ ಯಾವ ವಿಷಯಗಳನ್ನು ಪಾಠ ಹೇಳಬಹುದು ಎಂಬುದನ್ನು ಮೊದಲು ಸೂಚಿಸುತ್ತೇನೆ. ಅನಂತರ ಏಕೆ ಈ ಬದಲಾವಣೆ ಬೇಕೆಂಬುದನ್ನು ಕುರಿತು ಕೆಲವು ಮಾತುಗಳನ್ನು ಹೇಳುತ್ತೇನೆ.

ಮುಖ್ಯವಾಗಿ ಎರಡು ನೆಲೆಗಳಲ್ಲಿ ನಮ್ಮ ವಿಷಯಗಳನ್ನು ವಿಂಗಡಿಸಿಕೊಳ್ಳಬೇಕು. ೧) ಭಾಷೆಯನ್ನು ಕುರಿತ ಸಾಮಾನ್ಯ ವಿಚಾರಗಳು ೨) ಕನ್ನಡ ಭಾಷಾ ರಚನೆಯನ್ನು ಕುರಿತ ವಿಚಾರಗಳು. ಈಗಿರುವಂತೆ ಎರಡು ಚಾತುರ್ಮಾಸಗಳಲ್ಲಿ ಇವುಗಳನ್ನು ವಿಂಗಡಿಸಿಕೊಳ್ಳಬಹುದು. ಇದೇ ಅನುಕ್ರಮದಲ್ಲಿ ವಿಷಯಗಳನ್ನು ಇರಿಸಿಕೊಳ್ಳಬೇಕು.

ಅ)ಭಾಷೆಯನ್ನು ಕುರಿತು ಸಾಮಾನ್ಯ ವಿಚಾರಗಳು:

೧) ಭಾಷೆ ಎಂದರೇನು? ಪಾರಂಪರಿಕ ಚಿಂತನೆಗಳು ,ಪರಿಚಿತ ಚಿಂತನೆಗಳು ಮತ್ತು ಆಧುನಿಕ ಸಿದ್ಧಾಂತಗಳು
೨) ಭಾಷೆಯ ರಚನೆ,ಬಳಕೆ ಮತ್ತು ಬದಲಾವಣೆ - ಇವುಗಳ ಪರಿಚಯ
೩) ಭಾಷೆ ಮತ್ತು ಸಮಾಜ; ಭಾಷೆ ಮತ್ತು ಮನಸ್ಸು
೪) ಜಗತ್ತಿನ ಭಾಷೆಗಳು;ಭಾರತದ ಭಾಷೆಗಳು;ದ್ರಾವಿಡ ಭಾಷೆಗಳು;ಕನ್ನಡದ ಹಳಮೆ

ಆ)ಕನ್ನಡವನ್ನು ಕುರಿತ ವಿಚಾರಗಳು

೧) ಕನ್ನಡ ಧ್ವನಿರಚನೆ
೨) ಕನ್ನಡದ ಪದರಚನೆ
೩) ಕನ್ನಡದ ವಾಕ್ಯ ರಚನೆ
೪) ಕನ್ನಡ ಪದಕೋಶ: ಸ್ವರೂಪ
೫) ಕನ್ನಡ ವಿವಿಧ ಪ್ರಭೇದಗಳು ಅ) ಚಾರಿತ್ರಿಕ ಆ) ಪ್ರಾದೇಶಿಕ ಇ)ಸಾಮಾಜಿಕ ಈ)ಸಾಂದರ್ಭಿಕ
೬) ವಿವಿಧ ಸಂವಹನ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಾಗುವ ಬಗೆ

ಪ್ರತಿ ಚಾತುರ್ಮಾಸದಲ್ಲಿ ಸರಾಸರಿ ಭಾಷಾ ವಿಷಯ ಬೊಧನೆಗೆ ಹದಿನಾರು ಅವಧಿಗಳ ಬೋಧನೆಯ ಅವಕಾಶ ಸಿಗುತ್ತದೆಯೆಂದು ಯೋಚಿಸಿ ಈ ವಿಷಯಗಳನ್ನು ಪಟ್ಟಿ ಮಾಡಲಾಗಿದೆ.

ಶಬ್ದಮಣಿದರ್ಪಣವನ್ನು ಪಠ್ಯವನ್ನಾಗಿ ಇರಿಸುವುದನ್ನು ಪೂರ್ಣವಾಗಿ ಕೈಬಿಡಬೇಕು. ಅದರಿಂದ ಏನೂ ಉಪಯೋಗವಿಲ್ಲ. ಇದು ಆ ಗ್ರಂಥಕ್ಕಾಗಲೀ ಅದರ ಕರ್ತೃವಿಗಾಗಲೀ ಮಾಡುತ್ತಿರುವ ಅಪಚಾರವೆಂದು ತಿಳಿಯಬಾರದು. ಈಗ ಕನ್ನಡವನ್ನು ಪದವಿ ತರಗತಿಗಳಲ್ಲಿ ವಿಶೇಷ ವಿಷಯವನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಅದು ಅನಗತ್ಯ. ಹೆಚ್ಚಿನ ಓದಿಗೆ ಮುಂದೆ ಹೋಗುವವರು ತಮ್ಮ ಅಧ್ಯಯನದ ಯಾವುದಾದರೂ ಒಂದು ಹಂತದಲ್ಲಿ ಅಗತ್ಯ ಬಿದ್ದರೆ ಓದುತ್ತಾರೆ. ಶಬ್ದಮಣಿ ದರ್ಪಣ ಎಲ್ಲ ವಿದ್ಯಾರ್ಥಿಗಳೂ ಓದಲೇ ಬೇಕೆಂದು ಹೇಳುವುದರಲ್ಲಿ ಅರ್ಥವಿಲ್ಲ. ಅದನ್ನು ಓದದಿದ್ದರೆ ಹಳಗನ್ನಡ ಅರ್ಥವಾಗುವುದಿಲ್ಲ ಎಂಬ ಅಪಕಲ್ಪನೆಯನ್ನೂ ಬಿಡಬೇಕು. ಈಗಾಗಲೇ ಈ ಕುರಿತು ಡಾ.ಡಿ.ಎನ್.ಶಂಕರಭಟ್ಟರು ತಮ್ಮ ನಿಜಕ್ಕೂ 'ಹಳಗನ್ನಡ ವ್ಯಕರಣ ಎಂತಹುದು" ಎಂಬ ಗ್ರಂಥದಲ್ಲಿ ವಿವೇಚನೆ ಮಾಡಿದ್ದಾರೆ. ಹಳಗನ್ನಡ ನಮಗೆ ಗ್ರಹಿಕೆಯ ಭಾಷೆ ಬಳಕೆಯ ಭಾಷೆಯಲ್ಲ. ಅದನ್ನು ಓದಿ ತಿಳಿಯುವುದನ್ನು ಕಲಿಸುವ ಬೇರೆ ವಿಧಾನಗಳಿವೆ. ನಮ್ಮ ಶಿಕ್ಷಕರು ಅದನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಕನ್ನಡ ಕಾವ್ಯ ಪರಂಪರೆಯನ್ನು ಬಲ್ಲವರಿಗೆ ವ್ಯಾಕರಣಗಳ ಮೂಲಕ ಅವುಗಳನ್ನು ಪ್ರವೇಶ ಮಾಡುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿರುತ್ತದೆ.

ಮೂರನೆಯ ವರ್ಷದಲ್ಲಿ ಅಂದರೆ ಐದು ಮತ್ತು ಆರನೆಯ ಚಾತುರ್ಮಾಸಗಳಲ್ಲಿ ಭಾಷಾಧ್ಯಯನದ ಇನ್ನಿತರ ನೆಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಪಠ್ಯಕ್ರಮವನ್ನು ರೂಪಿಸಬೇಕು. ಅದರ ಸ್ಥೂಲ ವಿವರವನ್ನು ಮುಂದೆ ಕೊಡಲು ಪ್ರಯತ್ನಿಸಿದ್ದೇನೆ.

ಅ)ಕನ್ನಡ ಭಾಷೆಯಲ್ಲಿ ಆಗಿರುವ ಬದಲಾವಣೆಗಳು

೧) ಧ್ವನಿ ರಚನೆಯಲ್ಲಿ ಮತ್ತು ನಿಯಮಗಳಲ್ಲಿ ಅಗಿರುವ ಬದಲಾವಣೆಗಳು
೨) ಪದರಚನೆಯ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು
೩) ವಾಕ್ಯ ರಚನೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳು
೪) ಕನ್ನಡ ಶಬ್ದಕೋಶದಲ್ಲಿ ಅಗಿರುವ ಬದಲಾವಣೆ;ಹೊಸ ಪ್ರವೃತ್ತಿಗಳು
೫) ಶಬ್ದಾರ್ಥಗಳ ಸಂಬಂಧದ ವಿವಿಧ ನೆಲೆಗಳು: ನುಡಿಗಟ್ಟು,ವಾಗ್ರೂಢಿ,ಒಗಟು,ನಗೆಹನಿ

ಆ)ಕನ್ನಡ ಮಾತು ಮತ್ತು ಬರವಣಿಗೆ
೧) ಮಾತು ಮತ್ತು ಬರವಣಿಗೆಗಳ ಸಂಬಂಧ
೨) ಕನ್ನಡ ಬರವಣಿಗೆಯ ವಿವಿಧ ವಲಯಗಳು ಮತ್ತು ಬಗೆಗಳು
೩) ಬರೆವಣಿಗೆಯ ಮೇಲೆ ತಂತ್ರಜ್ಞಾನದ ಪ್ರಭಾವ
೪) ಕನ್ನಡ ಮಾತಿನ ವಲಯಗಳು: ನಿರೂಪಣೆ,ಸಂಭಾಷಣೆ,ಕಥನ
೫) ಕನ್ನಡ ಸಾಹಿತ್ಯ ಭಾಷೆಯ ಕೆಲವು ಮುಖ್ಯ ಚಹರೆಗಳು

ಈ ಎಲ್ಲ ವಿಷಯಗಳನ್ನು ಏಕೆ ಪಾಠಮಾಡಬೇಕು?

ಈವರೆಗೆ ನಾವು ನಾವು ಕನ್ನಡದ ಚಾರಿತ್ರಿಕ ಸ್ವರೂಪವನ್ನು ಹಳೆಯ ಮಾದರಿಯಲ್ಲಿ ಹೇಳಿಕೊಡುತ್ತಿದ್ದೆವು. ಆದರೆ ಈಗ ಕನ್ನಡ ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತು ಅದರ ವಿವಿಧ ನೆಲೆಗಳೇನು ಎಂಬುದನ್ನು ಪರಿಚಯ ಮಾಡಿಕೊಡಬೇಕು. ಅದರಿಂದ ಅವರಿಗೆ ತಾವು ತಿಳಿದುಕೊಳ್ಳುತ್ತಿರುವುದು ಯಾವುದೋ ನಮಗೆ ಸಂಬಂಧಪಡದ ವಿಷಯ ಎನ್ನುವ ಭಾವನೆ ಮೂಡುವುದಿಲ್ಲ. ಬದಲಿಗೆ ಅವರು ತಮ್ಮ ನಿತ್ಯದ ವ್ಯವಹಾರದ ನೆಲೆಗಳನ್ನು ಇನ್ನಷ್ಟು ಚೆನ್ನಾಗಿ ತಿಳಿಯ ಬಲ್ಲರು.

ಬೋಧನೆಗಾಗಿ ಹೊಸ ವಿಧಾನಗಳನ್ನು ಅನುಸರಿಸಲು ಇದರಿಂದ ಅವಕಾಶಗಳು ದೊರೆಯುತ್ತವೆ. ಅಧ್ಯಾಪಕರು ತಾವು ಚರ್ಚಿಸುತ್ತಿರುವ ಹತ್ತಾರು ವಿಷಯಗಳಿಗೆ ನಿದರ್ಶನಗಳನ್ನು ನಿತ್ಯದ ಕನ್ನಡ ಭಾಷಾ ಬಳಕೆಯಿಂದ ಆಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ಕನ್ನಡವನ್ನು ಕೇಳಿ ,ಓದಿ ಅದರ ವಿವಿಧ ಸಾಧ್ಯತೆಗಳನ್ನು ಗ್ರಹಿಸಲು ವಿದ್ಯಾರ್ಥಿಗಳಿಗೂ ಸೂಚನೆಯನ್ನು ಮಾಡುವುದು ಸಾಧ್ಯ. ಇದಕ್ಕಾಗಿ ಅಗತ್ಯವಾದ ವರ್ಕ್ ಬುಕ್ ಅನ್ನು ಸಿದ್ಧ ಮಾಡಬೇಕಾಗುತ್ತದೆ.

ಈ ಎಲ್ಲ ವಿಷಯಗಳನ್ನು ಪಾಠ ಮಾಡಬೇಕು ಎನ್ನುವುದು ಒಂದು ನೆಲೆಯಾದರೆ ಇವೆಲ್ಲವನ್ನೂ ಹೇಳಲು ಅಗತ್ಯವಾದ ಸಾಮಗ್ರಿ ಒಂದೆಡೆ ದೊರೆಯುವುದಿಲ್ಲ ಎನ್ನುವುದು ಇನ್ನೊಂದು ಮಾತು. ಈ ಕೊರತೆಯನ್ನು ನಿವಾರಣೆಮಾಡಲು ತಕ್ಕ ಪಠ್ಯವಸ್ತುವನ್ನು ಅಧ್ಯಾಪಕರ ಕಮ್ಮಟವನ್ನು ನಡೆಸಿ ಸಿದ್ಧಪಡಿಸಬೇಕಾಗುತ್ತದೆ. ಜೊತೆಗೆ ಪಾಠ ಮಾಡುವ ಅಧ್ಯಾಪಕರೂ ತಮ್ಮ ಅನುಭವದ ನೆರವಿನಿಂದ ಪೂರಕ ಸಾಮಗ್ರಿಯನ್ನು ರೂಪಿಸಿಕೊಳ್ಳಬಲ್ಲರು.

ಈ ಎಲ್ಲ ಬದಲಾವಣೆಯ ಹಿಂದೆ ಇರುವ ತರ್ಕ ಸರಳ. ೧) ಈವರೆಗೆ ನಾವು ಹೇಳಿಕೊಡುತ್ತಿರುವ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವಷ್ಟು ಪ್ರಸ್ತುತವಾಗಿರಲಿಲ್ಲ.ಅಲ್ಲದೆ ಭಾಷಾಶಾಸ್ತ್ರದಲ್ಲಿ ಈಚೆಗೆ ನಡೆದಿರುವ ಅಧ್ಯಯನಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ೨) ಕನ್ನಡವೆಂದರೆ ನಮ್ಮಿಂದ ಬೇರೆಯಾದ ಸಂಗತಿಯಲ್ಲ. ನಮ್ಮೊಡನೆ ಇರುವ ನಮ್ಮ ವ್ಯಕ್ತಿತ್ವದ ಭಾಗವೇ ಅಗಿರುವ ಸಂಗತಿಯಾದ್ದರಿಂದ ಅದರ ಸ್ವರೂಪವನ್ನು ತಿಳಿಯಲು ಹೊಸ ದಾರಿಗಳನ್ನು ಹಿಡಿಯಬೇಕು. ೩) ಇಂದಿನ ಕಾಲಮಾನದ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತಿಳಿವಿನ ಹೊಸ ದಾರಿಗಳನ್ನು ತೋರಿಸಿಕೊಡಬೇಕು. ೪) ಮುಂದೆ ಇವುಗಳಲ್ಲಿ ಯಾವುದಾದರೊಂದು ನೆಲೆಯನ್ನಾದರೂ ವಿಸ್ತರಿಸಿಕೊಳ್ಳುತ್ತ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.