Monday, February 26, 2007

ಶಾಸ್ತ್ರೀಯ ಭಾಷೆ

ಕಳೆದ ಐವತ್ತು ವರ್ಷಗಳಲ್ಲಿ ಭಾರತದ ಭಾಷೆಗಳ ನಡುವಣ ಸಂಬಂಧಗಳಲ್ಲಿ ಹಲವಾರು ಪಲ್ಲಟಗಳಾಗುತ್ತಿವೆ. ಹಿಂದೆ ಗಣನೆಗೆ ಬಾರದಿದ್ದ ಹಲವು ಭಾಷೆಗಳು ಈಗ ರಾಜ್ಯಾಂಗದ ಎಂಟನೆಯ ಅನುಚ್ಚೇದದಲ್ಲಿ ಸೇರತೊಡಗಿವೆ. ಲಿಪಿ ಇಲ್ಲದ ಆದರೆ ಬಹುಜನರು ಬಳಸುತ್ತಿರುವ ಕೆಲವು ಭಾಷೆಗಳೀಗ ತಮಗೊಂದು ರಾಜ್ಯಾಂಗದತ್ತವಾದ ಸ್ಥಾನಮಾನಗಳು ಬೇಕೆಂದು ಹೋರಾಟಮಾಡಿ ಗೆಲ್ಲುತ್ತಿವೆ. ಹೀಗಿರುವಾಗ ಎರಡು ಸಹಸ್ರಮಾನಗಳ ಚರಿತ್ರೆಯುಳ್ಳ ಭಾಷೆಗಳು ತಮಗೊಂದು ಹೆಚ್ಚಿನ ಸ್ಥಾನ ದೊರಕಬೇಕೆಂದು ಹಪಹಪಿಸುತ್ತಿರುವುದು ಈ ಮೇಲಾಟದ ಪರಿಣಾಮವಾಗಿದೆ. ಆದ್ದರಿಂದ ಸಮಾನ ಸ್ಥಾನಮಾನದ ಜತೆಗಾರರೊಡನೆ ಹೆಚ್ಚು ಸಮಾನರಾಗ ಬಯಸುವ ಹಳೆಯ ಭಾಷೆಗಳ ಗಡಣದಲ್ಲಿ ಕನ್ನಡವೂ ಸೇರುವ ಬಯಕೆಯನ್ನು ವ್ಯಕ್ತಪಡಿಸುತ್ತಿದೆ. ಆದರೆ ನಿಜದಲ್ಲಿ ಇದರಿಂದ ಈ ನುಡಿಗೆ ಹೆಚ್ಚಿನ ಅವಕಾಶಗಳು ತನ್ನಿಂದ ತಾನೆ ಒದಗಿ ಬರುವುದಿಲ್ಲ. ಏಕೆಂದರೆ ಕ್ಲಾಸಿಕಲ್ ಭಾಷೆಯ ಸ್ಥಾನ ಪಡೆದ ತಮಿಳು ಸರಿಸುಮಾರು ೧೬೫೦ಕಿಂತ ಹಿಂದಿನ ತಮಿಳನ್ನು ಕ್ಲಾಸಿಕಲ್ ತಮಿಳಿನ ಮಾದರಿ ಎಂದು ಗುರುತಿಸಿಕೊಂಡಿದೆ. ಅಂದರೆ ಕನ್ನಡವೂ ಕ್ಲಾಸಿಕಲ್ ಸ್ಥಾನವನ್ನು ಪಡೆದರೆ ಆಗ ತನ್ನ ಯಾವುದೋ ಒಂದು ಈಗ ಬಳಕೆಯಲ್ಲಿಲ್ಲದ ಮಾದರಿಯೊಂದಕ್ಕೆ ಕ್ಲಾಸಿಕಲ್ ಪಟ್ಟವನ್ನು ಕಟ್ಟಬೇಕಾಗುತ್ತದೆ. ಜನ ಬಳಸದ ಮಾದರಿಯೊಂದನ್ನು ಕುರಿತು ನಡೆಯುವ ಅಧ್ಯಯನಗಳಿಗೆ ಮಹತ್ವವಿದೆ. ಆದರೆ ಇದರಿಂದ ಕನ್ನಡ ಬಳಕೆಯ ವಲಯಗಳನ್ನು ಹೆಚ್ಚಿಸಲು ಆಗುವುದಿಲ್ಲ. ಇಂದು ಕನ್ನಡದ ಬಳಕೆಯ ವಲಯಗಳು ಕುಗ್ಗುತ್ತಿರುವುದೇ ಮುಖ್ಯ ಸಮಸ್ಯೆಯಾಗಿದೆ. ಬಳಕೆಯಾಗುತ್ತಿರುವ ವಲಯಗಳಲ್ಲೂ ಅನೌಪಚಾರಿಕ ಮಾದರಿಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಹಾಗಿದ್ದಲ್ಲಿ ಪರಿಹಾರವೇನು?
ಎರಡು ಸಹಸ್ರ ಮಾನಗಳ ಬಳಕೆಯ ಚರಿತ್ರೆ ಇರುವ ಕನ್ನಡದಂತಹ ಭಾಷೆಗಳನ್ನು ಪಾರಂಪರಿಕ ಭಾಷೆಗಳೆಂದು ಗುರುತಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಭಾಷೆಯ ಚಾರಿತ್ರಿಕ ಘನತೆಯನ್ನು ಒಪ್ಪುವುದರ ಜೊತೆಗೆ ಅದು ಈಗಲೂ ಜನಭಾಷೆಯಾಗಿ ಬಳಕೆಯಲ್ಲಿರುವುದನ್ನು ಗುರುತಿಸಿದಂತೆಯೂ ಆಗುತ್ತದೆ.ಪಾರಂಪರಿಕ ಭಾಷೆಗಳ ಬಗೆಗೆ ಇತರ ಭಾಷಿಕರಲ್ಲೂ ಆಸಕ್ತಿ ಇರುತ್ತದೆ.ಆಗ ವಲಸೆಹೋದ ಕನ್ನಡಿಗರು ಮತ್ತು ಇತರ ಭಾಷಿಕರು ಬೇರೆಬೇರೆ ಕಡೆಗಳಲ್ಲಿ ಕನ್ನಡವನ್ನು ಕಲಿಯಲು ಅವಕಾಶಗಳನ್ನು ಕಲ್ಪಿಸಿಸುವುದು ಸಾಧ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಗಡಿಗಳಾಚೆಗೂ ಕನ್ನಡದ ಬಳಕೆಯ ವಲಯಗಳನ್ನು ಹೆಚ್ಚಿಸಬಹುದು. ಪಾರಂಪರಿಕ ಭಾಷೆಯೆಂದು ಕನ್ನಡದಂತಹ ಭಾಷೆಗಳನ್ನು ಗುರುತಿಸುವುದರಿಂದ ಪರಂಪರೆ ಮತ್ತು ಅಧುನಿಕತೆಗಳೆರಡನ್ನೂ ಮಾನ್ಯಮಾಡಿದಂತಾಗುತ್ತದೆ.

No comments: