Monday, February 26, 2007

ಓದುವುದು ಎಂದರೇನು?

ಈಚೆಗೆ ಹೆಚ್ಚು ಕಳವಳ ಮೂಡಿಸುವ ದನಿಯಲ್ಲಿದ್ದ ವರದಿಯೊಂದು ಎಲ್ಲ ಕಡೆಗಳಲ್ಲೂ ಪ್ರಕಟಗೊಂಡಿತು. ಅದರಂತೆ ಕನ್ನಡ ನಾಡಿನ ಐದನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ನೂರಕ್ಕೆ ಅರವತ್ತು ಮಂದಿಗೆ ಒಂದೆರಡು ಕನ್ನಡ ವಾಕ್ಯಗಳನ್ನು ಕೂಡ ತಪ್ಪಿಲ್ಲದೆ ಓದಲು ಬರುವುದಿಲ್ಲ. ಎಲ್ಲರಲ್ಲೂ ಆತಂಕ ಮೂಡಿಸುವ ಸುದ್ದಿಯಿದು. ನಮ್ಮ ಮಕ್ಕಳು ಹೀಗೆ ಓದುವುದರಲ್ಲಿ ಹಿಂದೆ ಬಿದ್ದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು 'ಪ್ರಥಮ'ಎಂಬ ಸಂಸ್ಥೆಯೊಂದು ತನ್ನದೇ ಆದ ರೀತಿಯಲ್ಲಿ ಪರಿಶೀಲನೆ ಮಾಡಿ ಈ ಸಂಗತಿಯನ್ನು ಎಲ್ಲರ ಗಮಕ್ಕೆ ತಂದಿದೆ. ತನ್ನ ವರದಿಯನ್ನು ಪ್ರಕಟಿಸಿದೆ. ಈ ಸಮೀಕ್ಷೆಯಲ್ಲಿ ಕಂಡು ಬಂದ ಮಾಹಿತಿಯನ್ನು ಆಧರಿಸಿ ಪತ್ರಿಕೆಗಳು ಸುದ್ದಿ ಮಾಡಿದವು. ಸಂಪಾದಕೀಯದಲ್ಲಿ ಆತಂಕವನ್ನು ತೋರಿದವು. ಅಗ್ರಲೇಖನಗಳನ್ನು ಬರೆದು ನಮ್ಮ ಶಿಕ್ಷಣದಲ್ಲಿ ಕಲಿಕೆಗೆ ಕೊನೆಯ ಮಣೆಯಷ್ಟೇ ದೊರಕುತ್ತಿದೆ ಎಂದು ಹಲುಬಿದವು. ಸರ್ಕಾರದ ಯಾವುದೇ ಇಲಾಖೆಯಿಂದ ಈ 'ಅಪಾಯಕಾರಿ ಪರಿಸ್ಥಿತಿ' ಬಗ್ಗೆ ಅಧಿಕೃತವಾದ ಪ್ರತಿಕ್ರಿಯೆಯೊಂದು ಪ್ರಕಟವಾದಂತೆ ಕಂಡುಬರುತ್ತಿಲ್ಲ.

'ಪ್ರಥಮ' ಸಂಸ್ಥೆಯ ಈ 'ಶೋಧ'ದ ಸರಿ ತಪ್ಪುಗಳನ್ನು ಕುರಿತು ಮಾತನಾಡುವ ಮೊದಲು 'ಓದುವುದು' ಎಂದರೇನು ಎಂಬ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಅಗತ್ಯ. ಓದುವುದು ಒಂದು ಬಗೆಯಲ್ಲಿ 'ಒಳಗೆ ಪಡೆದುಕೊಳ್ಳುವ' ಕೆಲಸ.ಬೇರೆಯವರು ಮಾತನಾಡುವಾಗ ಕೇಳಿ ಅದನ್ನು ನಾವು ಅರಿತುಕೊಳ್ಳುವ ಹಾಗೆ ಬೇರೆಯವರು ಬರೆದದ್ದನ್ನು ನಾವು ಓದಿ ತಿಳಿದುಕೊಳ್ಳುತ್ತೇವೆ.ನಾವು ಬರೆಯುವಾಗ ಅಥವಾ ನಾವು ಬರೆದದ್ದನ್ನು ಓದುವಾಗಲೂ ಇದೇ ಕೆಲಸ ನಡೆಯುತ್ತಿರುತ್ತದೆ. ಓದುವಾಗ ಕಣ್ಣು ಕೆಲಸ ಮಾಡುತ್ತದೆ. ಇದರ ಜೊತೆಗೆ ನಾವು ನುಡಿಯಲು ಬಳಸುವ ದೇಹದ ಅಂಗಗಳು ಕೆಲಸ ಮಾಡುತ್ತವೆ. ಅದರಿಂದಾಗಿ ನಮ್ಮ ಕಿವಿಯೂ ಕೆಲಸ ಮಾಡುತ್ತದೆ. ನಮ್ಮ ನುಡಿಯುವ ಅಂಗಗಳು ಕೆಲಸ ಮಾಡುವಾಗ ನಮ್ಮ ಕಿವಿಯೂ ಕೆಲಸ ಮಾಡುವುದು. ಇವೆರಡು ಒಟ್ಟಾಗಿ ನಡೆಯುವ ಕೆಲಸಗಳು. ಆದರೆ ಕಣ್ಣು ಓದುವ ಕೆಲಸ ಮಾಡುವಾಗ ನಮ್ಮ ನುಡಿಯುವ ಅಂಗಗಳು ಕೆಲಸ ಮಾಡಲೇ ಬೇಕೆಂದಿಲ್ಲ. ಅಂದರೆ ಓದುವುದು ಮೂರು ನೆಲೆಯ ಕೆಲಸ. ಕಣ್ಣಿನ ಕೆಲಸ,ಕಿವಿಯ ಕೆಲಸ,ನುಡಿಯುವ ಅಂಗಗಳ ಕೆಲಸ.

ಶಾಲೆಯಲ್ಲಿ ಬರೆಯುವುದನ್ನು ಮತ್ತು ಓದುವುದನ್ನು ಕಲಿಸಲು ಈಗ ಬಳಸುತ್ತಿರುವ ವಿಧಾನಗಳು ಭಾಷೆ ಮತ್ತು ಬರವಣಿಗೆಯ ಅತಿ ಚಿಕ್ಕ ಘಟಕವನ್ನು ಆಧಾರವಾಗಿ ಇರಿಸಿಕೊಂಡಿರುತ್ತವೆ. ಇದರಲ್ಲಿ ತಪ್ಪೇನೂ ಇಲ್ಲವಾದರೂ ನಮ್ಮ ಓದು ಮತ್ತು ಬರೆಹಗಳು ಮುಂದೆಯೂ ಹಾಗೆ ಉಳಿಯುವುದಿಲ್ಲ. ಬರಹದ ಮಾತನ್ನು ಸದ್ಯ ಬದಿಗಿಡೋಣ. ಓದು ಎಂಬ ಕೌಶಲ ನಮ್ಮಲ್ಲಿ ಬೆಳೆಯುವ ಬಗೆಯನ್ನು ನೋಡೋಣ. ಮೊದಲು ಓದುವುದು ಎಂದರೆ ಬರಹದಲ್ಲಿ ಕಾಣಿಸುವ ಅಕ್ಷರಘಟಕಗಳೆಲ್ಲವನ್ನೂ ಅವು ಇರುವಂತೆಯೇ ಬೇರೆಬೇರೆಯಾಗಿ ಗ್ರಹಿಸಿ ಉಚ್ಚರಿಸುವುದು ಎಂದೇ ತಿಳಿಯುತ್ತೇವೆ ಹಾಗೆಯೇ ಓದುತ್ತೇವೆ.ನುಡಿಯುವ ಅಂಗಗಳ ನೆರೆವಿಲ್ಲದೆ ಓದುವುದು ಸಾದ್ಯವೇ ಇಲ್ಲ ಎನ್ನುವಂತೆ ನಮಗೆ ತರಬೇತನ್ನು ನೀಡಲಾಗುತ್ತದೆ. ಆದರೆ ದಿನಕಳೆದಂತೆ ನಾವು ಓದುವಾಗ ಮೌನವಾಗುತ್ತೇವೆ. ನುಡಿಯುವ ಅಂಗಗಳಿಗೆ ಕೆಲಸವನ್ನು ನೀಡುವುದಿಲ್ಲ. 'ಮೌನವಾಗಿ' ಓದುತ್ತೇವೆ. ಇಂತಹ ಓದಿನಲ್ಲಿ ಕಣ್ಣಿಗೆ ಕೆಲಸ ಹೆಚ್ಚು. ಕಣ್ಣಿನ ಮೂಲಕ ಓದುವಾಗ ಬರಹದ ಪ್ರತಿ ಘಟಕವನ್ನೂ ಬಿಡಿಬಿಡಿಯಾಗಿ ನಾವು ಗ್ರಹಿಸುವುದಿಲ್ಲ. ಒಂದು ಪದವನ್ನು ಒಂದು ಚಿತ್ರದಂತೆ ಇಡಿಯಾಗಿ ಗ್ರಹಿಸಿ ಓದುತ್ತೇವೆ. ಅದರಿಂದ ನಮ್ಮ ಓದಿಗೆ ಯಾವ ಅಡ್ಡಿಯೂ ಇಲ್ಲ. ಎಷ್ಟೋ ವೇಳೆ ನಾವು 'ಓದಿದ',ಸರಿಯಾಗಿ ಅರಿತುಕೊಂಡ ವಾಕ್ಯವೊಂದರಲ್ಲಿ ಬಳಕೆಯಾದ ಪದವೊಂದರ ಕಾಗುಣಿತ ನಮಗೆ ಗೊತ್ತಿರದೇ ಹೋಗಬಹುದು.ಇದರಿಂದಲೇ ನಾವು ನೂರಾರು ಬಾರಿ ಸರಿಯಾಗಿ ಓದಿದ ಪದಗಳನ್ನು ಬರೆಯುವಾಗ ತಪ್ಪು ಮಾಡುತ್ತಲೇ ಇರುತ್ತೇವೆ. ಅಂದರೆ ಓದಿದ ಪದದ ಪ್ರತಿ ಘಟಕವನ್ನೂ ನಾವು ಗ್ರಹಿಸುವುದು ಓದಿನಲ್ಲಿ ಅನಿವಾರ್ಯವಲ್ಲ. ಹೀಗಾಗುವುದು ಸರಿಯೋ ತಪ್ಪೋ ಎಂದು ಪ್ರಶ್ನೆ ಹಾಕುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಇರುವುದೇ ಹಾಗೆ. ಹೀಗೆಯೆ ಸಾವಿರಾರು ಪುಟಗಳನ್ನು ನಾವು ಓದುತ್ತಲೇ ಇದ್ದೇವೆ.

ಒಂದು ಚಿಕ್ಕ ಪರೀಕ್ಷೆಯನ್ನು ನಾವೇ ಮಾಡಿಕೊಳ್ಳಬಹುದು. ದಿನಪತ್ರಿಕೆಯೊಂದನ್ನು ಓದುವಾಗ ಅಲ್ಲಿರುವ ಪ್ರತಿ ಪದವನ್ನೂ ಬಿಡದೇ ಗಟ್ಟಿಯಾಗಿ ಉಚ್ಚರಿಸಿ ಓದಲು ಪ್ರಯತ್ನಿಸಿ ನೋಡಿ. ಆಗ ಎರಡು ಬಗೆಯ ಅಡ್ಡಿಗಳು ಎದುರಾಗುತ್ತವೆ.ಒಂದು: ಎಷ್ಟೋ ಪದಗಳನ್ನು ನಾವು ಸರಿಯಾಗಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಎರಡು: ನಮ್ಮ ಓದು ಬೇಸರವೆನಿಸುವಷ್ಟು ನಿಧಾನವಾಗುತ್ತದೆ. ಓದುವುದೇ ಆಯಾಸದ ಕೆಲಸವಾಗುತ್ತದೆ. ಆದರೆ ಕಣ್ಣಿನಿಂದ ಓದುವಾಗ ಈ ತೊಂದರೆಯನ್ನು ನಾವು ಅನುಭವಿಸುವುದಿಲ್ಲ. ಸರಾಗವಾಗಿ ಓದಿ ಅರಿತುಕೊಳ್ಳುತ್ತೇವೆ. ಇದರಿಂದ ಗೊತ್ತಾವುದೇನು? ನಾವು ಶಾಲೆಯಲ್ಲಿ ಓದಲು ಕಲಿಯುವ ಬಗೆ ಮುಂದೆ ನಮಗೆ ಉಪಯೋಗಕ್ಕೆ ಬರುವುದಿಲ್ಲ. ಆ ಕೌಶಲವನ್ನು ನಾವು ಮುಂದೆ ಅಲ್ಲಿ ಕಲಿತ ಬಗೆಯಲ್ಲಿ ಬಳಸುವುದೇ ಇಲ್ಲ.

ಕೆಲವು ವೃತ್ತಿಗಳಲ್ಲಿ ಬರೆದದ್ದನ್ನು ಗಟ್ಟಿಯಾಗಿ ಓದಿ ಹೇಳುವುದು ಅಗತ್ಯವಾಗಿರುತ್ತದೆ. ಈಚೆಗೆ ಅಂತಹ ವೃತ್ತಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಉದಾ.ಗೆ. ವಾರ್ತಾ ವಾಚಕರು,ನಿರೂಪಕರು,ನಟರು. ಇವರೆಲ್ಲ ಯಾರೋ ಬರೆದದ್ದನ್ನು ತಾವು ನುಡಿಯುವ ಅಂಗಗಳನ್ನು ಬಳಸಿ ಓದಬೇಕಾಗುತ್ತದೆ.;ಹೇಳಬೇಕಾಗುತ್ತದೆ. ಆಗ ಅವರು ಉಚ್ಚಾರಣೆಯ ಅತಿ ಚಿಕ್ಕ ಘಟಕವನ್ನೂ ಬಿಡದೇ ಉಚ್ಚರಿಸಬೇಕು. ಇದು ಬೆಳೆಸಿಕೊಳ್ಳಬೇಕಾದ ಕೌಶಲ. ಶಾಲೆಯ ಓದಿನ ಕಲಿಕೆಯಷ್ಟೇ ಇದಕ್ಕೆ ಸಾಲದು.

ಇದೆಲ್ಲವನ್ನೂ ಹೇಳಿದ್ದಕ್ಕೆ ಕಾರಣವಿದೆ. 'ಪ್ರಥಮ್'ಸಂಸ್ಥೆ ಓದಿನ ಕೌಶಲವನ್ನು ಕುರಿತು ನಡೆಸಿದ ಸಮೀಕ್ಷೆ ವಾಸ್ತವವಾಗಿ ನಾವು ತಿಳಿದಷ್ಟು ಆತಂಕವನ್ನು ಹುಟ್ಟಿಸಬೇಕಾಗಿಲ್ಲ. ಏಕೆಂದರೆ ಯಾವ ಕೌಶಲವನ್ನು ಮಕ್ಕಳು ಪಡೆದಿಲ್ಲವೆಂದು ನಾವು ಗಾಬರಿಯಾಗುತ್ತಿದ್ದೇವೆಯೋ ಆ ಕೌಶಲ ಮುಂದೆ ಅವರಿಗೆ ಉಪಯೋಗಕ್ಕೆ ಬರುವಂತಹುದಲ್ಲ. ಅಥವಾ ಅದಿಲ್ಲದೆಯೂ ಆವರು ಸರಿಯಾಗಿ ಓದುವುದು ಸಾಧ್ಯವಾಗುತ್ತದೆ.ದೊಡ್ಡವರಾದಾಗ ಅವರು ಬಳಸುವುದು 'ಕಣ್ಣಿನ ಓದೇ' ಹೊರತು 'ಕಿವಿಯ ಓದನ್ನಲ್ಲ'

'ಪ್ರಥಮ್' ಸಂಸ್ಥೆಯ ಸಮೀಕ್ಷೆಯ ವಿಧಾನವನ್ನು ಕುರಿತು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತಬಹುದು. ಈ ಬಗೆಯ ಕೌಶಲಗಳನ್ನು ಆಯ್ದ ಮಾದರಿಗಳ ಸಮೀಕ್ಷೆಯಿಂದ ಪರಿಶೀಲಿಸಲು ಸಾಧ್ಯವೇ ಎನ್ನುವುದು ಅಂತಹ ಇನ್ನೊಂದು ಪ್ರಶ್ನೆ.
ಓದು ಕೌಶಲ ವೈಯಕ್ತಿಕ ನೆಲೆಯ ಆವಿಷ್ಕಾರ. ಅದನ್ನು ಸಾಮುದಾಯಿಕ ನೆಲೆಯ ಸಮೀಕ್ಷೆಗಳಿಂದ ಮೌಲ್ಯಾಂಕನ ಮಾಡುವುದು ಸಾಧ್ಯವೇ? ಹಾಗೆ ಮಾಡುವುದು ಎಷ್ಟು ಸೂಕ್ತ? ಅಲ್ಲದೆ ಹೀಗೆ ಸಮೀಕ್ಷಿಸಲು ಇಡೀ ಕರ್ನಾಟಕದಿಂದ ಆಯ್ದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ಹದಿನೈದು ಸಾವಿರ.( ಇವರಿಗೆ ಓದಲು ಕೊಟ್ಟ ಕೆಲವೇ ವಾಕ್ಯಗಳ ಮುದ್ರಿತ ಮಾದರಿಯಲ್ಲೇ ಮೂರು ಮುದ್ರಣ ದೋಷಗಳಿವೆ ಎಂಬುದು ಬೇರೆಯೇ ಮಾತು.) ಈ ಹದಿನೈದು ಸಾವಿರ ಜನರಿಗೆ ಓದಲು ನೀಡಿದ ಪರಿಸರ ಮತ್ತು ಸಮಯ ಎಷ್ಟು? ಹೀಗಾಗಿ ಈ ಸಮೀಕ್ಷೆಯ ಫಲಿತಗಳನ್ನು ಕಂಡು ನಾವು ಖಿನ್ನರಾಗಲು ಕಾರಣಗಳಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ಶಾಲೆಯ ಭಾಷಾ ಕಲಿಕೆಯ ವಲಯದಲ್ಲಿ ಎಲ್ಲವೂ ಸರಿಯಾಗಿದೆ ಎಂದೇನೂ ಅಲ್ಲ. ಆದರೆ ಅದನ್ನು ತಿಳಿಯಲು ಬೇರೆಯೇ ದಾರಿಗಳಿವೆ.

No comments: