Monday, February 26, 2007

ಕನ್ನಡದ ಮೇಲೆ ಸಂಸ್ಕೃತದ ಸವಾರಿ

ಕನ್ನಡ ಬರಹದಲ್ಲಿ ಹೆಚ್ಚಾಗಿ ಸಂಸ್ಕೃತ ಪದಗಳನ್ನು ಸೇರಿಸಲು ನಾವು ಹಿಂಜರಿಯುವುದಿಲ್ಲ. ಹಾಗೆ ಸಂಸ್ಕೃತ ಪದಗಳನ್ನು ಹೆಚ್ಚು ಬಳಸುವುದು ಏಕೆಂದು ಕೇಳಿದರೆ ಹಾಗೆ ಮಾಡುವುದು ಸರಿಯೆಂದು ಒಪ್ಪಿಸುವ ಮಾತುಗಳನ್ನೂ ಹೇಳುತ್ತೇವೆ. ಒಂದು: ಕನ್ನಡದಲ್ಲಿ ತಕ್ಕ ಪದಗಳಿಲ್ಲದೇ ಇರುವುದರಿಂದ ಹೀಗೆ ಸಂಸ್ಕೃತ ಪದಗಳನ್ನು ಬಳಸುತ್ತೇವೆ. ಎರಡು: ಈಗಾಗಲೇ ಬಳಕೆಯಲ್ಲಿರುವ ಸಂಸ್ಕೃತ ಪದಗಳನ್ನೇ ಬಳಸುವುದರಿಂದ ಓದುವವರಿಗೆ ತಟಕ್ಕನೆ ತೊಂದರೆಯಿಲ್ಲದೆ ಗೊತ್ತಾಗುತ್ತದೆ..ಮೂರು: ಹೊಸ ಕನ್ನಡ ಪದಗಳನ್ನು ತಯಾರು ಮಾಡಲು ಆಗುವುದಿಲ್ಲ; ಹಾಗೆ ತಯಾರು ಮಾಡಿದರೂ ಅವುಗಳನ್ನು ಓದುವವರಿಗೆ ಸರಿಯಾಗಿ ಗೊತ್ತಾಗುವುದಿಲ್ಲ. ನಾಲ್ಕು. ಸಂಸ್ಕೃತ ಪದಗಳನ್ನು ಬಳಸುವುದರಿಂದ,ಆ ಪದಗಳಿಂದ ಹುಟ್ಟಿದ ರೂಪಗಳನ್ನು ಬಳಸಲು ಅನುವಾಗುತ್ತದೆ; ಅದರಿಂದ ನಮಗೆ ಹೆಚ್ಚು ಪದಗಳು ದೊರೆಯುತ್ತವೆ; ಇದು ಕನ್ನಡ ಪದಗಳ ಬಳಕೆಯಿಂದ ಆಗುವುದಿಲ್ಲ. ಐದು: ಸಂಸ್ಕೃತ ಪದಗಳಿಗೆ ಒಂದು ಬಗೆಯ ಸೊಬಗಿದೆ.;ಕನ್ನಡದ ದೇಸಿ ಪದಗಳ ರೂಪ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬದಲಾಗುವುದರಿಂದ ಅವುಗಳಲ್ಲಿ ಸರಿಯಾದುದನ್ನು ಹುಡುಕಿ ಬಳಸುವುದು ಆಗದ ಮಾತು. ಈ ಎಲ್ಲ ವಿವರಣೆಯನ್ನೂ ನಾವು ಕೊಂಚ ಎಚ್ಚರಿಕೆಯಿಂದ ನೋಡಿದರೆ ಅವೆಲ್ಲವೂ ದಿಟವಲ್ಲವೆಂದು ಗೊತ್ತಾಗುತ್ತದೆ. ಎಲ್ಲರೂ ಹೇಗೆ ಮಾಡುತ್ತಿದ್ದಾರೋ ಹಾಗೇ ನಾವು ಮಾಡುತ್ತಿದ್ದೇವೆ ಎನ್ನುವುದಂತೂ ನಿಜ.

ಇದೂ ಅಲ್ಲದೆ ಹೆಚ್ಚು 'ಶುದ್ಧ'ವಾದ ಕನ್ನಡ ಎಂದರೆ ಸಂಸ್ಕೃತ ಪದಗಳು ಬೆರೆತ ಮತ್ತು ಸಂಸ್ಕೃತ ಪದಗಳನ್ನು ಅವುಗಳ ಮೂಲ ರೂಪದಲ್ಲೇ ಉಳಿಸಿಕೊಂಡ ಕನ್ನಡ ಎಂಬುದು ಜಾರಿಯಲ್ಲಿರುವ ಒಂದು ನಂಬಿಕೆಯಾಗಿದೆ. ಅಂದರೆ ನಾವು ಸಂಸ್ಕೃತ ಪದಗಳನ್ನು ನೆಮ್ಮುವುದಷ್ಟೇ ಅಲ್ಲ ಅವುಗಳು ಹೇಗಿವೆಯೋ ಹಾಗೇ ಬಳಸಬೇಕೆಂಬ ಒತ್ತಾಯವನ್ನೂ ಹೇರಿಕೊಂಡಿದ್ದೇವೆ. ನಮ್ಮ ಹಳೆಯ ಕವಿಗಳು ಹಿಂಜರಿಕೆ ಇಲ್ಲದೆ ಬಳಸಿದ 'ಅಂಕುಸ', 'ಜನುಮ', 'ಮೊಗ', 'ದಿಟ್ಟಿ', 'ಆಗಸ' ಮೊದಲಾದ ಪದಗಳನ್ನು ನಾವು ಮಾತು ಬರಹಗಳಲ್ಲಿ ಬಳಸಲು ಹಿಂಜರಿಯುತ್ತೇವೆ. ಹಾಗೆ ಬಳಸಿದರೂ ಆ ಬಳಕೆಯನ್ನು ಕವಿತೆ,ಕತೆಗಳಿಗೆ ಮೀಸಲಿಡುತ್ತೇವೆ.

ಸರಿ. ಇದು ಹೀಗಿದೆ ಎಂದು ಗೊತ್ತಾದ ಮೇಲೆ ಅದರಿಂದ ಆಗಿರುವ ತೊಂದರೆ ಏನು ಎಂಬುದನ್ನು ನೋಡೋಣ. ನಾವು ನಮ್ಮ ಬರೆವಣಿಗೆಯಲ್ಲಿ ಬಳಸುತ್ತಿರುವ ನೂರಾರು ಸಂಸ್ಕೃತ ಪದಗಳಿಗೆ ಬದಲಾಗಿ ಕನ್ನಡದ ಪದಗಳನ್ನೇ ಬಳಸಬಹುದಾಗಿದೆ. ಹಾಗೆ ಆ ಕನ್ನಡ ಪದಗಳನ್ನು ಬಳಸದೇ ಇರುವುದರಿಂದ ಅವುಗಳಲ್ಲಿ ಹಲವು ನಮ್ಮ ನೆನಪಿನಿಂದ ಜಾರಿ ಹೋಗುತ್ತಿವೆ. ಈ ಮಾತು ಎಷ್ಟು ಸರಿ ಎಂಬುದನ್ನು ತಿಳಿಸಲು ಮುಂದೆ ಕೆಲವು ಪದಗಳನ್ನು ನೀಡಿದ್ದೇನೆ. ಈ ಎಲ್ಲ ಪದಗಳೂ ದಿನಪತ್ರಿಕೆಯೊಂದರಲ್ಲಿ ಒಂದೇ ದಿನ ಬಳಕೆಯಾಗಿದ್ದವು. ಆಯಾ ಪದಗಳ ಜೊತೆಗೆ ಬದಲಾಗಿ ಬಳಸಬಹುದಾಗಿದ್ದ ಕನ್ನಡ ಪದಗಳನ್ನೂ ನೀಡಿದೆ. ವೈಫಲ್ಯ (ಸೋಲು), ನೇತೃತ್ವ (ಮುಂದಾಳುತನ, ಕಣ್ಗಾವಲು), ಅಂತಿಮ (ಕೊನೆ), ವಿಳಂಬ (ತಡ), ಸನ್ನಿಹಿತವಾಗು (ಹತ್ತಿರವಾಗು,ಹತ್ತಿರಬರು), ಸ್ಫೋಟ(ಸಿಡಿತ), ತಕ್ಷಣ(ಕೂಡಲೇ), ಸ್ವೀಕರಿಸು (ಪಡೆ,ಪಡೆದುಕೊಳ್ಳು), ಸ್ಥಾಪಿಸು (ನೆಲೆಗೊಳಿಸು, ಇಡು), ಸಾಕಾರಗೊಳ್ಳು (ಮೈದಳೆ, ಕಾಣಿಸು,ಕಾಣುವಂತಾಗು), ತ್ಯಜಿಸು( ಬಿಡು,ಇಟ್ಟುಕೊಡು,ತೊರೆ), ಅಭೂತಪೂರ್ವಕ( ಹಿಂದೆಂದೂ ಇಲ್ಲದ, ಈವರೆಗೆ ಇಲ್ಲದ) ಭೀತಿಪಡು (ಹೆದರು,ಬೆದರು),ಸಹಮತ (ಒಪ್ಪಿಗೆ, ಒಪ್ಪಂದ) ಉಕ್ತಿ (ಮಾತು,ನುಡಿ),ವಿನೂತನ (ಹೊಸ), ಪರಂಪರಾಗತ(ತಲೆಮಾರಿನಿಂದ ಬಂದ,ಹಿಂದಿನಿಂದಲೂ ಇರುವ), ಸಮೀಪಿಸು (ಹತ್ತಿರವಾಗು) ಮಗ್ನವಾಗು (ಮುಳುಗಿರು,ಮನಸ್ಸಿಟ್ಟಿರು),ಘಟಿಸು (ಆಗು,ನಡೆ), ಇಚ್ಚಿಸು( ಬಯಸು) ನಿಯಂತ್ರಿಸು (ಹಿಡಿತದಲ್ಲಿಡು), ರಕ್ಷಿಸು (ಕಾಪಾಡು,ಪೊರೆ) ಪುನರುಚ್ಚರಿಸು(ಮತ್ತೆ ಹೇಳು,ಮರಳಿ ನುಡಿ). ಜೊತೆಯಲ್ಲಿ ನೀಡಿಡ ಕನ್ನಡ ಪದಗಳು ಆಯಾ ಪದಗಳು ಬಳಕೆಯಾಗಿದ್ದ ಕಡೆ ಹೊಂದಿಕೊಳ್ಳುತ್ತವೆ ಎಂಬುದನ್ನು ಗುರುತಿಸಿಕೊಂಡಿದ್ದೇನೆ.ಒಂದುವೇಳೆ ಬೇರೆ ಪದಗಳು ಬೇಕೆಂದರೆ ಕನ್ನಡದಲ್ಲಿ ಅವು ದೊರೆಯುವುದಿಲ್ಲ ಎಂದು ಹೇಳಬರುವುದಿಲ್ಲ.ಅಂದರೆ ಕನ್ನಡ ಪದಗಳು ತಟಕ್ಕನೆ ಒದಗುವ ಕಡೆಗಳಲ್ಲೂ ನಾವು ಬರಹದಲ್ಲಿ ಸಂಸ್ಕೃತ ಪದಗಳನ್ನೇ ಬಳಸುತ್ತೇವೆ ಎಂದಾಯ್ತು. ಇದು ಸುದ್ದಿ ಪತ್ರಿಕೆಗಳಲ್ಲಿ ಕಂದುಬಂದದ್ದು. ಬೇರೆಬೇರೆ ಬಗೆಯ ಕನ್ನಡ ಬರಹಗಳಲ್ಲಿ ಈ ಬಗೆಯ ಬಳಕೆ ಇನ್ನೂ ಹೆಚ್ಚಾಗಿರುವುದನ್ನು ಕೊಂಚ ಎಚ್ಚರದಿಂದ ನೋಡಿದರೆ ತಿಳಿಯಬಹುದು.

ಹೀಗೆ ಬರೆದರೆ ತಪ್ಪೇನು ಎಂದು ಕೇಳಬಹುದು. ಇದು ತಪ್ಪು ಸರಿಯ ಮಾತಲ್ಲ. ನೂರಾರು ವರುಷಗಳಿಂದ ಈ ಸಂಸ್ಕೃತ ಪದಗಳನ್ನು ನಾವು ಬಳಸುತ್ತಲೇ ಬಂದಿದ್ದೇವೆ ಈಗಲೂ ಅವುಗಳನ್ನು ಬಳಸುವುದು ಸರಿಯೇ ತಾನೇ ಎಂದು ಹೇಳಿದರೆ ಅದಕ್ಕೆ ಏನೂ ಹೇಳುವಂತಿಲ್ಲ. ಆದರೆ ಕೊಂಚ ಈ ಬಗ್ಗೆ ತಲೆಕೆಡಿಸಿಕೊಳ್ಳೋಣ. ಹೀಗೆ ಬಂದು ಸೇರಿದ ಸಂಸ್ಕೃತ ಪದಗಳು ಎರಡು ಬಗೆಯಲ್ಲಿ ಕನ್ನಡ ಪದಗಳ ಜೊತೆ ನಡೆದುಕೊಂಡಿವೆ. ಒಂದು. ಕನ್ನಡ ಪದಗಳ ಜಾಗದಲ್ಲಿ ತಾವೇ ನೆಲೆಗೊಂಡಿರುವುದು. ಎರಡು: ಕನ್ನಡ ಪದಗಳನ್ನು ಹೊರದೂಡದಿದ್ದರೂ ಅವುಗಳ ಹರವನ್ನು ತಗ್ಗಿಸುವುದು. ಒಂದೆರಡು ಮಾದರಿಗಳನ್ನು ನೋಡಿ: 'ಸಮಯ' ಬಂದು "ಹೊತ್ತು' ಕಣ್ಮರೆಯಾಯಿತು. 'ಅನ್ನ' ಬಂದು 'ಕೂಳು' ಎಂಬ ಕನ್ನಡ ಪದ ಮೈಕುಗ್ಗುವಂತಾಯಿತು.ಇಂತಹ ನೂರಾರು ಪದಗ ಪಟ್ಟಿಯಿದೆ. ಕನ್ನಡ ಪದಗಳು ತೆರೆಮರೆಗೆ ಸರಿಯುವುದು, ಚಲವಣೆಯಲ್ಲಿದ್ದರೂ ಮೈಕುಗ್ಗಿಸಿಕೊಂಡಿರುವುದು ಎಷ್ಟು ಸರಿ?

ಸಂಸ್ಕೃತ ಪದಗಳನ್ನು ನಾವು ಇಷ್ಟು ಸಲೀಸಾಗಿ ಎಗ್ಗಿಲ್ಲದೆ ಬಳಸುವುದರಿಂದ ನಮಗೆ ಬೇರೊಂದು ಬಗೆಯ ನೆರವು ಒದಗಿದೆ. ಈಗಾಗಲೇ ಬಳಸಿ ಬಳಸಿ ಸವೆದು ಹೋದ ದಾರಿಯಲ್ಲಿ ನಾವು ನಡೆಯುವಂತಾಗಿದೆ. ಹೀಗಂದರೇನು? ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರು ತಮ್ಮ ಕಡತಗಳಲ್ಲಿ ಟಿಪ್ಪಣಿ ಬರೆಯುವುದನ್ನು ನೋಡಿದರೆ ಅವರು ತಾವೇ ಆ ವಾಕ್ಯಗಳನ್ನು ಹೊಸದಾಗಿ ಕಟ್ಟದೇ ಈಗಾಗಲೇ ಬಳಸಿದ ವಾಕ್ಯಗಳ ಚೌಕಟ್ಟನ್ನೇ ಇರುವಂತೆಯೇ ನಕಲು ಮಾಡುತ್ತಿರುತ್ತಾರೆ ಎನ್ನುವುದು ತಿಳಿಯುತ್ತದೆ. ಅಲ್ಲಿ ನುಡಿ ಬಳಕೆಯಲ್ಲಿ ತನ್ನತನ ಎನ್ನುವುದು ಇರುವುದಿಲ್ಲ.;ಇದ್ದರೂ ಕಡಿಮೆ. ಸಂಸ್ಕೃತ ಪದಗಳು ಹೀಗೆ ನಮಗೆ ಸವೆದ ಹಾದಿಯ ವಾಕ್ಯಗಳನ್ನು ಕಟ್ಟಲು ನೆರವಾಗುತ್ತವೆ. ಯಾರಾದರೂ ಕನ್ನಡ ಪದಗಳನ್ನೆ ಬಳಸಿ ವಾಕ್ಯಗಳನ್ನು ಕಟ್ಟಬೇಕೆಂದು ಹೊರಟಾಗ ಮೇಲೆ ಹೇಳಿದ ಮಾತು ದಿಟವೆಂಬುದು ಗೊತ್ತಾಗುತ್ತದೆ. ಹಾಗೆ ಮಾಡುವಾಗ ಬೇಕಾದಷ್ಟು ಕನ್ನಡ ಪದಗಳು ತಟಕ್ಕನೆ ನೆನಪಿಗೆ ಬರುವುದಿಲ್ಲ ಎನ್ನುವುದು ಒಂದು ಮಾತಾದರೆ ಹಾಗೆ ನೆನಪಿಗೆ ಬಂದ ಪದಗಳನ್ನು ಬಳಸಿ ವಾಕ್ಯಗಳನ್ನು ಕಟ್ಟ ಬೇಕಾದರೆ ಬೇರೆ ಬಗೆಯಲ್ಲೇ ಕಟ್ಟಬೇಕಾಗುತ್ತದೆ. ಈಗ ನೀವು ಓದುತ್ತಿರುವ ಬರಹವನ್ನು ಹೀಗೆ ಕನ್ನಡ ಪದಗಳಿಂದಲೇ ಕಟ್ಟ ಬೇಕೆಂದುಕೊಂಡೆ. ಆಗ ಅದರ ಎಡರುತೊಡರುಗಳು ಗೊತ್ತಾಗತೊಡಗಿದವು.

ಇದರಿಂದ ತಿಳಿಯುವುದೇನು? ನಾವು ಸಂಸ್ಕೃತ ಪದಗಳನ್ನು ಬಳಸುವುದರಿಂದ ಹೆಚ್ಚು ಮೈಮುರಿಯದೇ ಬರಹವನ್ನು ಕಟ್ಟುತ್ತಿರುತ್ತೇವೆ. ಕನ್ನಡವನ್ನು ಹೆಚ್ಚಾಗಿ ಬಳಸ ಹೊರಟಾಗ ನಮ್ಮ ದಾರಿ ಎಷ್ಟು ಕಡಿದಾಗಿದೆ ಎಂಬುದು ತಿಳಿಯುತ್ತದೆ. ಹಾಗಿದ್ದರೂ ಈ ಕಡಿದು ದಾರಿಯನ್ನೇ ನಾವೀಗ ಆಯ್ದುಕೊಳ್ಳಬೇಕೆಂಬುದು ನಾನು ಹೇಳುತ್ತೇನೆ. ಹೀಗೆ ಮಾಡುವುದರಿಂದ ನಾವು ಕನ್ನಡವನ್ನು ಬರೆಯುವ ಬಗೆಯೇ ಬದಲಾಗುತ್ತದೆ ಎನ್ನುವುದು ಒಂದು ಮಾತು. ಜೊತೆಗೆ ಕನ್ನಡ ಪದಗಳು ತೆರೆಯ ಹಿಂದಿನಿಂದ ಮುಂದೆ ಬರತೊಡಗುತ್ತವೆ; ಮೈಕುಗ್ಗಿಸಿಕೊಳ್ಳದೆ ತಮ್ಮ ನಿಜ ಬಣ್ಣದಲ್ಲಿ ಬಳಕೆಯಾಗ ತೊಡಗುತ್ತವೆ ಎನ್ನುವುದು ಇನ್ನೊಂದು ಮಾತು.

ಕೆಲವರು ಹಿಗೆ ಮಾಡುವುದರಿಂದ ಬೇಡದ ಹೊರೆಯನ್ನು ಮೈಮೇಲೆ ಎಳೆದುಕೊಂಡಂತೆ ಎನ್ನುವರು. ಮತ್ತೂ ಕೆಲವರು ಮುಂದೆ ಸಾಗುವುದನ್ನು ಬಿಟ್ಟು ಹೆಜ್ಜೆಗಳನ್ನು ಹಿಂದಕ್ಕೆ ಹಾಕಿದಂತೆ ಎನ್ನುವರು. ಮೊದಲ ಮಾತನ್ನು ಬದಿಗಿಡಿ. ಎರಡನೆಯ ಮಾತು ಸರಿಯಲ್ಲ. ಒಂದೊಮ್ಮೆ ನಾವು ಹಿಡಿದು ಹೋಗುತ್ತಿರುವ ದಾರಿ ತಪ್ಪಾಗಿದ್ದರೆ ಹಿಂದೆ ಹೋಗಿ ಸರಿದಾರಿಯನ್ನು ಹಿಡಿಯಬೇಕಲ್ಲವೇ?
ಕನ್ನಡ ಪದಗಳನ್ನೇ ಬಳಸುವುದೆಂದರೆ ಎಲ್ಲ ಸಂಸ್ಕೃತ ಪದಗಳನ್ನು ಹೊರಗಿಡುವುದೆಂದಲ್ಲ. ಕನ್ನಡ ಪದಗಳನ್ನು ಹೆಚ್ಚಾಗಿ ಬಳಸುವುದು; ಸಂಸ್ಕೃತ ಪದಗಳನ್ನು ಬಳಸಿದರೂ ಅವು ಕನ್ನಡದ ನುಡಿಜಾಡಿಗೆ ಹೊಂದಿಕೊಳ್ಳುವಂತೆ ಮಾಡಿ ಆಮೇಲೆ ಬಳಸುವುದು ನಮ್ಮ ಮುಂದಿನ ದಾರಿಯಾಗಬೇಕು.ಹೀಗೆ ಸಂಸ್ಕೃತ ಪದಗಳ ಸವಾರಿಯಿಂದ ತಪ್ಪಿಸಿಕೊಳ್ಳುವುದರಿಂದ ಮತ್ತೊಂದು ಗೊಂದಲದಿಂದ ಪಾರಾಗಬಹುದು. ಅದೆಂದರೆ ಈಗಿರುವ ಮಾತಿನ ಕನ್ನಡ ಮತ್ತು ಬರಹದ ಕನ್ನಡ ಬೇರೆಬೇರೆಯಾಗಿರುವುದನ್ನು ತಪ್ಪಿಸಬಹುದು. ಎರಡು ಒಂದೇ ಆಗದಿದ್ದರೂ ಅವುಗಳ ನಡುವೆ ಅಷ್ಟೊಂದು ದೊಡ್ಡ ತೆರಪು ಇಲ್ಲದಂತೆ ಮಾಡಬಹುದು. ಈಗ ಇವೆರಡು ಒಂದಕ್ಕೊಂದು ಬೆನ್ನು ಮಾಡಿ ನಡೆದಿವೆ. ಮಾತಾಡುವ ಕನ್ನಡಿಗರು ಕನ್ನಡ ಬರಹವನ್ನು ಓದಲು ಹಿಂಜರಿಯುತ್ತಿರುವುದು ಇದರಿಂದಾಗಿಯೇ ಇರಬೇಕು. ಹೆಚ್ಚು ಜನ ಕನ್ನಡವನ್ನು ಓದ ಬೇಕೆಂದರೆ ಅವರು ಮಾತಾಡುವ ಕನ್ನಡ ಮತ್ತು ಓದುತ್ತಿರುವ ಕನ್ನಡಗಳು ಬೇರೆಬೇರೆ ಎನ್ನಿಸಬಾರದಲ್ಲವೇ? ಕನ್ನಡವನ್ನು ಉಳಿಸಬೇಕೆಂದು ಪಣತೊಡುತ್ತಿರುವ ನಾವೆಲ್ಲ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಲ್ಲವೆ?

2 comments:

Unknown said...
This comment has been removed by the author.
Unknown said...

Nimma ankana baraha tumba samayochitavagide.. tumbaa dhanyavadagalu..