Monday, February 26, 2007

ಪದಕೋಶವೆಂಬ ಅಚ್ಚರಿ

ಭಾಷೆಯ ಪದಕೋಶವೊಂದು ಅಚ್ಚರಿ. ಏಕೆಂದರೆ ಅದು ಎಲ್ಲಿರುತ್ತದೆಂದು ಯಾರೂ ಹೇಳಲು ಬರುವುದಿಲ್ಲ. ನಿಘಂಟುಗಳನ್ನು ರಚಿಸಿ ಇಗೋ ಈ ಭಾಷೆಯಲ್ಲಿ ಇಂತಿಷ್ಟು ಪದಗಳಿವೆ ಎಂದೆಲ್ಲ ಹೇಳಿದರೂ ವಾಸ್ತವವಾಗಿ ಆ ಪದಗಳೆಲ್ಲ ಬಳಸುವವರಿಗೆ 'ಗೊತ್ತಿರುವುದಿಲ್ಲ'. ನಿಘಂಟನ್ನು ಬಾಯಿಪಾಠ ಮಾಡಿದರೆ ಭಾಷೆಯ ಮೇಲೆ ಹಿಡಿತ ಸಾಧಿಸಿದಂತೆ ಎಂದು ತಿಳಿದವರಿದ್ದಾರೆ. ಆದರೆ ಮಾತನಾಡುವ ಯಾರೂ ಹೀಗೆ ನಿಘಂಟುಗಳ ಬೆನ್ನು ಹತ್ತುವುದಿಲ್ಲ. ಹಾಗಾಗಿ ನಿಘಂಟು ನಮ್ಮ ಒಂದು ಕಾಲ್ಪನಿಕ ರಚನೆ. ಮಾತಾಡುವವರಲ್ಲಿ ಮತ್ತು ಕೇಳಿ ಅರಿತುಕೊಳ್ಳುವವರಲ್ಲಿ ಈ ಪದಕೋಶ ನೆನಪಾಗಿ ಇರಬೇಕು.ನಮಗೆ ಕನ್ನಡ ಗೊತ್ತು ಎಂದರೆ ಏನರ್ಥ? ಕನ್ನಡ ಭಾಷೆಯ ಪದಕೋಶ ನಮ್ಮ ನೆನಪಲ್ಲಿ ಇದೆಯೆಂಡೂ ಅರ್ಥ. ಆದರೆ ಅದಷ್ಟೇ ಕನ್ನಡವಲ್ಲ. ಕನ್ನಡ ಭಾಷೆಯ ರಚನೆಯ ನಿಯಮಗಳೂ ನಮಗೆ ತಿಳಿದಿರುತ್ತವೆ. ಈ ನಿಯಮಗಳು ಮತ್ತು ಪದಕೋಶ ಸೇರಿ ನಮ್ಮಲ್ಲಿ ಕನ್ನಡ ಎನಿಸಿಕೊಳ್ಳುತ್ತದೆ. ನಿಯಮಗಳನ್ನು ನಾವು ಒಮ್ಮೆ ಮಾತ್ರ ಇಡಿಯಾಗಿ ಅನಾವರಣಗೊಳಿಸಿಕೊಳ್ಳುತ್ತೇವೆ. ಅದು ನಮ್ಮ ಬಾಲ್ಯದಲ್ಲಿ ಸಂಭವಿಸುವ ಘಟನೆ. ಈ ನಿಯಮಗಳು ಎಲ್ಲ ಕನ್ನಡರಿಗೂ ಸಮಾನ. ಆದರೆ ಪದಕೋಶಕ್ಕೆ ಸೇರ್ಪಡೆ ಬೇರ್ಪಡೆಗಳು ನಾವು ಬದುಕಿರುವವರೆಗೂ ನಡೆಯುತ್ತಲೇ ಇರುವುದು ಸಾಧ್ಯ. ಅಲ್ಲದೆ ಎಲ್ಲರಿಗೂ ಇದು ಸಮಾನವಲ್ಲ. ಒಬ್ಬರಿಗೆ ತಿಳಿದಿರುವ ಕನ್ನಡದ ಎಷ್ಟೋ ಪದಗಳು ಇನ್ನೊಬ್ಬರಿಗೆ ತಿಳಿಯದಿರಬಹುದು. ಆದರೆ ನಾವು ಕನ್ನಡವನ್ನು ಬಳಸಲು ಅದರಿಂದ ಅಡ್ಡಿಯಾಗುವುದಿಲ್ಲ.

ಕನ್ನಡದಂತಹ ಭಾಷೆಯ ಪದಕೋಶದ ಪದಗಳಿಗೆ ಮೂರು ನೆಲೆಗಳಿರುತ್ತವೆ. ಉಚ್ಚಾರದ ನೆಲೆ,ಅರ್ಥದ ನೆಲೆ ಮತ್ತು ಬರಹದ ನೆಲೆ. ಇವುಗಳಲ್ಲಿ ಕೆಲವು ಪದಗಳಿಗೆ ಉಚ್ಚಾರದ ನೆಲೆ ಇಲ್ಲದೆಯೂ ಹೋಗಬಹುದು. ಹಾಗೆಯೇ ಮತ್ತೆ ಕೆಲವು ಪದಗಳಿಗೆ ಬರೆಹದ ನೆಲೆ ದೊರಕುವುದಿಲ್ಲ. ಆದರೆ ಅರ್ಥ ನೆಲೆ ಮಾತ್ರ ಎಲ್ಲ ಪದಗಳಿಗೂ ಇದ್ದೇ ಇರುತ್ತದೆ. ಆದರೆ ನಮ್ಮ ಭಾಷಾ ಕಲಿಕೆ ಮತ್ತು ಬಳಕೆಯಲ್ಲಿ ನಾವು ಉಚ್ಚಾರ ಮತ್ತು ಬರಹ ರೂಪಗಳಿಗೆ ಕೊಡುವ ಒತ್ತನ್ನು ಅರ್ಥಕ್ಕೆ ನೀಡುವುದಿಲ್ಲ. ಅಥವಾ ಒಂದು ಪದದ ಅರ್ಥದ ಎಲ್ಲ ಸಾಧ್ಯತೆಗಳನ್ನು ಭಾಷಿಕರು ತಿಳಿಯುವುದು ಅಗತ್ಯವೆಂದು ನಮ್ಮ ಶಿಕ್ಷಣ ಕ್ರಮ ಭಾವಿಸುವುದಿಲ್ಲ .ಇದರ ಪರಿಣಾಮ ಕನ್ನಡದ ಬಳಕೆಯಲ್ಲಿ ಕಾಣ ತೊಡಗಿದೆ. ಸಾಮಾನ್ಯವಾಗಿ ಪದಗಳಿಗೆ ವಾಚ್ಯ ಅಥವಾ ನೇರಬಳಕೆಯ ಅರ್ಥದ ಜೊತೆಗೆ ಸೂಚ್ಯವಾದ ಅರ್ಥಗಳೂ ಇರುತ್ತವೆ. ಈ ಸೂಚ್ಯ ಅಥವಾ ಲಕ್ಷಣಾರ್ಥಗಳು ಭಾಷಿಕರ ಸಂಸ್ಕೃತಿಯ ಕೊಡುಗೆ. ಈ ದಿನಮಾನಗಳಲ್ಲಿ ಪದದ ಬಳಕೆಯ,ವಾಚ್ಯ ಅರ್ಥಕ್ಕೆ ಹೆಚ್ಚು ಒತ್ತು ದೊರೆಯುತ್ತಿದೆ. ಸೂಚ್ಯಾರ್ಥಗಳಲ್ಲಿ ಪದಗಳನ್ನು ಬಳಸುವ ಪ್ರಸಂಗಗಳು ಕಡಿಮೆಯಾಗ ತೊಡಗಿವೆ. ಅಥವಾ ಹಾಗೆ ಬಳಸಿದಾಗಲೂ ತಪ್ಪಾಗಿ ಬಳಸುತ್ತಿರುವ ಪ್ರಸಂಗಗಳೇ ಹೆಚ್ಚು.ಒಂದು ಸರಳ ಉದಾಹರಣೆಯನ್ನು ನೋಡೋಣ. ಕೆಂಭೂತ ಎಂದರೆ ಒಂದು ಪಕ್ಷಿ. ಇದು ವಾಚ್ಯಾರ್ಥ. ಆದರೆ ಕನ್ನಡದಲ್ಲಿ 'ಒಬ್ಬರನ್ನು ಅನುಕರಿಸಲು ಹೋಗಿ ನಗೆಪಾಟಲಾಗುವ ವ್ಯಕ್ತಿ'ಗೂ ಕೆಂಭೂತ ಎನ್ನುವ ಸೂಚ್ಯಾರ್ಥವಿದೆ.ನವಿಲನ್ನು ನೋಡಿ ಕೆಂಭೂತ ಕುಣಿಯಲು ಹೋದದ್ದನ್ನು ಅದರಿಂದ ನಗೆಗೀಡಾಗಿದ್ದನ್ನು ಕನ್ನಡದ ಗಾದೆ ಮಾತೊಂದು ಹೇಳುತ್ತದೆ. ಈ ಸಂದರ್ಭನಿಷ್ಠ ಅರ್ಥ ಗೊತ್ತಿಲ್ಲದಿದ್ದಾಗ ಕೆಂಭೂತ ಎಂಬ ಪದವನ್ನು ಹೇಗೆ ಬಳಸ ಬೇಕೆಂಬುದು ಗೊತ್ತಾಗುವುದಿಲ್ಲ. ಅಥವಾ ಬಳಸಿದಾಗಲೂ ತಪ್ಪು ಅರ್ಥ ಬರುವಂತೆ ಬಳಸುವುದು ಹೆಚ್ಚಾಗುತ್ತದೆ.ಈ ಪರಿಸ್ಥಿತಿಯಿಂದಾಗಿ ಕನ್ನಡದ ವಾಗ್ರೂಢಿಗಳು,ನುಡಿಗಟ್ಟುಗಳು ನಮ್ಮ ದಿನನಿತ್ಯದ ಬಳಕೆಯಿಂದ ಜಾರಿ ಹೋಗುತ್ತಿವೆ. ಬಳಸುವವರೂ ತಪ್ಪುಗ್ರಹಿಕೆಯಿಂದ ಬಳಸುವುದು ಎದ್ದುಕಾಣುತ್ತಿದೆ.

ಪದಗಳು ಪದಕೋಶದಲ್ಲಿದ್ದರೂ ಅವುಗಳನ್ನು ಸರಿಯಾಗಿ ಬಳಸದಿರುವುದು ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆಯ ಕಡೆಗೆ ಭಾಷಾವಿದರು ನಮ್ಮ ಗಮನ ಸೆಳೆಯುತ್ತಿದ್ದಾರೆ. ಅದೆಂದರೆ ಕನ್ನಡದ 'ನಿಜ' ಪದಗಳು 'ಕಣ್ಮರೆ'ಯಾಗುತ್ತಿವೆಯೆಂಬುದು ಈ ಭಾಷಾವಿದರ ಕೊರಗಾಗಿದೆ. ಕನ್ನಡದ ನಿಜಪದಗಳೆಂದರೇನು? ಬೇರೆ ಭಾಷೆಗಳಿಂದ ಪಡೆದುಕೊಳ್ಳದ,ಲಾಗಾಯ್ತಿನಿಂದಲೂ ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳನ್ನು ನಿಜಪದಗಳೆಂದು ಸದ್ಯ ತಿಳಿಯೋಣ. ಈ ನಿಜಪದಗಳಲ್ಲಿ ಹಲವು ಬರವಣಿಗೆಯಲ್ಲಿ ಮಾತ್ರ ದಾಖಲಾಗಿರುವಂತಹವು. ಅಂದರೆ ಕಾವ್ಯಗಳಲ್ಲಿ,ಶಾಸನ ಮುಂತಾದ ಲಿಖಿತ ದಾಖಲೆಗಳಲ್ಲಿ ಈ ಪದಗಳು ಈಗ ಬರಹದಲ್ಲಾಗಲೀ ಮಾತಿನಲ್ಲಾಗಲೀ ಬಳಕೆಯಾಗುತ್ತಿಲ್ಲ. ಉದಾ.ಗೆ ಶಾಸನಗಳಲ್ಲಿ 'ಮತ್ತರ್' ಎಂಬ ಪದವೊಂದು ಬಳಕೆಯಾಗುತ್ತದೆ. ಕೃಷಿ ಭೂಮಿಯ ಒಂದು ಬಗೆಯನ್ನು ಅದು ಸೂಚಿಸುತ್ತಿತ್ತು. ಆದರೆ ಈಗ ಆ ಪದ ಯಾರ ಪದಕೋಶದ ಭಾಗವಾಗಿಯೂ ಇಲ್ಲ. ಈಗ ಅದನ್ನು ಬಳಸುವುದೂ ಇಲ್ಲ. ಹಾಗೆಯೇ ಎಷ್ಟೋ ಪದಗಳು ಬರಹದ ರೂಪವಿರದೆಯೂ ಆಡು ಮಾತಿನಲ್ಲಿ ಬಳಕೆಯಾಗುತ್ತಿದ್ದವು.ಅಂತಹ ಪದಗಳಲ್ಲಿ ಹಲವಾರು ಈಗ ಮರೆಯಾಗುತ್ತಿವೆ. ಅವುಗಳನ್ನು ಬಳಸುವ ಪ್ರಸಂಗಗಳು ಈಗ ಕಂಡು ಬರುತ್ತಿಲ್ಲ. ಕನ್ನಡ ಮಾತನಾಡುವ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಸಾಮಾಜಿಕ ಸಮುದಾಯಗಳಲ್ಲಿ ಇಂತಹ ಪದಗಳಿದ್ದವು. ಉದಾಹರಣೆಗೆ ನಮ್ಮ ಹಳೆಯ ಆಹಾರವಸ್ತುಗಳ, ಈಗ ಬಳಕೆಯಲ್ಲಿದ ಹಲವಾರು ಉಪಕರಣಗಳ ಹೆಸರುಗಳನ್ನು ಗಮನಿಸಬಹುದು. ಅವುಗಳಲ್ಲಿ ಎಷ್ಟೋ ಪದಗಳು ಈಗ ಇಲ್ಲ. ಈ ಕಾರಣದಿಂದಾಗಿ ಕನ್ನಡದ ಕೆಲವು ಲೇಖಕರು ತಮ್ಮ ಕಥೆ ಕಾದಂಬರಿಗಳ ಕೊನೆಗೆ ತಾವು ಬಳಸಿದ ಪದಗಳಿಗೆ ಕನ್ನಡದಲ್ಲೇ ಅರ್ಥವನ್ನು ನೀಡುತ್ತಿದ್ದಾರೆ. ಅಂದರೆ ಅವರು ಬಳಸಿದ ಆ ಪದಗಳು ಈಗ ಎಲ್ಲ ಕನ್ನಡಿಗರಿಗೂ ಗೊತ್ತಾಗುವ ಹಾಗಿಲ್ಲವೆಂಬುದನ್ನು ಅವರು ಸೂಚಿಸುತ್ತಿದ್ದಾರೆ.

ಈ ಪರಿಸ್ಥಿತಿಯನ್ನು ಹೇಗೆ ಗ್ರಹಿಸಬೇಕು. ಇದು ಆತಂಕ ಪಡಬೇಕಾದ ಸಂಗತಿಯೆಂದು ಕೆಲವರು ವಾದಿಸುತ್ತಾರೆ. ತಮ್ಮ ವಾದಕ್ಕೆ ಪೂರಕವಾಗಿ ಕನ್ನಡ ಪದಕೋಶ ತನ್ನ ನಿಜ ಪದಗಳನ್ನು ಕಳೆದುಕೊಳ್ಳುವುದನ್ನು ಹಾಗೆಯೇ ಬೇರೆ ಭಾಷೆಗಳಿಂದ ಅಸಂಖ್ಯಾತ ಪದಗಳನ್ನು ಪಡೆದುಕೊಳ್ಳುತ್ತಿರುವುದನ್ನು ಎತ್ತಿ ಹೇಳುತ್ತಾರೆ.ಯಾವುದೇ ಭಾಷೆಯ ಪದಕೋಶದಲ್ಲಿ ಹೀಗೆ ನಿಜಪದಗಳ ಬಳಕೆ ಕಡಿಮೆಯಾಗಿ ಬೇರೆ ಭಾಷೆಗಳಿಂದ ಪದಗಳ ಬಳಕೆ ಹೆಚ್ಚುವುದು ಅಷ್ಟು ಅಸಹಜವಾದ ಸಂಗತಿ ಏನೂ ಅಲ್ಲ. ಇದಕ್ಕೆ ಆಯಾ ಸಂದರ್ಭದ ಸಾಂಸ್ಕೃತಿಕವಾದ ಕಾರಣಗಳು ಹಲವು ಇರುತ್ತವೆ. ಕನ್ನಡದ ಮಟ್ಟಿಗೆ ಈ ಬದಲಾವಣೆಯನ್ನು ಆತಂಕಕಾರಿ ಎಂದು ವಾದಿಸುವುದು ಎಷ್ಟು ಸರಿ? ಈ ಪ್ರಶ್ನೆಯನ್ನೊಮ್ಮೆ ಉತ್ತರಿಸಲು ನೋಡೋಣ. ಹೊಸ ಪದಗಳು ಬಳಕೆಯಾಗುತ್ತಿರುವುದನ್ನು 'ಕನ್ನಡದ ಕೊಲೆ' ಎಂದು ನಾವು ವರ್ಣಿಸಲು ಸಿದ್ಧರಾಗುತ್ತೇವೆ. ಆದರೆ ಕನ್ನಡದ ನಿಜಪದಗಳನ್ನೇ ಬಳಸುವುದನ್ನು ಒಪ್ಪಿಕೊಳ್ಳಲು ನಾವು ಎಷ್ಟು ಸಿದ್ಧರಿದ್ದೇವೆ? ಕನ್ನಡದ ಹಲವು ಉಪಭಾಷೆಗಳ ಸಾವಿರಾರು ಪದಗಳನ್ನು ಸಮಾಜದ ಅಂಚಿನ ಸಮುದಾಯದ ಜನರು ಬಳಸಿದರೆ ಆ ಪದಗಳ ಬದಲು ನಾವು ಶಿಷ್ಟ ಅಥವಾ ಪ್ರಮಾಣ ಎಂದು ಗುರುತಿಸುವ ಪದಗಳನ್ನು ಬಳಸಬೇಕೆಂದು ಬಯಸುತ್ತೇವೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಬಲವಾಗಿ ಬೇರೂರಿರುವ ಅಭ್ಯಾಸವಾಗಿದೆ. ಅಂದರೆ ನಿಜಪದಗಳನ್ನು ಕತ್ತು ಹಿಸುಕಲು ನಾವು ಹಿಂಜರಿಯುತ್ತಿಲ್ಲ. ಅವುಗಳನ್ನು ನಮ್ಮದೇ ಆದ ಕಾರಣಗಳನ್ನು ನೀಡಿ ಹಿಂದೆ ಸರಿಸುತ್ತಿದ್ದೇವೆ.ಕಸದ ಬುಟ್ಟಿಗೆ ಎಸೆಯುತ್ತಿದ್ದೇವೆ ಹೆಚ್ಚೆಂದರೆ ಕಥೆಗಾರರು ತಮ್ಮ ಸೋಪಜ್ಞತೆಯನ್ನು ಸಾಬೀತು ಮಾಡಲು ಆ ಪದಗಳನ್ನು ಬಳಸಿಯಾರು. ಅಥವಾ ಸಿನಿಮಾದಂತಹ ಮಾಧ್ಯಮಗಳು 'ನಕಲಿ'ಗಳನ್ನು,ಸಿದ್ಧಮಾದರಿಗಳನ್ನು ಬಿಂಬಿಸಲು ಆ ಪದಕೋಶವನ್ನು ಬಳಸಿಕೊಳ್ಳುವಂತೆ ಅನುವುಮಾಡಿಕೊಡಲಾಗಿದೆ.

ಈ ಮೇಲಿನ ವಿವರಣೆಯಿಂದ ತಿಳಿಯುವುದೇನು? ನಮಗೇ ಗೊತ್ತಿಲ್ಲದಂತೆ ನಾವು ಇಬ್ಬಗೆಯ ವರ್ತನೆಯನ್ನು ತೋರುತ್ತಿದ್ದೇವೆ. ಒಂದು ಕಡೆ ನಿಜಪದಗಳನ್ನು ನಿರಾಕರಿಸುತ್ತಲೇ ಅವು ಕಳೆದುಹೋಗುತ್ತಿವೆಯೆಂದು ಹಪಹಪಿಸುತ್ತಿದೇವೆ. ಇನ್ನೊಂದು ಕಡೆ ಬೇರೆ ಭಾಷೆಗಳಿಂದ ಬಂದ ಪದಗಳನ್ನು ಬಳಸುವುದನ್ನು ಗುಮಾನಿಯಿಂದ ನೋಡುತ್ತಿದೇವೆ.'ಶುದ್ಧಕನ್ನಡ'ಕ್ಕಾಗಿ ಕನಸು ಕಾಣುತ್ತಿದ್ದೇವೆ. ನಮ್ಮ ಕನ್ನಡವನ್ನು ರಕ್ತಹೀನಗೊಳಿಸುತ್ತಾ ಅದು ಯಾವ ಪೋಷಕ ದ್ರವವನ್ನೂ ಪಡೆಯಬಾರದೆಂದೂ ಹಾಗೇ ಜೀವ ಉಳಿಸಿಕೊಳ್ಳಲು ಹೋರಾಡಬೇಕೆಂದು ನಿರೀಕ್ಷಿಸುತ್ತಿದೇವೆ. ನೀವು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದಿದ್ದರೆ ಅಲ್ಲಿ ಬರುವ ಶಂಕರ ಹೆಗ್ಗಡೆಯು ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುವ ಮಾದರಿಯಲ್ಲಿ ನಾವಿರುವಂತಿದೆಯಲ್ಲವೇ?.ಇದು ಕನ್ನಡಕ್ಕಿರುವ ನಿಜವಾದ ಆತಂಕ.

No comments: