Monday, February 26, 2007

ಪದವಿ ತರಗತಿಗಳಲ್ಲಿ ಕನ್ನಡ

ಪದವಿ ತರಗತಿಗಳಲ್ಲಿ ಕನ್ನಡವನ್ನು ವಿಶೇಷ ವಿಷಯವನ್ನಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಭಾಷೆಯನ್ನು ಕುರಿತ ಪಠ್ಯಕ್ರಮವೊಂದನ್ನು ಕಳೆದ ಅರ್ಧ ಶತಮಾನದಿಂದಲೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇರಿಸಿಕೊಂಡಿದ್ದೇವೆ. ಕೆಲವು ವಿಷಯಗಳನ್ನು ವಿಸ್ತರಿಸುವ ಅಥವಾ ಕೆಲವನ್ನು ಹ್ರಸ್ವಗೊಳಿಸುವ ಕೆಲಸ ಮಾತ್ರ ಆಗಾಗ ನಡೆಯುತ್ತಿರುವಂತಿದೆ. ಒಂದೆರಡು ವಿಶ್ವವಿದ್ಯಾಲಯಗಳಲ್ಲಿ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕೆಂಬ ಚಿಂತನೆ ನಡೆದು ಕೆಲವು ಪ್ರಯೋಗಗಳು ಕೂಡ ನಡೆದಿವೆ. ಈ ಬದಲಾವಣೆಗಳಿಗೆ ಪಾಠ ಮಾಡುವ ಶಿಕ್ಷಕರೇ ಕೆಲವೊಮ್ಮೆ ಆಡ್ಡಿಯಾಗುತ್ತಾರೆ ಎಂಬ ಮಾತು ಕೇಳಬರುತ್ತಿದೆ. ತಾವು ಕಲಿತದ್ದನ್ನು ಮಾತ್ರ ವಿದ್ಯಾರ್ಥಿಗಳಿಗೆ ಹೇಳಿಕೊಡಲು ಅವರು ಸಿದ್ಧರಿರುತ್ತಾರೆ. ಹೊಸ ಚಿಂತನೆಗಳು ಹೊಸ ಓದನ್ನು,ಹೆಚ್ಚಿನ ಸಿದ್ಧತೆಯನ್ನು ಬಯಸುತ್ತವೆ. ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಹಳೆಯದನ್ನೇ ಸರಿಯೆಂದು ವಾದಿಸುವ ಬಗೆಯೊಂದು ಇದೆ. ಇದು ಸಹಜವೇ. ಅಲ್ಲದೆ ಬದಲಾವಣೆಗಳನ್ನು ಮಾಡಬೇಕೆಂದು ಬಯಸುವವರು ಏಕೆ ಬದಲಾವಣೆ ಬೇಕೆಂಬುದನ್ನು ಎಲ್ಲರಿಗೂ ತಿಳಿಹೇಳುವಲ್ಲಿ ವಿಫಲಾಗಿರಲೂ ಬಹುದು. ಇದು ಶಿಕ್ಷಕರನ್ನು ಕುರಿತ ಟೀಕೆಯಲ್ಲ. ಬದಲಾವಣೆಗಳನ್ನು ಬಯಸುವವರು ಅನುಸರಿಸಬೇಕಾದ ವಿಧಾನವನ್ನು ಕುರಿತು ಮರುಚಿಂತನೆ ಅಗತ್ಯವೆಂದು ಹೇಳುವುದು ನನ್ನ ಉದ್ದೇಶ.ಇಲ್ಲಿಂದ ಮುಂದೆ ಈಗಿರುವ ಪಠ್ಯಕ್ರಮದ ಬದಲಿಗೆ ಯಾವ ವಿಷಯಗಳನ್ನು ಪಾಠ ಹೇಳಬಹುದು ಎಂಬುದನ್ನು ಮೊದಲು ಸೂಚಿಸುತ್ತೇನೆ. ಅನಂತರ ಏಕೆ ಈ ಬದಲಾವಣೆ ಬೇಕೆಂಬುದನ್ನು ಕುರಿತು ಕೆಲವು ಮಾತುಗಳನ್ನು ಹೇಳುತ್ತೇನೆ.

ಮುಖ್ಯವಾಗಿ ಎರಡು ನೆಲೆಗಳಲ್ಲಿ ನಮ್ಮ ವಿಷಯಗಳನ್ನು ವಿಂಗಡಿಸಿಕೊಳ್ಳಬೇಕು. ೧) ಭಾಷೆಯನ್ನು ಕುರಿತ ಸಾಮಾನ್ಯ ವಿಚಾರಗಳು ೨) ಕನ್ನಡ ಭಾಷಾ ರಚನೆಯನ್ನು ಕುರಿತ ವಿಚಾರಗಳು. ಈಗಿರುವಂತೆ ಎರಡು ಚಾತುರ್ಮಾಸಗಳಲ್ಲಿ ಇವುಗಳನ್ನು ವಿಂಗಡಿಸಿಕೊಳ್ಳಬಹುದು. ಇದೇ ಅನುಕ್ರಮದಲ್ಲಿ ವಿಷಯಗಳನ್ನು ಇರಿಸಿಕೊಳ್ಳಬೇಕು.

ಅ)ಭಾಷೆಯನ್ನು ಕುರಿತು ಸಾಮಾನ್ಯ ವಿಚಾರಗಳು:

೧) ಭಾಷೆ ಎಂದರೇನು? ಪಾರಂಪರಿಕ ಚಿಂತನೆಗಳು ,ಪರಿಚಿತ ಚಿಂತನೆಗಳು ಮತ್ತು ಆಧುನಿಕ ಸಿದ್ಧಾಂತಗಳು
೨) ಭಾಷೆಯ ರಚನೆ,ಬಳಕೆ ಮತ್ತು ಬದಲಾವಣೆ - ಇವುಗಳ ಪರಿಚಯ
೩) ಭಾಷೆ ಮತ್ತು ಸಮಾಜ; ಭಾಷೆ ಮತ್ತು ಮನಸ್ಸು
೪) ಜಗತ್ತಿನ ಭಾಷೆಗಳು;ಭಾರತದ ಭಾಷೆಗಳು;ದ್ರಾವಿಡ ಭಾಷೆಗಳು;ಕನ್ನಡದ ಹಳಮೆ

ಆ)ಕನ್ನಡವನ್ನು ಕುರಿತ ವಿಚಾರಗಳು

೧) ಕನ್ನಡ ಧ್ವನಿರಚನೆ
೨) ಕನ್ನಡದ ಪದರಚನೆ
೩) ಕನ್ನಡದ ವಾಕ್ಯ ರಚನೆ
೪) ಕನ್ನಡ ಪದಕೋಶ: ಸ್ವರೂಪ
೫) ಕನ್ನಡ ವಿವಿಧ ಪ್ರಭೇದಗಳು ಅ) ಚಾರಿತ್ರಿಕ ಆ) ಪ್ರಾದೇಶಿಕ ಇ)ಸಾಮಾಜಿಕ ಈ)ಸಾಂದರ್ಭಿಕ
೬) ವಿವಿಧ ಸಂವಹನ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಾಗುವ ಬಗೆ

ಪ್ರತಿ ಚಾತುರ್ಮಾಸದಲ್ಲಿ ಸರಾಸರಿ ಭಾಷಾ ವಿಷಯ ಬೊಧನೆಗೆ ಹದಿನಾರು ಅವಧಿಗಳ ಬೋಧನೆಯ ಅವಕಾಶ ಸಿಗುತ್ತದೆಯೆಂದು ಯೋಚಿಸಿ ಈ ವಿಷಯಗಳನ್ನು ಪಟ್ಟಿ ಮಾಡಲಾಗಿದೆ.

ಶಬ್ದಮಣಿದರ್ಪಣವನ್ನು ಪಠ್ಯವನ್ನಾಗಿ ಇರಿಸುವುದನ್ನು ಪೂರ್ಣವಾಗಿ ಕೈಬಿಡಬೇಕು. ಅದರಿಂದ ಏನೂ ಉಪಯೋಗವಿಲ್ಲ. ಇದು ಆ ಗ್ರಂಥಕ್ಕಾಗಲೀ ಅದರ ಕರ್ತೃವಿಗಾಗಲೀ ಮಾಡುತ್ತಿರುವ ಅಪಚಾರವೆಂದು ತಿಳಿಯಬಾರದು. ಈಗ ಕನ್ನಡವನ್ನು ಪದವಿ ತರಗತಿಗಳಲ್ಲಿ ವಿಶೇಷ ವಿಷಯವನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಅದು ಅನಗತ್ಯ. ಹೆಚ್ಚಿನ ಓದಿಗೆ ಮುಂದೆ ಹೋಗುವವರು ತಮ್ಮ ಅಧ್ಯಯನದ ಯಾವುದಾದರೂ ಒಂದು ಹಂತದಲ್ಲಿ ಅಗತ್ಯ ಬಿದ್ದರೆ ಓದುತ್ತಾರೆ. ಶಬ್ದಮಣಿ ದರ್ಪಣ ಎಲ್ಲ ವಿದ್ಯಾರ್ಥಿಗಳೂ ಓದಲೇ ಬೇಕೆಂದು ಹೇಳುವುದರಲ್ಲಿ ಅರ್ಥವಿಲ್ಲ. ಅದನ್ನು ಓದದಿದ್ದರೆ ಹಳಗನ್ನಡ ಅರ್ಥವಾಗುವುದಿಲ್ಲ ಎಂಬ ಅಪಕಲ್ಪನೆಯನ್ನೂ ಬಿಡಬೇಕು. ಈಗಾಗಲೇ ಈ ಕುರಿತು ಡಾ.ಡಿ.ಎನ್.ಶಂಕರಭಟ್ಟರು ತಮ್ಮ ನಿಜಕ್ಕೂ 'ಹಳಗನ್ನಡ ವ್ಯಕರಣ ಎಂತಹುದು" ಎಂಬ ಗ್ರಂಥದಲ್ಲಿ ವಿವೇಚನೆ ಮಾಡಿದ್ದಾರೆ. ಹಳಗನ್ನಡ ನಮಗೆ ಗ್ರಹಿಕೆಯ ಭಾಷೆ ಬಳಕೆಯ ಭಾಷೆಯಲ್ಲ. ಅದನ್ನು ಓದಿ ತಿಳಿಯುವುದನ್ನು ಕಲಿಸುವ ಬೇರೆ ವಿಧಾನಗಳಿವೆ. ನಮ್ಮ ಶಿಕ್ಷಕರು ಅದನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಕನ್ನಡ ಕಾವ್ಯ ಪರಂಪರೆಯನ್ನು ಬಲ್ಲವರಿಗೆ ವ್ಯಾಕರಣಗಳ ಮೂಲಕ ಅವುಗಳನ್ನು ಪ್ರವೇಶ ಮಾಡುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿರುತ್ತದೆ.

ಮೂರನೆಯ ವರ್ಷದಲ್ಲಿ ಅಂದರೆ ಐದು ಮತ್ತು ಆರನೆಯ ಚಾತುರ್ಮಾಸಗಳಲ್ಲಿ ಭಾಷಾಧ್ಯಯನದ ಇನ್ನಿತರ ನೆಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಪಠ್ಯಕ್ರಮವನ್ನು ರೂಪಿಸಬೇಕು. ಅದರ ಸ್ಥೂಲ ವಿವರವನ್ನು ಮುಂದೆ ಕೊಡಲು ಪ್ರಯತ್ನಿಸಿದ್ದೇನೆ.

ಅ)ಕನ್ನಡ ಭಾಷೆಯಲ್ಲಿ ಆಗಿರುವ ಬದಲಾವಣೆಗಳು

೧) ಧ್ವನಿ ರಚನೆಯಲ್ಲಿ ಮತ್ತು ನಿಯಮಗಳಲ್ಲಿ ಅಗಿರುವ ಬದಲಾವಣೆಗಳು
೨) ಪದರಚನೆಯ ನಿಯಮಗಳಲ್ಲಿ ಆಗಿರುವ ಬದಲಾವಣೆಗಳು
೩) ವಾಕ್ಯ ರಚನೆಯ ಸ್ವರೂಪದಲ್ಲಿ ಆಗಿರುವ ಬದಲಾವಣೆಗಳು
೪) ಕನ್ನಡ ಶಬ್ದಕೋಶದಲ್ಲಿ ಅಗಿರುವ ಬದಲಾವಣೆ;ಹೊಸ ಪ್ರವೃತ್ತಿಗಳು
೫) ಶಬ್ದಾರ್ಥಗಳ ಸಂಬಂಧದ ವಿವಿಧ ನೆಲೆಗಳು: ನುಡಿಗಟ್ಟು,ವಾಗ್ರೂಢಿ,ಒಗಟು,ನಗೆಹನಿ

ಆ)ಕನ್ನಡ ಮಾತು ಮತ್ತು ಬರವಣಿಗೆ
೧) ಮಾತು ಮತ್ತು ಬರವಣಿಗೆಗಳ ಸಂಬಂಧ
೨) ಕನ್ನಡ ಬರವಣಿಗೆಯ ವಿವಿಧ ವಲಯಗಳು ಮತ್ತು ಬಗೆಗಳು
೩) ಬರೆವಣಿಗೆಯ ಮೇಲೆ ತಂತ್ರಜ್ಞಾನದ ಪ್ರಭಾವ
೪) ಕನ್ನಡ ಮಾತಿನ ವಲಯಗಳು: ನಿರೂಪಣೆ,ಸಂಭಾಷಣೆ,ಕಥನ
೫) ಕನ್ನಡ ಸಾಹಿತ್ಯ ಭಾಷೆಯ ಕೆಲವು ಮುಖ್ಯ ಚಹರೆಗಳು

ಈ ಎಲ್ಲ ವಿಷಯಗಳನ್ನು ಏಕೆ ಪಾಠಮಾಡಬೇಕು?

ಈವರೆಗೆ ನಾವು ನಾವು ಕನ್ನಡದ ಚಾರಿತ್ರಿಕ ಸ್ವರೂಪವನ್ನು ಹಳೆಯ ಮಾದರಿಯಲ್ಲಿ ಹೇಳಿಕೊಡುತ್ತಿದ್ದೆವು. ಆದರೆ ಈಗ ಕನ್ನಡ ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಮತ್ತು ಅದರ ವಿವಿಧ ನೆಲೆಗಳೇನು ಎಂಬುದನ್ನು ಪರಿಚಯ ಮಾಡಿಕೊಡಬೇಕು. ಅದರಿಂದ ಅವರಿಗೆ ತಾವು ತಿಳಿದುಕೊಳ್ಳುತ್ತಿರುವುದು ಯಾವುದೋ ನಮಗೆ ಸಂಬಂಧಪಡದ ವಿಷಯ ಎನ್ನುವ ಭಾವನೆ ಮೂಡುವುದಿಲ್ಲ. ಬದಲಿಗೆ ಅವರು ತಮ್ಮ ನಿತ್ಯದ ವ್ಯವಹಾರದ ನೆಲೆಗಳನ್ನು ಇನ್ನಷ್ಟು ಚೆನ್ನಾಗಿ ತಿಳಿಯ ಬಲ್ಲರು.

ಬೋಧನೆಗಾಗಿ ಹೊಸ ವಿಧಾನಗಳನ್ನು ಅನುಸರಿಸಲು ಇದರಿಂದ ಅವಕಾಶಗಳು ದೊರೆಯುತ್ತವೆ. ಅಧ್ಯಾಪಕರು ತಾವು ಚರ್ಚಿಸುತ್ತಿರುವ ಹತ್ತಾರು ವಿಷಯಗಳಿಗೆ ನಿದರ್ಶನಗಳನ್ನು ನಿತ್ಯದ ಕನ್ನಡ ಭಾಷಾ ಬಳಕೆಯಿಂದ ಆಯ್ದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ಕನ್ನಡವನ್ನು ಕೇಳಿ ,ಓದಿ ಅದರ ವಿವಿಧ ಸಾಧ್ಯತೆಗಳನ್ನು ಗ್ರಹಿಸಲು ವಿದ್ಯಾರ್ಥಿಗಳಿಗೂ ಸೂಚನೆಯನ್ನು ಮಾಡುವುದು ಸಾಧ್ಯ. ಇದಕ್ಕಾಗಿ ಅಗತ್ಯವಾದ ವರ್ಕ್ ಬುಕ್ ಅನ್ನು ಸಿದ್ಧ ಮಾಡಬೇಕಾಗುತ್ತದೆ.

ಈ ಎಲ್ಲ ವಿಷಯಗಳನ್ನು ಪಾಠ ಮಾಡಬೇಕು ಎನ್ನುವುದು ಒಂದು ನೆಲೆಯಾದರೆ ಇವೆಲ್ಲವನ್ನೂ ಹೇಳಲು ಅಗತ್ಯವಾದ ಸಾಮಗ್ರಿ ಒಂದೆಡೆ ದೊರೆಯುವುದಿಲ್ಲ ಎನ್ನುವುದು ಇನ್ನೊಂದು ಮಾತು. ಈ ಕೊರತೆಯನ್ನು ನಿವಾರಣೆಮಾಡಲು ತಕ್ಕ ಪಠ್ಯವಸ್ತುವನ್ನು ಅಧ್ಯಾಪಕರ ಕಮ್ಮಟವನ್ನು ನಡೆಸಿ ಸಿದ್ಧಪಡಿಸಬೇಕಾಗುತ್ತದೆ. ಜೊತೆಗೆ ಪಾಠ ಮಾಡುವ ಅಧ್ಯಾಪಕರೂ ತಮ್ಮ ಅನುಭವದ ನೆರವಿನಿಂದ ಪೂರಕ ಸಾಮಗ್ರಿಯನ್ನು ರೂಪಿಸಿಕೊಳ್ಳಬಲ್ಲರು.

ಈ ಎಲ್ಲ ಬದಲಾವಣೆಯ ಹಿಂದೆ ಇರುವ ತರ್ಕ ಸರಳ. ೧) ಈವರೆಗೆ ನಾವು ಹೇಳಿಕೊಡುತ್ತಿರುವ ವಿಷಯಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹುಟ್ಟಿಸುವಷ್ಟು ಪ್ರಸ್ತುತವಾಗಿರಲಿಲ್ಲ.ಅಲ್ಲದೆ ಭಾಷಾಶಾಸ್ತ್ರದಲ್ಲಿ ಈಚೆಗೆ ನಡೆದಿರುವ ಅಧ್ಯಯನಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ೨) ಕನ್ನಡವೆಂದರೆ ನಮ್ಮಿಂದ ಬೇರೆಯಾದ ಸಂಗತಿಯಲ್ಲ. ನಮ್ಮೊಡನೆ ಇರುವ ನಮ್ಮ ವ್ಯಕ್ತಿತ್ವದ ಭಾಗವೇ ಅಗಿರುವ ಸಂಗತಿಯಾದ್ದರಿಂದ ಅದರ ಸ್ವರೂಪವನ್ನು ತಿಳಿಯಲು ಹೊಸ ದಾರಿಗಳನ್ನು ಹಿಡಿಯಬೇಕು. ೩) ಇಂದಿನ ಕಾಲಮಾನದ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತಿಳಿವಿನ ಹೊಸ ದಾರಿಗಳನ್ನು ತೋರಿಸಿಕೊಡಬೇಕು. ೪) ಮುಂದೆ ಇವುಗಳಲ್ಲಿ ಯಾವುದಾದರೊಂದು ನೆಲೆಯನ್ನಾದರೂ ವಿಸ್ತರಿಸಿಕೊಳ್ಳುತ್ತ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

No comments: