ದಿನಕಳೆದಂತೆ ಒಂದೇ ಭಾಷೆಯನ್ನು ಮಾತ್ರ ಬಲ್ಲ ಸಮುದಾಯಗಳು ಕಡಿಮೆಯಾಗುತ್ತಿವೆ. ವ್ಯಕ್ತಿಗಳು ಒಂದೇ ಭಾಷೆಗೆ ಮಿತಿಗೊಂಡು ಬದುಕಲು ಹಟ ತೊಡಬಹುದು;ಆದರೆ ಸಮುದಾಯಗಳಲ್ಲ. ಇಂದಿನ ಸಂಪರ್ಕ ಸಾಧನಗಳು ಎಲ್ಲ ಸಮುದಾಯಗಳ ಮೇಲೆ ತನ್ನದಲ್ಲದ ಬೇರೆ ಭಾಷೆಗಳ ಕೌಶಲಗಳನ್ನು ಹೊಂದಲು ಒತ್ತಾಯ ತರುತ್ತಿವೆ. ಕನ್ನಡದ ಮಟ್ಟಿಗೆ ಈ ಒತ್ತಾಯ ಮೊದಲಾಗಿ ಎರಡು ಸಾವಿರ ವರುಷಗಳೇ ಕಳೆದಿವೆ. ಪ್ರಾಕೃತಗಳು,ಅರ್ಧಮಾಗಧಿ,ಸಂಸ್ಕೃತ, ಅರಾಬಿಕ್,ಪರ್ಶಿಯನ್, ಮರಾಠಿ,ಉರ್ದು,ಹಿಂದಿ,ಇಂಗ್ಲಿಶ್,ಪೋರ್ಚುಗೀಸ್ ಜೊತೆಗೆ ನೆರೆಯ ದ್ರಾವಿಡ ಭಾಷೆಗಳು ಕನ್ನಡಿಗರನ್ನು ವಿವಿಧ ಕಾಲಮಾನಗಳಲ್ಲಿ ಬೇರೆಬೇರೆ ಬಗೆಗಳಲ್ಲಿ ಆವರಿಸಿಕೊಂಡಿವೆ. ಕನ್ನಡಿಗರು ಈ ಭಾಷೆಗಳಲ್ಲಿ ವ್ಯವಹರಿಸುವ ಸಂದರ್ಭಗಳು ಚರಿತ್ರೆಯಲ್ಲಿ ಮೈತಳೆದುನಿಂತಿವೆ. ಇದೆಲ್ಲದರ ಪರಿಣಾಮ ಕನ್ನಡ ಭಾಷೆಯ ಮೇಲೆ ಆಗಿದೆ. ಕನ್ನಡ ಮತ್ತು ಕನ್ನಡಿಗರು ಬೇರೆ ಬೇರೆ ಬಗೆಯಲ್ಲಿ ಈ ಪರಿಣಾಮಕ್ಕೆ ಒಳಗಾಗಿರುವುದು ಕಂಡುಬರುತ್ತದೆ.
ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲ ಕನ್ನಡಿಗರು ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ತಾವು ಬಲ್ಲ ಇನ್ನೊಂದು ಭಾಷೆಯಿಂದ ಅನುವಾದಿಸಿಕೊಳ್ಳುವ ಕೆಲಸವನ್ನು ಮಾಡುತ್ತಿರುತ್ತಾರೆ.ನೀವು ತೆಲುಗನ್ನು ಬಲ್ಲ ಕನ್ನಡಿಗರು ಎಂದುಕೊಳ್ಳಿ. ತೆಲುಗು ಚಲನಚಿತ್ರವೊಂದನ್ನು ಟಿವಿಯಲ್ಲಿ ನೋಡುತ್ತಿದ್ದರೆ ಆಗ ನೀವು ಆ ಚಿತ್ರವನ್ನು ನೋಡುತ್ತಿರುವಷ್ಟು ಕಾಲ ತೆಲುಗಿನಿಂದ ಕನ್ನಡಕ್ಕೆ ಅಲ್ಲಿನ ಮಾತುಗಳನ್ನು ಅನುವಾದಿಸಿಕೊಳ್ಳುತ್ತಿರುತ್ತೀರಿ. ಆದರೆ ಹಾಗೆ ಮಾಡುತ್ತಿರುವುದು ನಿಮಗೆ ಗೊತ್ತಾಗುತ್ತಿರುವುದಿಲ್ಲ. ಇದೊಂದು ಯಥಾನುವಾದದ ಕೆಲಸವಲ್ಲ. ತೆಲುಗನ್ನು ತೆಲುಗಾಗಿಯೇ ನೀವು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಹಾಗೆಂದು ಅಲ್ಲಿನ ಮಾತುಗಳನ್ನು ಪದ ಬಿಡದಂತೆ ಕನ್ನಡೀಕರಿಸಿಕೊಳ್ಳುವುದೂ ಸಾಧ್ಯವಿಲ್ಲ ಆದರೆ ನಾವು ಅನುವಾದಕರಂತೆ ಕೆಲಸ ಮಾಡುತ್ತಿರುವುದಂತೂ ನಿಜ. ಹೀಗಲ್ಲದೆ ಒಂದೇ ಭಾಷೆ ಬಲ್ಲವರಿಗಾಗಿ ಕನ್ನಡಕ್ಕೆ ವಿವಿಧ ಭಾಷೆಗಳಿಂದ ಅನುವಾದಿಸುವ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಇದೊಂದು ಎಚ್ಚರದ,ಉದ್ದೇಶಿತ ಕ್ರಿಯೆ. ಅನುವಾದದಲ್ಲಿ ತೊಡಗಿದವರಿಗೆ ತಾವು ಏನು ಮಾಡುತ್ತಿದ್ದೇವೆ ಎನ್ನುವುದರ ಅರಿವು ಇರುತ್ತದೆ. ಇದು ಮಾತಿನ ಹಂತದಲ್ಲಿ ಇರುವಂತೆ ಬರಹದ ಹಂತದಲ್ಲೂ ಇರಬಹುದು. ಮಾತಿನ ಹಂತದಲ್ಲಿ ನಡೆಯುವ ಈ ಬಗೆಯ ಕ್ರಿಯೆ ಬಹು ವ್ಯಾಪಕವಾದುದು. ಅಂತಹ ಸಂದರ್ಭಗಳ ಲಕ್ಷಣಗಳನ್ನು ನಾವು ಇನ್ನೂ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರಳವಾದ ಈ ಉದಾಹರಣೆಯನ್ನು ನೋಡಿ. ತರಗತಿಯಲ್ಲಿ ಇಂಗ್ಲಿಶ್ ಬೋಧಿಸುತ್ತಿರುವ ಅಧ್ಯಾಪಕರು ಹಲವೊಮ್ಮೆ ಮೂಲ ಇಂಗ್ಲಿಶ್ ವಾಕ್ಯಗಳನ್ನು ಓದುತ್ತಲೇ ಅದರ ಕನ್ನಡ ಅನುವಾದನ್ನು ಮಾಡಿ ಮಕ್ಕಳಿಗೆ ಅದು ತಿಳಿಯುವಂತೆ ಮಾಡುತ್ತಿರುತ್ತಾರೆ. ಈ ಅನುವಾದಗಳು ಪ್ರಮಾಣೀಕರಣಗೊಳ್ಳುವುದಿಲ್ಲ.
ಬರವಣಿಗೆಯಲ್ಲಿ ಅನುವಾದವೆಂಬುದು ಹೆಚ್ಚು ಎಚ್ಚರದ ಮತ್ತು ಬಹು ವ್ಯಾಪಕವಾದ ಕೆಲಸವಾಗಿ ಬಿಡುತ್ತದೆ. ನಾವು ದಿನವೂ ಓದುವ ಬಹುಪಾಲು ಕನ್ನಡ ಸಾಮಗ್ರಿ ಕನ್ನಡಕ್ಕೆ ಅನುವಾದಗೊಂಡದ್ದು ಎನ್ನುವುದು ನಮಗೆ ಗೊತ್ತಾಗುವುದೇ ಇಲ್ಲ. ಪತ್ರಿಕೆಗಳು,ದೃಶ್ಯ ಮಾಧ್ಯಮಗಳು ವಾರ್ತೆಗಳನ್ನು,ಅಗ್ರ ಲೇಖನಗಳನ್ನು ಇಂಗ್ಲಿಶಿನಿಂದ ಅಥವಾ ಕೆಲವೊಮ್ಮೆ ಹಿಂದಿಯಿಂದ ಅನುವಾದಿಸಿಕೊಂಡಿರುತ್ತಾರೆ. ಕನ್ನಡದಲ್ಲೆ ಬರೆದಂತೆ ತೋರಿದರೂ ಮೂಲ ಸಾಮಗ್ರಿಗಾಗಿ ಇಂಗ್ಲಿಶ್ ಆಕರಗಳನ್ನು ದಂಡಿಯಾಗಿ ಬಳಸಿಕೊಂಡಿರುವುದನ್ನು ಯಾರಾದರೂ ಗುರುತಿಸಿಸಬಹುದು. ಸುಮ್ಮನೆ ಈಗ ದಿನವೂ ಬರುತ್ತಿರುವ ವಿಶ್ವ ಪುಟ್ ಬಾಲ್ ಪಂದ್ಯಗಳ ವರದಿಯನ್ನು ಎಚ್ಚರದಿಂದ ಓದಿದರೆ ಈ ಲಕ್ಷಣಗಳು ಗೊತ್ತಾಗುತ್ತವೆ. ರಾಜಕೀಯ ವಿಶ್ಲೇಷಣೆಗಳಿಗೆ,ಬೇರೆಬೇರೆ ಜ್ಞಾನ ಶಿಸ್ತುಗಳ ಮಾಹಿತಿಯನ್ನು ನೀಡುವ ಲೇಖನಗಳಿಗೆ ಹೀಗೆ ಇಂಗ್ಲಿಶ್ ಆಕರವನ್ನು ಆಶ್ರಯಿಸುವುದು ಒಪ್ಪಿತವಾಗಿರುವ ವಿಷಯವಾಗಿಬಿಟ್ಟಿದೆ. ನಮ್ಮ ಮಕ್ಕಳು ಓದುವ ಶಾಲಾ ಪಠ್ಯ ಪುಸ್ತಕಗಳು ಕನ್ನಡದಲ್ಲಿದ್ದರೂ ಅವುಗಳಲ್ಲಿ ಬಹುಪಾಲು ಮೊದಲು ಇಂಗ್ಲಿಶಿನಲ್ಲಿ ಬರೆದದ್ದನ್ನು ಆನಂತರ ಕನ್ನಡಕ್ಕೆ ಅನುವಾದ ಮಾಡಲಾಗಿರುತ್ತದೆ. ನಮ್ಮ ಶಾಸಕಾಂಗದಲ್ಲಿ ಅನುಮೋದನೆ ಪಡೆಯುವ ಮಸೂದೆಗಳು ಮೊದಲು ಇಂಗ್ಲಿಶಿನಲ್ಲೇ ಸಿದ್ಧಗೊಂಡಿರುತ್ತವೆ. ಅವುಗಳ ಕನ್ನಡ ಅನುವಾದವನ್ನು ಒದಗಿಸಲಾಗುತ್ತದೆಯದರೂ ವಿವರಣೆ ಅಗತ್ಯವಾದಾಗ ಇಂಗ್ಲಿಶ್ ಆವೃತ್ತಿಯನ್ನೇ ಅಧಿಕೃತವೆಂದು ತಿಳಿಯಬೇಕೆಂಬ ಶರತ್ತು ಇರುತ್ತದೆ.
ಈ ಎಲ್ಲ ಸಂಗತಿಗಳಿಂದ ಕನ್ನಡ ಮಾತಿನಲ್ಲಿ ಸ್ವತಂತ್ರ ರಚನೆಗಳು ಸಿಗುವಷ್ಟು ಬರೆಹದಲ್ಲಿ ಸಿಗುವುದಿಲ್ಲ ಎನ್ನುವ ಸಂಗತಿ ನಮಗೆ ಗೊತ್ತಾಗುತ್ತದೆ. ಮಾತಿನಲ್ಲೂ ಔಪಚಾರಿಕ ಸಂದರ್ಭದ ಮಾತುಗಳು ನೇರವಾಗಿ ಅಲ್ಲದಿದ್ದರೂ ಬಳಸು ದಾರಿಯಿಂದ ಅನುವಾದದ ನೆರಳನ್ನು ಹಿಡಿದಿರುತ್ತವೆ ಎನ್ನುವುದಕ್ಕೆ ನೂರಾರು ನಿದರ್ಶನಗಳು ನಮಗೆ ದೊರಕುತ್ತವೆ. ಇದರಿಂದ ಕನ್ನಡ ಭಾಷೆಯ ರಚನೆಯ ಮೇಲೆ ದಟ್ಟವಾದ ಪರಿಣಾಮಗಳು ಆಗಿವೆ.ಮುಖ್ಯವಾಗಿ ಪದರಚನೆ ಮತ್ತು ನುಡಿಗಟ್ಟುಗಳಲ್ಲಿ ಈ ಪರಿಣಾಮ ಎದ್ದು ಕಾಣುವಂತಿದೆ.
ಪದರಚನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಸ ಪದರೂಪಗಳನ್ನು ಬಳಸುವ ಅಗತ್ಯವುಂಟಾಗಿದೆ. ಇದಕ್ಕಾಗಿ ಹೆಚ್ಚು ಸಂಸ್ಕೃತ ಪದಗಳನ್ನು ಅವುಗಳಿಂದ ರಚನೆಗೊಂಡ ರೂಪಗಳನ್ನು ಬಳಸಲು ಮೊದಲು ಮಾಡಿದ್ದೇವೆ. ಕೆಲವು ಕಡೆಗಳಲ್ಲಿ ಮೂಲ ಇಂಗ್ಲಿಶ್ ಪದಗಳನ್ನು ಹಾಗೆಯೇ (ಹೆಚ್ಚಾಗಿ ನಾಮಪದಗಳ ರೂಪದಲ್ಲಿ) ಉಳಿಸಿಕೊಳ್ಳುವುದೂ ಉಂಟು.ಯಾವಾಗ ಮತ್ತು ಯಾವ ವಲಯಗಳಲ್ಲಿ ಹೀಗೆ ಸಂಸ್ಕೃತ ಮತ್ತು ಇಂಗ್ಲಿಶ್ ಪದರೂಪಗಳ ಅಯ್ಕೆ ನಡೆಯುತ್ತದೆ ಎಂಬುದು ಕುತೂಹಲಕರ ಸಂಗತಿಯಾಗಿದೆ.ದಿನಪತ್ರಿಕೆಗಳನ್ನು ತಿರುವಿಹಾಕಿದರೆ ಈ ಆಯ್ಕೆಗಳ ಸ್ವರೂಪ ಗೊತ್ತಾಗುವಂತಿರುತ್ತದೆ. ವಿಶ್ಲೇಷಣೆ ಮುಖ್ಯವಾಗಿರುವ ವಲಯಗಳಲ್ಲಿ ಸಂಸ್ಕೃತ ಪದಗಳನ್ನು ಆಯ್ದುಕೊಳ್ಳುವುದನ್ನು ಮತ್ತು ನಿರೂಪಣೆ ಮುಖ್ಯವಾಗಿರುವ ಕಡೆಗಳಲ್ಲಿ ಇಂಗ್ಲಿಶ್ ಪದಗಳನು ಉಳಿಸಿಕೊಳ್ಳುವುದನ್ನು ಗಮನಿಸುವುದು ಸಾಧ್ಯ. ಈ ನಿಯಮಗಳಿಗೆ ಅಪವಾದಗಳು ಇಲ್ಲವೆನ್ನುವಷ್ಟು ಕಡಿಮೆ.
ನುಡಿಗಟ್ಟುಗಳು ಭಾಷೆಯ ಬಳಕೆಯ ಗಡಿಗಳನ್ನು ಅಗಲವಾಗಿಸಬಲ್ಲವು. ಆದರೆ ಅನುವಾದಗಳನ್ನು ಅವಲಂಬಿಸಿದ ಇಂದಿನ ಕನ್ನಡ ಕನ್ನಡದ ನುಡಿಗಟ್ಟುಗಳಿಗೆ ಬದಲಾಗಿ ಇಂಗ್ಲಿಶ್ ಭಾಷೆಯ ನುಡಿಗಟ್ಟುಗಳನ್ನು ಇರುವಂತೆಯೇ ಅನುವಾದಮಾಡಿಕೊಂಡು ಬಳಸುವ ಹಾದಿಯನ್ನು ಕಂಡುಕೊಂಡಿದೆ. ಇದರಿಂದ ಕನ್ನಡದ ನುಡಿಕಟ್ಟುಗಳು ಬಳಕೆಯಿಂದ ಹಿಂದಕ್ಕೆ ಸರಿಯುವಂತಾಗಿದೆ. ಅಲ್ಲದೆ ಅನುವಾದಗೊಂಡು ಬಳಕೆಯಾದ ಎಷ್ಟೋ ನುಡಿಗಟ್ಟುಗಳನ್ನು ಅರಿಯಲು ಮೂಲ ಇಂಗ್ಲಿಶಿನ ಪರಿಚಯ ಅಗತ್ಯವೆನ್ನುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಹಾಗೆ ಮೂಲ ಗೊತ್ತಿಲ್ಲದ ಸಂದರ್ಭಗಳಲ್ಲಿಈ ಹೊಸ ನುಡಿಕಟ್ಟುಗಳು ಕನ್ನಡದ ಚೌಕಟ್ಟಿನಲ್ಲಿ ತುತ್ತಿನ ಕಲ್ಲುಗಳಂತೆ ಆಗಿಬಿಡುತ್ತವೆ.ಪತ್ರಿಕೆಗಳಲ್ಲಿ ಓದಲು ಸಿಗುವ ಜಾಹೀರಾತುಗಳ ಕನ್ನಡದಲ್ಲಿ ಈ ಬಗೆಯ ನುಡಿಗಟ್ಟುಗಳ ಸೇರ್ಪಡೆ ಹೆಚ್ಚಾಗಿ ಕಾಣುತ್ತದೆ. ಪತ್ರಿಕೆಗಳ ವರದಿಗಳಲ್ಲೂ ಅಪರೂಪವೇನಲ್ಲ. ಈಚಿನ ದಿನಗಳಲ್ಲಿ ಕನ್ನಡದ ವಾಕ್ಯ ರಚನೆಯ ಮೇಲೂ ಈ ಅನುವಾದ ಪ್ರಕ್ರಿಯೆಯ ಪರಿಣಾಮ ಹೆಚ್ಚಾಗಿ ಆಗುತ್ತಿರುವುದು ಕಂಡು ಬರುತ್ತಿದೆ. ವಾಕ್ಯದ ಕರ್ತೃವನ್ನು ಒಂದು ಉಪವಾಕ್ಯದ ಅನಂತರ ಹೇಳುವ ಪದ್ಧತಿ ಈಗ ಹೆಚ್ಚಾಗುತ್ತಿದೆ. ಇದು ಕನ್ನಡದಲ್ಲಿ ಇರದಿದ್ದ ವಾಕ್ಯ ರಚನೆಯ ವಿಧಾನ.ಉದಾ.ಗೆ"ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಲ್ಲೂ ಸಮಯಪ್ರಜ್ಞೆಯನ್ನು ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಕ್ಲುಪ್ತಕಾಲಕ್ಕೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಸ್ವಾಗತಿಸಲು ಸಮಾರಂಭದ ಆಯೋಜಕರು ಯಾರೂ ಅಲ್ಲಿ ಇರಲೇ ಇಲ್ಲ." ಕನ್ನಡದಲ್ಲಿ ಎರಡು ಅಥವಾ ಹೆಚ್ಚು ವಾಕ್ಯಗಳಾಗಿ ನಿರೂಪಿತವಾದಾಗ ಇದು ಸಹಜವಾಗಿರುತ್ತದೆ. ಆದರೆ ಈ ಬಗೆಯ ರಚನೆಗಳು ಈಗ ಕನ್ನಡದಲ್ಲಿ ಹೆಚ್ಚಾಗುತ್ತಿವೆ. ವಾಕ್ಯ ರಚನೆಯ ಮೇಲೆ ಆಗುತ್ತಿರುವ ಇನೂ ಹಲವು ಪರಿಣಾಮಗಳನ್ನು ನಾವಿನ್ನೂ ವಿವರವಾಗಿ ಅಭ್ಯಾಸ ಮಾಡಬೇಕಾಗಿದೆ.
ಕಥೆ,ಕಾದಂಬರಿ,ಕವನಗಳ ಅನುವಾದ ಎಂದಿನಿಂದಲೂ ಕನ್ನಡದಲ್ಲಿ ನಡೆಯುತ್ತಿದೆ. ಈಗಲೂ ಬೇರೆಬೇರೆ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಇಲ್ಲಿ ಮಾತ್ರ ಅನುವಾದಕರು ಬಹು ಎಚ್ಚರದಿಂದ ಕನ್ನಡದ ಜಾಯಮಾನವನ್ನು ಕಾಯ್ದುಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಅನುವಾದಗಳ ಯಶಸ್ಸನ್ನು ಕುರಿತು ವಿಮರ್ಶೆ ಮಾಡುವವರು ಸಾಮಾನ್ಯವಾಗಿ ಅನುವಾದಕರ ಈ ಎಚ್ಚರವನ್ನು ಗುರುತಿಸುತ್ತಾರೆ. ಎಲ್ಲ ಅನುವಾದಗಳಲ್ಲೂ ಈ ಎಚ್ಚರ ಸಮ ಪ್ರಮಾಣದಲ್ಲಿ ಕಂಡುಬರುವುದಿಲ್ಲ. ಆದರೆ ಈ ವಲಯದಲ್ಲಿ ಮಾತ್ರ ತಾವು ಬಳಸುತ್ತಿರುವ ಕನ್ನಡವು ಮೂಲಕೃತಿಯ ಭಾಷೆಯಿಂದ ಬೇರೆಯಾಗಿರುವ ಸ್ವತಂತ್ರ ಅಸ್ತಿತ್ವವುಳ್ಳ ಭಾಷೆ ಎಂಬ ಬಗೆಗೆ ಹೆಚ್ಚಿನ ಕಾಳಜಿ ಕಾಣುತ್ತದೆ. ಆದರೆ ಈ ಬಗೆಯ ಅನುವಾದಗಳ ಭಾಷಿಕ ಪರಿಣಾಮ ಮಾತ್ರ ಹೆಚ್ಚಿನದಾಗಿ ತೋರುವುದಿಲ್ಲ. ಎಂದರೆ ಕನ್ನಡದ ಒಟ್ಟು ಬೆಳವಣಿಗೆಯ ನಿಟ್ಟಿನಲ್ಲಿ ನಾವು ಮೊದಲು ಚರ್ಚಿಸಿದ ವಲಯದ ಕನ್ನಡದ ಬಳಕೆಯೇ ಹೆಚ್ಚು ಪ್ರಭಾವ ಬೀರುವಂತಿದೆ.ಕನ್ನಡ ಭಾಷಾ ಯೋಜಕರು ಈ ಬಗ್ಗೆ ಗಮನ ಹರಿಸುವ ಅಗತ್ಯ ಎಂದಿಗಿಂತ ಈಗ ಹೆಚ್ಚಾಗಿದೆ.
Monday, February 26, 2007
Subscribe to:
Post Comments (Atom)
No comments:
Post a Comment