Monday, February 26, 2007

ಶಾಲೆಯಲ್ಲಿ ವ್ಯಾಕರಣ

ನಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆಂದು ಮೀಸಲಾದ ಯಾವುದೇ ಪಠ್ಯ ಪುಸ್ತಕವನ್ನು ತೆರೆದರೂ ಅದರ ಪಾಠಗಳ ಕೊನೆಯಲ್ಲಿ ವ್ಯಾಕರಣಾಂಶಗಳನ್ನು ಕುರಿತು ಮಾಹಿತಿ ಇರುತ್ತದೆ. ಕಲಿಸುವವರು ಮಕ್ಕಳಿಗೆ ಈ ವ್ಯಾಕರಣಾಂಶಗಳನ್ನು ಹೇಳಿಕೊಡುತ್ತಾರೆ. ಪರೀಕ್ಷೆಯಲ್ಲಿ ಮಕ್ಕಳ ವ್ಯಾಕರಣ ಕುರಿತ ತಿಳುವಳಿಕೆಯನ್ನು ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನಮಾಡಲಾಗುತ್ತದೆ. ಕಲಿಕೆಯ ಈ ಕ್ರಮ ಎಷ್ಟು ಸರಿ ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದು: ನಾವು ಶಾಲೆಗಳಲ್ಲಿ ಕಲಿಸುತ್ತಿರುವ ವ್ಯಾಕರಣ ನಿಜವಾಗಿ ಕನ್ನಡದ ಸ್ವರೂಪವನ್ನು ವಿವರಿಸುತ್ತಿಲ್ಲ. ಎರಡು: ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವ ಮತ್ತು ಶಾಲೆಗೆ ಬರುವ ಮೊದಲೇ ಅನೌಪಚಾರಿಕವಾಗಿ ಕನ್ನಡ ಮಾತನಾಡಲು ಕಲಿತಿರುವ ಮಕ್ಕಳಿಗೆ ಈ ವ್ಯಾಕರಣದ ಕಲಿಕೆ ಆಗತ್ಯವಿಲ್ಲ. ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯವರಿಗೆ ಕನ್ನಡ ಮೊದಲ ಭಾಷೆ. ಉಳಿದವರಲ್ಲಿ ಹಲವರಿಗೆ ಶಾಲೆಗೆ ಬರುವ ಮೊದಲೇ ಕನ್ನಡ ಆಡು ಭಾಷೆಯಾಗಿ ಗೊತ್ತಿರುತ್ತದೆ. ಹೀಗೆ ಕನ್ನಡವನ್ನು ಶಾಲೆಯಲ್ಲೆ ಮೊದಲ ಬಾರಿಗೆ ಕೇಳಿಸಿಕೊಳ್ಳುತ್ತಿರುವ ಮಕ್ಕಳೂ ಇದ್ದಾರಾದರೂ ಅವರ ಬಗ್ಗೆ,ಅವರಿಗೆ ಕನ್ನಡವನ್ನು ಕಲಿಸುವ ರೀತಿಯ ಬಗ್ಗೆ ನಾವು ಯಾವ ವಿಶೇಷ ಎಚ್ಚರವನ್ನೂ ವಹಿಸಿಲ್ಲ. ಹೆಚ್ಚಿನ ಪಾಲು ಉರ್ದು ಮಾಧ್ಯಮದ ಶಾಲೆಗಳಲ್ಲಿ ಈ ಸಮಸ್ಯೆ ಇರುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಅವರಿಗೂ ಈ ವ್ಯಾಕರಣ ಬೇಡದ ಹೊರೆಯಾಗಿದೆ. ಮೂರು: ಹೀಗೆ ಒತ್ತಾಯಪೂರ್ವಕವಾಗಿ ಕಲಿಸುವ ವ್ಯಾಕರಣ ಕೂಡ ಮುಂದೆ ಕನ್ನಡ ಬಳಸುವವರ ನೆರವಿಗೆ ಬರುವುದಿಲ್ಲ. ಅದು 'ಕಲಿತು ಮರೆಯುವ' ವಿಷಯವಾಗಿರುತ್ತದೆ.

ಮೊದಲ ಕಾರಣವನ್ನು ಗಮನಿಸೋಣ. ನಾವು ಈಗ ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜವಾಗಿ ಕನ್ನಡದ ಚಹರೆಗಳನ್ನು ವಿವರಿಸುವ ರೀತಿಯಲ್ಲಿ ಇಲ್ಲ.ನಾವು ಬಳಸುತ್ತಿರುವ ಕನ್ನಡದ ರಚನೆಯನ್ನು ವಿವರಿಸುವ ನಿಯಮಗಳನ್ನು ನಾವಿನ್ನೂ ಸರಿಯಾಗಿ ತಿಳಿದುಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಹಳೆಗಾಲದ ಪಂಡಿತರು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿ ರೂಪಿಸಿದ ನಿಯಮಗಳನ್ನೇ ಈಗಲೂ ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಡಾ.ಡಿ.ಎನ್.ಶಂಕರಭಟ್ಟರು ಈ ಕೊರತೆಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಈ ವ್ಯಾಕರಣವು ಬರೆಹದ ಕನ್ನಡವನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳುತ್ತದೆ. ಆಡುಗನ್ನಡವನ್ನು ಗಮನಿಸುವುದಿಲ್ಲ. ಆದ್ದರಿಂದ ಮಕ್ಕಳು ತಾವು ಆಡುವ ಕನ್ನಡ ವ್ಯಾಕರಣ ಬದ್ಧವಲ್ಲ ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ. ಒಂದು ಚಿಕ್ಕ ನಿದರ್ಶನವನ್ನು ನೋಡಿ. ಸಪ್ತಮೀ ವಿಭಕ್ತಿಯ ಪ್ರತ್ಯಯಗಳೆಂದು 'ಒಳಗೆ' ಮತ್ತು 'ಅಲ್ಲಿ' ಎಂಬ ಎರಡು ರೂಪಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.(ಇವು ಪ್ರತ್ಯಯಗಳೇ ಎಂಬುದು ಬೇರೆಯೇ ಪ್ರಶ್ನೆ. ಅದು ಒತ್ತಟ್ಟಿಗಿರಲಿ).ಮನೆಯೊಳಗೆ,ಮನೆಯಲ್ಲಿ, ಊರಿನೊಳಗೆ(ಊರೊಳಗೆ),ಊರಿನಲ್ಲಿ(ಊರಲ್ಲಿ) ಮುಂತಾದ ಪದರೂಪಗಳನ್ನು ಉದಾಹರಣೆಯಾಗಿ ಹೇಳಿಕೊಡಲಾಗುತ್ತದೆ. ಆದರೆ ಕನ್ನಡದ ಬಹುಪಾಲು ಮಕ್ಕಳು ಅದರಲ್ಲೂ ತುಂಗಭದ್ರೆಯ ಉತ್ತರದ ಭಾಗದವರು ತಾವು ಕಲಿತು ಆಡುವ ಕನ್ನಡ ಮಾತಿನಲ್ಲಿ ಈ ಪ್ರತ್ಯಯಗಳ ಬದಲು 'ಆಗ' ಎಂಬ ರೂಪವನ್ನೇ ಬಳಸುತ್ತಾರೆ. ಮನೆಯಾಗ,ಊರಾಗ,ತಲೆಯಾಗ ಇತ್ಯಾದಿ. ಆದರೆ ನಮ್ಮ ಶಾಲೆಯ ಪಠ್ಯಗಳಲ್ಲಿ ಇದರ ಸುಳಿವೇ ಇಲ್ಲ. ಅಂದರೆ ನಾವು ಯಾವ ಕನ್ನಡದ ರಚನೆಯನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ? ಇದು ಒಂದು ಚಿಕ್ಕ ಉದಾಹರಣೆ. ಇಂತವು ಹಲವಾರಿವೆ. ಅಂದರೆ ಕನ್ನಡದ ನಿಜವಾದ ಎಲ್ಲ ಲಕ್ಷಣಗಳನ್ನು ನಿರೂಪಿಸದ ವ್ಯಾಕರಣವನ್ನು ಮಕ್ಕಳಿಗೆ ನಾವು ಹೇಳಿಕೊಡುತ್ತಿದ್ದೇವೆ.

ಇನ್ನೊಂದು ಕಾರಣವನ್ನು ಈಗ ನೋಡೋಣ. ನಾವು ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದೇಕೆ? ಅವರಿಗಾಗಲೇ ಕನ್ನಡ ಗೊತ್ತಿರುತ್ತದೆ. ಅದರ ವ್ಯಾಕರಣ ನಿಯಮಗಳನ್ನು ಅವರು ಅಂತಸ್ಥ ಮಾಡಿಕೊಂಡಿರುತ್ತಾರೆ. ನಿಯಮಗಳೇನು ಎಂದು ವಿವರಿಸಲು ಆಗದಿದ್ದರೂ ಎಲ್ಲರೂ ವ್ಯಾಕರಣ ಬದ್ಧವಾಗಿಯೇ ಕನ್ನಡವನ್ನು ಬಳಸುತ್ತಿರುತ್ತಾರೆ. ಹಾಗಿದ್ದಲ್ಲಿ ನಾವು ನಿಯಮಗಳನ್ನು ಮತ್ತೊಮ್ಮೆ ಕಲಿಸಬೇಕೇಕೆ? ಹಾಗೆ ನೋಡಿದರೆ ನಮ್ಮ ಕನ್ನಡ ಬೋಧನೆಯ ಗುರಿ ಮುಖ್ಯವಾಗಿ ೧) ಮಕ್ಕಳ ಪದಕೋಶವನ್ನು ಹೆಚ್ಚಿಸುವ ಕಡೆಗೆ ಇರಬೇಕು ೨) ಆ ಪದಕೋಶದ ನೆರವಿನಿಂದ ಹೊಸ ಪದರಚನೆಯನ್ನು ಮಾಡಲು ಮಕ್ಕಳು ಶಕ್ತರಾಗುವಂತೆ ಮಾಡಬೇಕು ಮತ್ತು ೩) ಆವರು ಕನ್ನಡವನ್ನು ಹಲವು ಹೊಸ ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗುವಂತೆ ತರಬೇತು ನೀಡಬೇಕು. ಹಾಗೆ ನೋಡಿದರೆ ಈ ಮೂರೂ ಗುರಿಗಳ ಸಾಧನೆಗೆ ವ್ಯಾಕರಣ ನಿಯಮಗಳನ್ನು ಕಲಿಸುವುದು ಅಗತ್ಯವೆಂದು ತೋರುವುದಿಲ್ಲ.

ವ್ಯಾಕರಣ ನಿಯಮಗಳನ್ನು ಶಾಲೆಗಳಲ್ಲಿ ಹೊಸದಾಗಿ ಕಲಿಯುವ ಮೂಲಕವೇ ಭಾಷೆಯ ಬಳಕೆಯು ಸಾಧ್ಯವಾಗುತ್ತದೆ ಎಂಬ ತಿಳುವಳಿಕೆಯು ನಮ್ಮಲ್ಲಿ ಬಲವಾಗಿ ಬೇರುಬಿಟ್ಟಿದೆ. ಸಾಮಾನ್ಯ ಕಲಿಕೆಯ ತತ್ವಗಳನ್ನು ನಾವು ಭಾಷೆಯ ನೆಲೆಗೂ ಅನ್ವಯಿಸುತ್ತೇವೆ. ಗಣಿತದಲ್ಲಿ ನಿಯಮಗಳನ್ನು ಕಲಿತ ಹಾಗೆ ಅಥವಾ ವಿಜ್ಞಾನ ವಿಷಯದಲ್ಲಿ ರಚನೆಗಳನ್ನು ತಿಳಿದ ಹಾಗೆ ಭಾಷೆಯ ಕಲಿಕೆಯಲ್ಲೂ ವ್ಯಾಕರಣ ಕಲಿಕೆ ಅಗತ್ಯವೆಂದು ಒಪ್ಪಿಬಿಟ್ಟಿದ್ದೇವೆ. ಆದರೆ ಈ ನಿಯಮಗಳು ಮಕ್ಕಳಿಗೆ ಮೊದಲೇ ತಿಳಿದಿರುತ್ತವೆ. ಹಾಗಿದ್ದಲ್ಲಿ ನಮ್ಮ ಶಾಲಾ ಶಿಕ್ಷಣದಲ್ಲಿ ವ್ಯಾಕರಣವನ್ನೂ ಏಕೆ ಅಳವಡಿಸಿಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಅನ್ಯ ಭಾಷೆಯೊಂದನ್ನು ಕಲಿಸುವ ಸಂದರ್ಭಕ್ಕೆ ಅನ್ವಯಿಸುವ ವಿಧಾನವಾಗಿದೆ. ಬ್ರಿಟಿಶರು ಇಂಗ್ಲಿಶನ್ನು ನಮಗೆ ಕಲಿಸಲು ಮೊದಲು ಮಾಡಿದಾಗ ಹೀಗೆ ಭಾಷೆಯ ವ್ಯಾಕರಣವನ್ನು ಹೇಳಿಕೊಡುವ ಮೂಲಕವೇ ಅದರ ಬಳಕೆಯನ್ನು ತಿಳಿದುಕೊಳ್ಳಲು ಸಾಧ್ಯವೆಂಬ ತತ್ವವನ್ನು ಶಿಕ್ಷಣದಲ್ಲಿ ಜಾರಿಗೊಳಿಸಿದರು. ಅದನ್ನು ನಾವು ಮಕ್ಕಳು ಈಗಾಗಲೇ ಅರಿತಿರುವ ಭಾಷೆಯ ವಿಷಯಕ್ಕೂ ಅನ್ವಯಿಸಿಕೊಂಡು ಬಿಟ್ಟಿದ್ದೇವೆ. ವಿಭಕ್ತಿ,ಕಾರಕ,ಆಖ್ಯಾತ,ಸಂಧಿ ಮುಂತಾದ ವ್ಯಾಕರಣ ಪ್ರಕ್ರಿಯೆಗಳನ್ನು,ಪರಿಕಲ್ಪನೆಗಳನ್ನು ನಾವು 'ಹೇಳಿಕೊಡುವ' ಅಗತ್ಯವಿಲ್ಲ. ಆದರೆ ಭಾಷೆಯನ್ನು ಹೊಸಹೊಸ ಸನ್ನಿವೇಶಗಳಲ್ಲಿ ಬಳಸಲು ಬೇಕಾದ ಉತ್ಪಾದಕತೆಯ ಸಾಮರ್ಥ್ಯವನ್ನು ಮಾತ್ರ ಮಕ್ಕಳಲ್ಲಿ ಬೆಳಸಬೇಕಾಗುತ್ತದೆ. ಹಾಗೆ ನೋಡಿದರೆ ನಮ್ಮ ಶಾಲೆಗಳಲ್ಲಿ ಈ ನೆಲೆಗೆ ದೊರಕುತ್ತಿರುವ ಒತ್ತು ತುಂಬಾ ಕಡಿಮೆಯಾಗಿದೆ. ಹಾಗಾಗಿ ನಮ್ಮ ಮಕ್ಕಳು ತಾವು ಬಲ್ಲ ಕನ್ನಡವನ್ನು ಜೀವನದ ಬೇರೆಬೇರೆ ಸಂದರ್ಭಗಳಲ್ಲಿ ಬಳಸಲು ಹಿಂಜರಿಯುವಂತಾಗಿದೆ. ಅವರು 'ಕಲಿತ' ವ್ಯಾಕರಣ ಅವರಿಗೆ ನೆರವಾಗುವುದಿಲ್ಲ. ಅಂದರೆ ಭಾಷೆಯ ರಚನೆಯನ್ನು 'ತಿಳಿಯುವುದು' ಒಂದು ನೆಲೆಯಾದರೆ ಅದರ ಬಳಕೆಯನ್ನು 'ಕಲಿಯುವುದು' ಇನ್ನೊಂದು ನೆಲೆ. ಮೊದಲನೆಯದನ್ನು 'ಕಲಿಯಬೇಕಾಗಿಲ್ಲ'. ಹಾಗೆ ಕಲಿಸಿದರೂ ಅದು ಅವರಿಗೆ ಬಳಕೆಯ ಸಾಮರ್ಥ್ಯಗಳನ್ನು ತಂದುಕೊಡುವುದಿಲ್ಲ. ಆದರೆ ಬಳಕೆಯ ಸಾಮರ್ಥ್ಯಗಳನ್ನು ಮಾತ್ರ ಹೊಸದಾಗಿಯೇ 'ಕಲಿತು' ಗಳಿಸಿಕೊಳ್ಳಬೇಕಾಗುತ್ತದೆ. ನಮ್ಮ ಶಾಲೆಗಳಲ್ಲಿ ಈ ಅಂಶದ ಕಡೆಗೆ ನಾವು ಗಮನವನ್ನು ನೀಡುತ್ತಿಲ್ಲ.

ಈಗ ಮೂರನೆಯ ಕಾರಣ ಉರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯ. ನಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ನಾವು ಕಲಿತ ವ್ಯಾಕರಣ ಮುಂದೆ ನಮ್ಮನ್ನು ಕೈಹಿಡಿದು ನಡೆಸುವುದಿಲ್ಲವೆಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೊಸ ಪದಗಳನ್ನು ರಚಿಸುವಾಗ ನಾವು ಕಲಿತ ಸಂಧಿಯ ನಿಯಮಗಳನ್ನು ನಾವು ಲೆಕ್ಕಕ್ಕೆ ಇರಿಸಿಕೊಳ್ಳುವುದೇ ಇಲ್ಲ. ದಿನದಿನವೂ ಪತ್ರಿಕೆಗಳಲ್ಲಿ ನಮಗೆ ಓದಲು ಸಿಗುವ ಮುಂದಿನ ಹಲವಾರು ರಚನೆಗಳನ್ನು ಗಮನಿಸಿ. ಹಸುರೋತ್ಸವ,ಚುಟುಕೋತ್ಸವ,ಕನ್ನಡೀಕರಣ,ನಗದೀಕರಣ,ಸಿದ್ಧರಾಮಯ್ಯಗೆ ಆಹ್ವಾನ,ದುರ್ನಡತೆ,ಸನ್ನಡತೆ,ಮಿಲಿಯಾಂತರ ಇತ್ಯಾದಿ. ಈ ರಚನೆಗಳನ್ನು ತಪ್ಪು ಎಂದು ಹೇಳಲು ನಾವೇನೋ ಸಿದ್ಧ. ಆದರೆ ಇಂತಹ ರಚನೆಗಳನ್ನು ಸಿದ್ಧಗೊಳಿಸಿ ಬಳಸುವವರಿಗೆ ಅವರು ಕಲಿತ ವ್ಯಾಕರಣ ಏಕೆ ನೆರವಾಗಲಿಲ್ಲ? ಅಥವಾ ಅವರು ವ್ಯಾಕರಣವನ್ನು ಸರಿಯಾಗಿ ಕಲಿಯದೇ ಇದ್ದುದರಿಂದ ಹೀಗಾಯಿತು ಎಂದು ವಾದಿಸಬೇಕೆ? ಹಾಗೇನೂ ಇಲ್ಲ. ಇಂತಹ ರಚನೆಗಳು ಏಕೆ ಸಿದ್ಧಗೊಳ್ಳುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನಮ್ಮ ಕನ್ನಡವನ್ನು ನಾವಿನ್ನೂ ವಿವರಿಸಿಕೊಂಡಿಲ್ಲ. ನಮ್ಮ ಶಾಲಾ ವ್ಯಾಕರಣ ನಿಯಮಗಳು ಭಾಷೆಯನ್ನು 'ಒಡೆಯುವಾಗ' ತೋರುವ ಚಹರೆಗಳನ್ನು ಹೇಳಲು ಯತ್ನಿಸುತ್ತವೆ. ಆದರೆ ಭಾಷೆಯನ್ನು 'ಕಟ್ಟುವಾಗ' ಏನಾಗುತ್ತದೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ನಾವು ಹೇಳಿಕೊಡುತ್ತಿಲ್ಲ. ಅದರ ಪರಿಣಾಮಗಳನ್ನು ನಾವೀಗ ದಿನವೂ ನೋಡುತ್ತಿದ್ದೇವೆ.

1 comment:

kannada baduku said...

ನಮಸ್ಕಾರ ಸಾರ್
ಇದು ಬಹಳ ಒಳ್ಳೆಯ ಕೆಲಸ. ಕನ್ನಡ ಏನಾಗಬೇಕಿದೆ ಎನ್ನುವುದನ್ನು ಗಮನಿಸಿಕೊಳ್ಳಲು ಇನ್ನಶ್ಟು ದಾರಿಗಳು ತೆರೆದುಕೊಳ್ಳಲಿ

ಚಲಪತಿ