ಮಕ್ಕಳು ಯಾವ ಭಾಷೆಯ ಮೂಲಕ ಚೆನ್ನಾಗಿ ಕಲಿಯುತ್ತಾರೆ ಎನ್ನುವ ವಿಷಯವನ್ನು ಕುರಿತು ವಾದವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಎರಡು ಪಕ್ಷಗಳಿವೆ. ಒಂದು ಪಕ್ಷದವರು ಕನ್ನಡ ಪರವಾದವರು;ಇನ್ನೊಂದು ಪಕ್ಷದವರನ್ನು ಮೊದಲ ಪಕ್ಷದವರು ಕನ್ನಡ ವಿರೋಧಿಗಳು ಎಂದು ಗುರುತಿಸುತ್ತಾರೆ. ಕನ್ನಡ ಪರವಾದ ವಾದಿಗಳು ಮಕ್ಕಳಿಗೆ ಕನ್ನಡದ ಮೂಲಕ ಕಲಿಸುವುದು ಸರಿಯಾದ ಬಗೆಯೆಂದು ವಾದಿಸುತ್ತಾರೆ. ತಮ್ಮ ವಾದದ ಸಮರ್ಥನೆಗೆ ಎರದು ದಾರಿಗಳನ್ನು ಅವರು ಹಿಡಿಯುತ್ತಾರೆ. ಮೊದಲನೆಯದು ಭಾವನಾತ್ಮಕವಾದುದು. ಮಗುವಿಗೆ ಪರಿಚಿತವಾದ ಮೊದಲ ನುಡಿಯಲ್ಲೇ ಕಲಿಕೆ ನಡೆಯುವುದು ಹೆಚ್ಚು ಸರಿಯೆಂದೂ ಅದಿನ್ನೂ ಕಲಿತಿಲ್ಲದ ಬೇರೆ ಭಾಷೆಯ ಮೂಲಕ ಕಲಿಸುವುದರಿಂದ ಕಲಿಕೆ ಎನ್ನುವುದು ಹಿಂಸೆಯಾಗುತ್ತದೆಂದು ಹೇಳುತ್ತಾರೆ. ಇದಲ್ಲದೆ ಇನ್ನೊಂದು ಅಪಾಯದ ಸೂಚನೆಯನ್ನೂ ನೀಡುತ್ತಾರೆ. ಹೀಗೆ ಮಗುವಿಗೆ ಕನ್ನಡವಲ್ಲದ ಇನ್ನೊಂದು ಭಾಷೆಯ ಮೂಲಕ ಕಲಿಸುವುದರಿಂದ ಮಗು ಭಾವನಾತ್ಮಕವಾಗಿ ತನ್ನ ನುಡಿಯ ಪರಿಸರದಿಂದ ಹೊರಗುಳಿಯುತ್ತದೆಂದೂ ಹೀಗೆ ಹೊರಗುಳಿಯುವ ಮಕ್ಕಳು ಕನ್ನಡ ಸಂಸ್ಕೃತಿಗೆ ಅನ್ಯರಾಗುತ್ತಾರೆಂದು ಹೇಳುತ್ತಾರೆ. ಅವರ ವಾದದ ಇನ್ನೊಂದು ದಾರಿ ಕಲಿಕೆಯ ತಾತ್ವಿಕ ನೆಲೆಗಳಿಂದ ರೂಪಿತವಾದದ್ದು. ಪರಿಚಿತವಾದ್ದರಿಂದ ಅಪರಿಚಿತವಾದದ್ದರ ಕಡೆಗೆ ಕಲಿಕೆಯು ನಮ್ಮನ್ನು ಒಯ್ಯುವುದು ಎಂದು ನಂಬುವುದಾದರೆ ಮಗುವಿನ ಮೊದಲ ಭಾಷೆಯಲ್ಲೇ ಅದರ ಕಲಿಕೆ ನಡೆಯ ಬೇಕೆಂದು ಒಪ್ಪಲೇ ಬೇಕಾಗುತ್ತದೆಂದು ಈ ವಾದದ ತಿರುಳು.ಭಾರತದ ಸಂದರ್ಭದಲ್ಲಿ ಗಾಂಧಿ,ರವೀಂದ್ರನಾಥ ಟಾಗೋರರನ್ನು ಈ ವಾದದ ಸಮರ್ಥನೆಗಾಗಿ ಉಲ್ಲೇಖಿಸಲಾಗುತ್ತದೆ.
ಕನ್ನಡದ ಮೂಲಕವಲ್ಲದೆ ಬೇರೆ ಯಾವ ಭಾಷೆಗಳ ಮೂಲಕ ಕರ್ನಾಟಕದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ? ಸಾಮಾನ್ಯವಾಗಿ ನೆರೆಯ ರಾಜ್ಯಗಳ ಭಾಷೆಗಳಾದ ತಮಿಳು,ತೆಲುಗು,ಮಲೆಯಾಳಮ್,ಮರಾಠಿಗಳ ಜೊತೆಗೆ ಉರ್ದು,ಹಿಂದಿಗಳ ಮೂಲಕವೂ ಸಾಕಷ್ಟು ಮಕ್ಕಳು ತಮ್ಮ ಶಾಲಾಶಿಕ್ಷಣದ ಮೊದಲ ಕೆಲವು ವರ್ಷಗಳ ಅವಧಿಯಲ್ಲಿ ಕಲಿಯುತ್ತಿದ್ದಾರೆ. ಇವೆಲ್ಲದರ ಜೊತೆಗೆ ಇಂಗ್ಲಿಶ್ ಕೂಡ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಶಾಲಾಶಿಕ್ಷಣದ ಅನಂತರದ ಹಂತದಲ್ಲಿ ಇಂಗ್ಲಿಶ್ ಮಾತ್ರ ಅಧಿಕೃತ ಕಲಿಕೆಯ ಮಾಧ್ಯಮವಾಗಿದೆ. ಅನಧಿಕೃತವಾಗಿ ಮಾನವಿಕ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ(ಕನ್ನಡ ವಿಶ್ವವಿದ್ಯಾಲಯವನ್ನು ಹೊರತು ಪಡಿಸಿ) ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಶ್ ಆಗಿದೆಯಾದರೂ ವಿದ್ಯಾರ್ಥಿಗಳು ಬಿ.ಎ, ಎಂ.ಎ ತರಗತಿಳಲ್ಲಿ ಉತ್ತರವನ್ನು ಬರೆಯುವುದಂತೂ ಕನ್ನಡದಲ್ಲೇ ಸರಿ. ಆದರೆ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳಲ್ಲಿ ಇಂಗ್ಲಿಶ್ ಇನ್ನೂ ತನ್ನ ಆಧಿಪತ್ಯವನ್ನು ಉಳಿಸಿಕೊಂಡಿದೆ. ಈ ವಿಷಯಗಳು ಸಾಮಾಜಿಕವಾಗಿ ಪಡೆದುಕೊಂಡಿರುವ ಮನ್ನಣೆಯಿಂದಾಗಿ ಕಲಿಕೆಯ ಮೊದಲ ಹಂತದಿಂದಲೇ ಇಂಗ್ಲಿಶ್ ಭಾಷೆಯನ್ನು ಮಾಧ್ಯಮವನ್ನಾಗಿ ಆಯ್ಕೆಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದು ಸರಿಯೋ ತಪ್ಪೋ ಎಂಬುದು ಈಗ ಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ. ಇಂಗ್ಲಿಶಿನ ಮೂಲಕ ಕಲಿತರೂ ಕನ್ನಡದ ಸಾಹಚರ್ಯವನ್ನು ಮಕ್ಕಳಲ್ಲಿ ಉಳಿಸುವಂತೆ ಮಾಡುವುದು ಹೇಗೆ ಎಂಬುದಷ್ಟೇ ನಮಗೀಗ ಉಳಿದಿರುವ ಆಯ್ಕೆಯೆಂದು ತೋರುತ್ತದೆ.
ಆದರೆ ಮೊದಲ ಭಾಷೆ (ಕೆಲವರು ಹೇಳುವಂತೆ ಮಾತೃ ಭಾಷೆ)ಯ ಮೂಲಕ ಕಲಿಕೆ ನಡೆಯದಿದ್ದರೆ ಅದು ಮಕ್ಕಳಿಗೆ ಹಿಂಸೆಯಾಗುತ್ತದೆ ಎನ್ನುವುದನ್ನು ಸದ್ಯಕ್ಕೆ ಒಪ್ಪಿದರೂ ನಮ್ಮ ಸಮಾಜದ ರಚನೆಯ ಕೆಲವು ಲಕ್ಷಣಗಳ ಹಿನ್ನಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಭಾರತದಲ್ಲಿ ಅಧಿಕೃತವಾಗಿ ೧೬೫೦ ಮಾತೃ ಭಾಷೆಗಳನ್ನಾಡುವ ಜನರಿದ್ದಾರೆ. ಇವುಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಭಾಷೆಗಳ ಸಂಖ್ಯೆ ಐವತ್ತರ ಆಸುಪಾಸಿನಲ್ಲಿವೆ. ಉಳಿದ ಭಾಷೆಗಳ ಮೂಲಕ ಕಲಿಕೆ ನಡೆಸುವುದು ಸಾಧ್ಯವಾಗುತ್ತಿಲ್ಲ. ಹಾಗೆ ಕಲಿಸಲು ಮಾಡಿದ ಪ್ರಯತ್ನಗಳು ಪೂರ್ಣವಾಗಿ ಗೆಲುವನ್ನು ಕಂಡಿಲ್ಲ. ಆ ಭಾಷೆಗಳನ್ನಾಡುವ ಜನರು ತಮ್ಮ ಮಕ್ಕಳಿಗೆ ತಮ್ಮದೇ ಭಾಷೆಯ ಮೂಲಕ ಕಲಿಸುವುದರಿಂದ ಅವರಿಗಿರುವ ಅವಕಾಶಗಳು ಕಡಿಮೆಯಾಗುತ್ತವೆ ಎಂದು ವಾದಿಸುತ್ತಿದ್ದಾರೆ. ಕರ್ನಾಟಕದ ಪರಿಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಬುಡಕಟ್ಟು ಜನರ ಭಾಷೆಗಳಿರಲಿ ಸಾಕಷ್ಟು ಜನರು ಬಳಸುವ 'ಸಾಮಾಜಿಕ' ಭಾಷೆಗಳಾದ ತುಳು,ಕೊಡಗು,ಲಂಬಾಣಿ ಭಾಷೆಗಳ ಮೂಲಕ ಕೂಡ ಕಲಿಕೆಯು ನಡೆಯುತ್ತಿಲ್ಲ.
ಇಂತಹ ಪರಿಸ್ಥಿತಿಯನ್ನು ಮನಗಂಡವರು ಕಲಿಕೆಗೆ ಮೊದಲ ಭಾಷೆಯನ್ನು ಮಾಧ್ಯಮವಾಗಿ ಬಳಸಬೇಕು ಎನ್ನುವ ಬದಲು ಪ್ರಾದೇಶಿಕ ಭಾಷೆಯನ್ನು ಬಳಸಬೇಕು ಎಂಬ ವಾದವನ್ನು ಮಂಡಿಸುತ್ತಾರೆ. ಯುನೆಸ್ಕೋ ಕೂಡ ತನ್ನ ಐವತ್ತರ ದಶಕದ ಖ್ಯಾತ ದಾಖಲೆಯಲ್ಲಿ ಮಾತೃ ಭಾಷೆಯಲ್ಲಿ ಕಲಿಸಬೇಕು ಎಂದು ಹೇಳುವ ಬದಲು ವರ್ನಾಕ್ಯುಲರ್( ದೇಶೀಯ ಎಂದು ಹೇಳೋಣ) ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಬೇಕು ಎಂದು ಹೇಳಿದೆ. ವಸಾಹತು ಆಡಳಿತದಿಂದ ಬಿಡುಗಡೆ ಪಡೆದ ನೂರಾರು ರಾಷ್ಟ್ರಗಳ ಸಂದರ್ಭದಲ್ಲಿ ಯುನೆಸ್ಕೋದ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಇಂಗ್ಲಿಶ್, ಫ್ರೆಂಚ್,ಸ್ಪ್ಯಾನಿಶ್,ಡಚ್,ಪೋರ್‍ಚುಗೀಸ್ ಮುಂತಾದ ವಸಾಹತು ಭಾಷೆಗಳ ಜಾಗದಲ್ಲಿ ದೇಶಿಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಸಲಹೆ ನೀಡಿದ್ದು ಸರಿಯಾಗಿಯೇ ಇದೆ. ಈ ಕಾರಣದಿಂದಾಗಿಯೇ ಕಳೆದ ಶತಮಾನ ಆರು,ಏಳನೆಯ ದಶಕಗಳಲ್ಲಿ ದೇಶೀಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಜಾಗತಿಕವಾಗಿ ಹೆಚ್ಚಿನ ಪ್ರಯತ್ನಗಳು ನಡೆದವು. ಕನ್ನಡದಲ್ಲೂ ಇಂತಹ ಯತ್ನಗಳು ನಡೆದವು.
ಚಾರಿತ್ರಿಕ ಸಂದರ್ಭವನ್ನು ಅವಲಂಬಿಸಿದ ಮೇಲಿನ ವಿಚಾರಗಳನ್ನು ಒಪ್ಪಿದರೆ ಮೊದಲ ಭಾಷೆಯಲ್ಲಿ ಕಲಿಕೆ ನಡೆಯ ಬೇಕೆನ್ನುವುದಕ್ಕೆ ಭಾವುಕವಾದ ಕಾರಣಗಗಳನ್ನು ಅಥವಾ ಶೈಕ್ಷಣಿಕ ತತ್ವಗಳನ್ನು ಅಧರಿಸಿದ ಕಾರಣಗಳನ್ನು ನೀಡುವ ವಾದವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆ ವಾದದ ತಿರುಳು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ, ವಾಸ್ತವವಾಗಿ ಹಾಗೆ ನಡೆಯುವುದು ಸಾಧ್ಯವೋ ಇಲ್ಲವೋ ಎನ್ನುವುದಷ್ಟೇ ನಮಗೆ ಮುಖ್ಯ.
ಶಿಕ್ಷಣವೆನ್ನುವುದು ಈಗ ವ್ಯಕ್ತಿಗತ ನೆಲೆಯ ವ್ಯಾಖ್ಯಾನಕ್ಕೆ ಒಳಗಾಗುವ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದೀಗ ಸಾಮಾಜೀಕರಣದ ಒಂದು ಸಾಧನ. ಪಾರಂಪರಿಕ ಉತ್ಪಾದನಾ ವಿಧಾನಗಳನ್ನು ಬಿಟ್ಟುಕೊಟ್ಟ ಸಮಾಜ ಹೊಸಬಗೆಯ ದುಡಿಮೆಗಳಿಗಾಗಿ ತನ್ನ ಎಳೆಯ ತಲೆಮಾರನ್ನು ಕಟ್ಟುತ್ತಿರುತ್ತದೆ. ಹಾಗಾಗಿ ಕಲಿಕೆ ಎನ್ನುವುದು ಈ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯಾಗಿದೆ. ಇಲ್ಲಿ ಕಲಿಕೆಯು ಯಾವ ಭಾಷೆಯಲ್ಲಿ ಆಗಬೇಕು ಎನ್ನುವುದನ್ನು ಚಾರಿತ್ರಿಕವಾದ ಮತ್ತು ಸಾಮಾಜಿಕವಾದ ಸಂಗತಿಗಳು ನಿರ್ದೇಶಿಸುತ್ತಿರುತ್ತವೆ. ಹೀಗಾದಾಗ ಕನ್ನಡದಂತಹ ಭಾಷೆಗಳಿಗೆ ಹಲವಾರು ಅಡ್ಡಿಆತಂಕಗಳು ಬರುವುದು ಸಹಜ. ನಾವು ಕನ್ನಡಪರ ಇಲ್ಲವೇ ಕನ್ನಡ ವಿರೋಧ ಎನ್ನುವ ನೆಲೆಯಲ್ಲಿ ಯೋಚಿಸುತ್ತ ಕೂರುವುದು ಈಗ ಸಾಧ್ಯವಿಲ್ಲ. ಸಾಮಾಜಿಕ ಆಶೋತ್ತರ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವೆ ಸಹಬಾಳ್ವೆ ಹೇಗೆ ನಡೆಯಬೇಕು ಎಂಬ ಕಡೆಗೆ ನಮ್ಮ ಚಿಂತನೆ ಮತ್ತು ಕಾರ್ಯಯೋಜನೆಗಳು ರೂಪಗೊಳ್ಳ ಬೇಕು. ಹೀಗಾಗಿ ಕನ್ನಡ ಇಲ್ಲವೇ ಇಂಗ್ಲಿಶ್ ಎನ್ನುವ ನಿಲುವಿಗಿಂತ ಕನ್ನಡ ಮತ್ತು ಇಂಗ್ಲಿಶ್ ಎಂದು ಗ್ರಹಿಸುವುದು ಹೆಚ್ಚು ಸೂಕ್ತ. ಹೀಗೆ ಗ್ರಹಿಸಿದಾಗ ಕನ್ನಡ ಯಾವಾಗಲೂ ದುರ್ಬಲವಾಗಿಯೇ ಇರುತ್ತದೆ ಎಂದು ತಿಳಿಯಬೇಕಾಗಿಲ್ಲ. ಬದಲಾವಣೆಯ ಮಿಡಿತಗಳಿಗೆ ಅನುಗುಣವಾಗಿ 'ನಮ್ಮ ಕನ್ನಡ'ವನ್ನು ಹೊಂದಿಸಿಕೊಂಡರೆ ಅದು ಸಾಕಷ್ಟು ಸಬಲವಾಗಿ ಮತ್ತು ತನ್ನ ಜಾಗವನ್ನು ಕಾಯ್ದುಕೊಳ್ಳಲು ಶಕ್ತವಾಗಬಲ್ಲುದು. ಹಾಗಿಲ್ಲದೆ ಕನ್ನಡದ ಚಲನಶೀಲತೆಯನ್ನು ನಿರಾಕರಿಸಿ ಭಾವುಕ ನೆಲೆಯಲ್ಲಿ 'ಕಾಯ್ದುಕೊಳ್ಳುವ' ಹಾದಿ ಹಿಡಿದರೆ ಅದರಿಂದ ಆಗುವ ಪ್ರಯೋಜನಗಳು ಕಡಿಮೆ.
Monday, February 26, 2007
Subscribe to:
Post Comments (Atom)
No comments:
Post a Comment