Monday, February 26, 2007

ವಿರುದ್ಧ ಪದ, ನಿಷೇಧ ಪದ: ಹೀಗೆಂದರ್‍ಏನು?

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ ಕೆಲವು ಪದಗಳನ್ನು ನೀಡಿ ಅವುಗಳಿಗೆ 'ವಿರುದ್ಧಾರ್ಥ'ವನ್ನು ಬರೆಯಲು ಹೇಳುತ್ತಾರೆ. ಎಲ್ಲ ಪಾಠಗಳ ಕೊನೆಯಲ್ಲಿ ಬರುವ ಭಾಷಾಭ್ಯಾಸವೆಂಬ ಭಾಗದಲ್ಲಿ ಈ ವಿರುದ್ಧಾರ್ಥದ ಅಭ್ಯಾಸ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳ ಮನೆಗೆಲಸವನ್ನು ಮುಗಿಸುವ ಹೊಣೆ ಹೊತ್ತಾಗ ಹೀಗೆ ವಿರುದ್ಧಾರ್ಥಗಳನ್ನು ಮಕ್ಕಳಿಗೆ ಹೇಳಿಕೊಡ ಬೇಕಾದ ಪ್ರಸಂಗವನ್ನು ಎದುರಿಸುತ್ತಾರೆ. ಆಗ ಕನ್ನಡ'ಬಲ್ಲವರನ್ನು" ಹುಡುಕಿಕೊಂಡು ತಂದೆ ತಾಯಂದಿರು ಹೋಗುವುದುಂಟು. ಫೋನಿನಲ್ಲಿ ಕೇಳುವುದೂ ಉಂಟು. ಅಂತೂ ಎಲ್ಲರೂ ಈ ವಿದುದ್ಧ ಪದಗಳಿಗಾಗಿ ಹುಡುಕಾಟವನ್ನು ಮುಂದುವರೆಸುತ್ತಾರೆ. ಇದರಿಂದ ದೊರಕುವುದೇನು? ರಾತ್ರಿಗೆ ಹಗಲು, ಗಂಡನಿಗೆ ಹೆಂಡತಿ, ಬಿಳಿಗೆ ಕಪ್ಪು, ಎಡಕ್ಕೆ ಬಲ, ಆಕಾಶಕ್ಕೆ ಭೂಮಿ,ಬೆಂಕಿಗೆ ನೀರು, ಹಿಂದೂಗೆ ಮುಸ್ಲಿಂ,ಬಡವನಿಗೆ ಬಲ್ಲಿದ ಹೀಗೆ ಇನ್ನೂ ಹಲವು ಸೋಜಿಗದ ಪದ ಜೋಡಿಗಳು ನಿಮಗೆ ಸಿಗುತ್ತವೆ. ಕೆಲವೊಮ್ಮೆ ಒಂದೇ ಪದಕ್ಕೆ ಒಂದಕ್ಕಿಂತ ಹೆಚ್ಚು ವಿರುದ್ಧ ಪದಗಳು ತಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತವೆ.ಯಾವುದು ಸರಿಯಾದ ವಿರುದ್ಧ ಪದ ಎಂದು ತೀರ್ಮಾನಿಸುವುದು ಅಷ್ಟು ಸುಲಭವೇನಲ್ಲ. ಉದಾಹರಣೆಗೆ ಸಿಹಿಗೆ ಕಹಿ ವಿರುದ್ಧ ಪದವೆಂದು ತಿಳಿದರೆ ಏನಾಗುತ್ತದೆ? ಸಿಹಿಯಲ್ಲದುದು ಕಹಿಯಾಗಿ ಇರುತ್ತದೆ ಎಂದು ಹೇಳಬೇಕಾಗುತ್ತದೆ. ಆದರೆ ಸಿಹಿಯಲ್ಲದುದು ಕಹಿಯಾಗಿಯೇ ಇರಬೇಕಿಲ್ಲವಲ್ಲ. ಸಿಹಿಯಲ್ಲದ ಆದರೆ ಕಹಿಯೂ ಅಲ್ಲದ ಹಲವು ರುಚಿಗಳು ಇವೆಯಲ್ಲವೇ? ಅಂದರೆ ವಿರುದ್ಧ ಅರ್ಥವುಳ್ಳ ಪದಗಳು ಎಂಬ ಚಿಂತನೆಯೇ ಸರಿಯಾದುದಲ್ಲ.

ಈ ಗೊಂದಲ ಇಲ್ಲಿಗೇ ಮುಗಿಯುವುದಿಲ್ಲ. ಶಾಲಾ ಪುಸ್ತಕಗಳು ನಿಷೇಧ ಪದಗಳು ಎಂಬ ಇನ್ನೊಂದು ಗುಂಪನ್ನು ಮಾಡಿಕೊಳ್ಳುತ್ತವೆ. ನೀತಿ-ಅನೀತಿ, ಅರ್ಥ-ಅನರ್ಥ, ಆಚಾರ-ಅನಾಚರ,ಆಹಾರ-ನಿರಾಹಾರ,ನಿಶ್ಚಿತ-ಅನಿಶ್ಚಿತ, ಕಲ್ಮಶ-ನಿಷ್ಕಲ್ಮಶ, ತಂತು-ನಿಸ್ತಂತು ಹೀಗೆ ಪದಪಟ್ಟಿಯನ್ನು ಬೆಳೆಸಬಹುದು. ಇವೆಲ್ಲ ಪದ ಮತ್ತು ನಿಷೇಧ ಪದಗಳ ಜೋಡಿಗಳು. ಈ ಪಟ್ಟಿಯನ್ನು ಗಮನಿಸಿದರೆ ಇವೆಲ್ಲವೂ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು ಎಂಬುದು ತಿಳಿಯುತ್ತದೆ. ಅಲ್ಲದೆ ಜೋಡಿ ಪದಗಳಲ್ಲಿ ಮೊದಲ ಪದಕ್ಕೆ ಮೊದಲಲ್ಲಿ ಏನನ್ನೋ ಕೂಡಿಸುವುದರಿಂದ ನಿಷೇಧ ಪದವನ್ನು ಪಡೆದಿರುವುದೂ ತಿಳಿಯುತ್ತದೆ. ಅಂದರೆ ನಿಷೇಧ ಪದಗಳು ಪದರಚನೆಯ ನೆಲೆಯಲ್ಲಿ ರೂಪುಗೊಳ್ಳುತ್ತವೆ. ಅವುಗಳಲ್ಲಿ ಒಂದು ಮೂಲಪದವಾಗಿದ್ದು ಇನ್ನೊಂದನ್ನು ಗೊತ್ತುಪಡಿಸಿದ ನಿಯಮದ ಮೂಲಕ ನಾವು ರಚಿಸಿಕೊಳ್ಳುತ್ತೇವೆ. ಮೇಲೆ ನೀಡಿದ ಪದಜೋಡಿಗಳನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಿದರೆ ಹೀಗೆ ನಿಷೇಧ ಪದಗಳನ್ನು ರಚಿಸುವಾಗ ಎರಡು ವಿಧಾನಗಳನ್ನು ನಾವು ಅನುಸರಿಸುವುದು ಗೊತ್ತಗುತ್ತದೆ. ಒಂದು ವಿಧಾನದಲ್ಲಿ ಮೂಲ ವಸ್ತು ಅಥವಾ ಗುಣ 'ಇಲ್ಲದಿರುವ' ಸ್ಥಿತಿಯನ್ನು ಸೂಚಿಸಲು ನಿಷೇಧ ರೂಪವನ್ನು ರಚಿಸುತ್ತೇವೆ. ಉದಾಹರಣೆಗೆ ಈ ಮುಂದಿನ ಪದಗಳ ಜೋಡಿಯನ್ನು ಗಮನಿಸಿ. ಚಿಂತೆ-ನಿಶ್ಚಿಂತೆ,ಫಲ-ನಿಷ್ಫಲ,ಜಲ-ನಿರ್ಜಲ,ಜನ-ನಿರ್ಜನ,ಚಲ-ನಿಶ್ಚಲ,ಶೇಷ-ನಿಶ್ಶೇಷ ಇತ್ಯಾದಿ. ಇವುಗಳಲ್ಲಿ ಮೊದಲ ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಇಲ್ಲದಿರುವುದನ್ನು' ಎರಡನೆಯ ಪದ ಸೂಚಿಸುತ್ತದೆ. ಇನ್ನೊಂದು ನಿಷೇಧ ರಚನೆಯ ಬಗೆಯಲ್ಲಿ ಒಂದು ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಅಲ್ಲದಿರುವುದನ್ನು' ನಿಷೇಧ ಪದದ ಮೂಲಕ ಸೂಚಿಸುತ್ತೇವೆ. ಈ ಮುಂದಿನ ಪದಜೋಡಿಗಳನ್ನು ಗಮನಿಸಿ. ಹಿಂಸೆ-ಅಹಿಂಸೆ, ಹಿತ-ಅಹಿತ, ಕಾಲ-ಅಕಾಲ, ವೇಳೆ-ಅವೇಳೆ, ಉದಾರ-ಅನುದಾರ, ಧೈರ್ಯ-ಅಧೈರ್ಯ, ನೀತಿ-ಅನೀತಿ ಇತ್ಯಾದಿ. ಇಲ್ಲೆಲ್ಲಾ ಮೊದಲ ಪದದಲ್ಲಿ ಸೂಚಿತವಾಗುವುದನ್ನು ಎರಡನೆಯ ಪದ ಅಲ್ಲಗಳೆಯುತ್ತದೆ. ಕನ್ನಡದ 'ಇಲ್ಲ' ಮತ್ತು 'ಅಲ್ಲ' ಎಂಬ ಪದಗಳ ಕೆಲಸವನ್ನು ಮೇಲೆ ಹೇಳಿದ ನಿಷೇಧ ರೂಪಗಳು ಮಾಡುತ್ತಿವೆ.ಹಾಗೆ ನೋಡಿದರೆ ಹೀಗೆ ಪದರಚನೆಯ ಮೂಲಕ ನಿಷೇಧ ರೂಪಗಳನ್ನು ರಚಿಸುವ ವಿಧಾನ ಕನ್ನಡದಲ್ಲಿ ಇಲ್ಲ. ನಾವು ಈ ಪದ ಜೋಡಿಗಳನ್ನು ನೇರವಾಗಿ ಸಂಸ್ಕೃತದಿಂದ ಪಡೆದುಕೊಂಡಿದ್ದೇವೆ. ಕನ್ನಡದ್ದೇ ಆದ ನಿಷೇಧ ರೂಪರಚನೆಯ ನಿಯಮಗಳು ಇಲ್ಲ. ಸಂಸ್ಕೃತದ ಈ ಪದರಚನೆಯ ನಿಯಮವನ್ನು ಕನ್ನಡದ ಮಕ್ಕಳು ತಮ್ಮಶಾಲಾ ಶಿಕ್ಷಣದ ಹಂತದಲ್ಲಿ ಕಲಿಯಬೇಕೆ ಬೇಡವೇ ಎಂಬುದು ಬೇರೆಯೇ ಪ್ರಶ್ನೆ. ಅಂದರೆ ಈ ಪದಜೋಡಿಗಳಲ್ಲಿ ಒಂದೊಂದು ಪದವನ್ನು ಮಕ್ಕಳು ಸ್ವತಂತ್ರ ಪದಗಳಾಗಿಯೇ ಕಲಿಯುತ್ತಾರೆಯೇ ಹೊರತು. ಒಂದು ಮೂಲಪದವನ್ನು ಕಲಿತು ಅದಕ್ಕೆ ನಿಷೇಧ ಪ್ರತ್ಯಯವನ್ನು ಹತ್ತಿಸುವ ನಿಯಮವನ್ನು ಬಳಸುವುದಿಲ್ಲ. ಸದ್ಯ ನಾವಿಲ್ಲಿ ಈ ವಿವರಗಳನ್ನು ಕುರಿತು ಚರ್ಚಿಸುವುದು ಬೇಕಾಗಿಲ್ಲ.

ಆದರೆ ವಿರುದ್ಧ ಪದಗಳು ಹೀಗಲ್ಲ. ಒಂದು ಪದ ಸೂಚಿಸುವ ವಸ್ತು ಇಲ್ಲವೇ ಸ್ಥಿತಿ ವಿರುದ್ಧವಾದ ವಸ್ತು ಇಲ್ಲವೇ ಸ್ಥಿತಿ ನಮ್ಮ ಸುತ್ತಣ ಜಗತ್ತಿನಲ್ಲಿ ಇರುತ್ತದೆ ಎನ್ನುವ ಊಹೆಯ ಮೇಲೆ ಈ ವಿರುದ್ಧ ಪದಗಳ ನೆಲೆಗಟ್ಟು ನಿಂತಿದೆ. ಇದು ಪದರಚನೆಯ ನೆಲೆಗೆ ಸಂಬಂಧಿಸಿದ್ದಲ್ಲ. ಲೋಕ ಗ್ರಹಿಕೆಯ ನೆಲೆಗೆ ಸಂಬಂಧಿಸಿದೆ. ಅಂದರೆ ಲೋಕವನ್ನು ಅದರ ಬಿಡಿಬಿಡಿ ನೆಲೆಗಳನ್ನು ನಾವು ಗ್ರಹಿಸುವಾಗಲೇ ಪ್ರತಿಯೊಂದಕ್ಕೂ ಅದಕ್ಕೆ ವಿರುದ್ಧವಾದುದು ಇರುತ್ತದೆ ಎನ್ನುವ ನೆಲೆಯಲ್ಲೇ ಗ್ರಹಿಸುವಂತೆ ಮಾಡುವುದು ಎಷ್ಟು ಸರಿಯಾದುದುದು? ನಾವು ವಿರುದ್ಧ ಪದಗಳು ಎಂದು ಸಾಮಾನ್ಯವಾಗಿ ಶಾಲೆಯಲ್ಲಿ ಹೇಳಿಕೊಡುತ್ತಿರುವ ಪದಗಳಲ್ಲಿ ಕೆಲವನ್ನು ಆಯ್ದು ಈಗ ಈ ಬಗೆಯ ಗ್ರಹಿಕೆಯಲ್ಲಿ ಇರುವ ಎಡರುತೊಡರುಗಳೇನು ಎಂಬುದನ್ನು ತಿಳಿಯೋಣ. ಮಿತ್ರ ಎಂಬುದಕ್ಕೆ ಶತ್ರು ವಿರುದ್ಧ ಪದ ಎಂದು ಹೇಳಿದರೆ ಏನಾಗುತ್ತದೆ? ಇವೆರಡೂ ಸಾಪೇಕ್ಷ ಮತ್ತು ಸ್ವತಂತ್ರ ಸ್ಥಿತಿಗಳು. ನನಗೆ ಮಿತ್ರನಲ್ಲದ ವ್ಯಕ್ತಿ ನನಗೆ ಶತ್ರು ಆಗಿರಲೇ ಬೇಕಾಗಿಲ್ಲ. ಅಲ್ಲದೆ ಮಿತ್ರ ಮತ್ತು ಶತ್ರು ಎಂಬುದು ಯಾರು ಆ ಪದಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಬದಲಾಗುತ್ತಲೇ ಹೋಗುತ್ತವೆ. ಮಿತ್ರ ಮತ್ತು ಶತ್ರು ಎಂಬ ಪದಗಳಿಂದ ಮಿತ್ರಪಕ್ಷ,ಶತ್ರುಪಕ್ಷ (ಅಥವಾ ಮಿತ್ರದೇಶ ಮತ್ತು ಶತ್ರುದೇಶ) ಎಂಬ ಪದಗಳನ್ನು ಪಡೆದುಕೊಂಡೆವು ಎಂದುಕೊಳ್ಳೋಣ. ಈ ಪದಗಳಿಗೆ ನಿರ್ದಿಷ್ಟವಾದ ಮತ್ತು ಕಾಲದೇಶ ಬದ್ಧವಲ್ಲದ ವ್ಯಾಖ್ಯಾನ ಇರುವುದು ಸಾಧ್ಯವೇ ಇಲ್ಲ. ಅಂದರೆ ಆ ಪದಗಳು ಹೇಗೆ ವಿರುದ್ಧ ಪದಗಳಾಗಬಲ್ಲವು? ಇದೇ ಬಗೆಯಲ್ಲಿ ವಿರುದ್ಧ ಪದಗಳ ಜೋಡಿಗಳನ್ನು ನಾವು ಬೇರೆಬೇರೆಯಾಗಿ ತೆಗೆದುಕೊಂಡು ನೋಡಬಹುದು. ಎಲ್ಲ ಕಡೆಗಳಲ್ಲೂ ಆ ಪದಗಳ ನಡುವೆ ವಿರುದ್ಧವಾದುದು ಏನೂ ಇರುವುದಿಲ್ಲ. ನಾವು ಆ ವಿರುದ್ಧ ಸ್ಥಿತಿಯನ್ನು ಆರೋಪಿಸುತ್ತೇವೆ. ಆ ಆರೋಪಿತ ಸ್ಥಿತಿಯನ್ನು ಮಕ್ಕಳಿಗೆ ಕಲಿಯ ಮೂಲಕ ರವಾನಿಸುತ್ತೇವೆ. ತನ್ನದು ತನ್ನದಲ್ಲದು ಅತ್ನವಾ ಸ್ವ ಮತ್ತು ಅನ್ಯ ಎಂಬ ಒಡೆದ ಸ್ಥಿತಿಯನ್ನು ಮೀರುವುದು ಎಲ್ಲ ಕಲಿಕೆಗಳ ಗುರಿಯಾಗ ಬೇಕಾಗಿರುವಾಗ ನಮಗೆ ಗೊತ್ತಿಲ್ಲದಂತೆ ಈ ನಿರಾಕರಣಗೊಳ್ಳಬೇಕಾದ ಮನೋಭಾವವೇ ನಮ್ಮ ಮಕ್ಕಳಲ್ಲಿ ಮೊಳಕೆಯೊಡುವಂತೆ ನಾವು ಮಾಡುತ್ತಿದ್ದೇವೆಯೇ?

ಇದೆಲ್ಲ ನಮ್ಮ ಕಲಿಕೆಯಲ್ಲಿ ಬೇರೂರಿದ್ದು ಹೇಗೆ? ವಸಾಹತು ಆಡಳಿತಕ್ಕೆ ಮಾದರಿಯಾಗಿದ್ದ ಪಬ್ಲಿಕ್ ಶಾಲೆಗಳ ಶಿಕ್ಷಣವು ಸಮಾನತಾ ಭಾವವನ್ನು ಬೆಳೆಸುವ ಗುರಿಯನ್ನು ಹೊಂದಿರಲಿಲ್ಲ.ತರತಮ ಭಾವವನ್ನೇ ಬೆಳೆಸಲು ಮುಂದಾಗಿದ್ದ ವಸಾಹತು ಮಾದರಿಯ ಕಲಿಕೆಯಲ್ಲಿ ಭಾಷಾ ಪಠ್ಯಕ್ರಮವು,ಮುಖ್ಯವಾಗಿ ಇಂಗ್ಲಿಶ್ ಭಾಷಾ ಕಲಿಕೆಯ ಪಠ್ಯ ಕ್ರಮವು ಸಿನಾನಿಮ್ ಮತ್ತು ಆಂಟಾನಿಮ್ ಗಳೆಂಬ ಪರಿಕಲ್ಪನೆಗಳನ್ನು ರೂಢಿಗೊಳಿಸಿತ್ತು. ನಾವು ಕಣ್ಣುಮುಚ್ಚಿ ಅದನ್ನೇ ನಮ್ಮ ಕಲಿಕೆಗೂ ನಕಲು ಮಾಡಿಕೊಂಡಿದ್ದರ ಪರಿಣಾಮವೇ ಇದು.ಕೊನೆಯ ಪಕ್ಷ ಉದ್ದೇಶದಲ್ಲಾದರೂ ಸಮಾನತಾ ಭವನ್ನು ಬೆಳೆಸುವ ಗುರಿ ನಮ್ಮ ಶಿಕ್ಷಣಕ್ಕೆ ಇದೆ.ಹಾಗಿದ್ದ ಮೇಲೆ ಇನ್ನಾದರೂ ಎಚ್ಚತ್ತು ಬದಲಾಗಬೇಕಲ್ಲವೇ?

No comments: