ಭಾಷೆಯನ್ನು ಕಲಿಸುವಾಗ ಸಮಾನಾರ್ಥಕ ಪದಗಳನ್ನು ಹೇಳಿಕೊಡುವ ಪದ್ಧತಿ ಇದೆ. ಸಂಸ್ಕೃತ ಭಾಷೆಯಲ್ಲಿ ಹೀಗೆ
ನಾಮಪದಗಳಿಗೆ ಸಮಾನಾರ್ಥಕ ಪದಗಳ ಪಟ್ಟಿಯನ್ನು ನೀಡುವ ಕೋಶವಿದೆಯಷ್ಟೆ. ಇದನ್ನು ಅಮರಕೋಶವೆನ್ನುತ್ತಾರೆ. ಅದನ್ನು ಬಾಯಿಪಾಠ ಮಾಡುವುದು ಸಂಸ್ಕೃತ ಭಾಷಾ ಕಲಿಕೆಯ ಭಾಗವಾಗಿತ್ತು. ಅದರಲ್ಲಿ ಒಂದು ನಾಮಪದಕ್ಕೆ ಸಮಾನವೆಂದು ಗುರುತಿಸಲಾದ ಪದಗಳನ್ನು ಪಟ್ಟಿ ಮಾಡಲಾಗಿದೆ. ಉದಾ.ಗೆ ಸೂರ್ಯ ಎಂಬ ಪದಕ್ಕೆ ಸಮಾನವಾಗಿ ರವಿ,ಭಾನು,ಆದಿತ್ಯ,ಮಾರ್ತಾಂಡ,ತರಣಿ ಹೀಗೆ ಹಲವು. ಕನ್ನಡದಲ್ಲೂ ಹೀಗೆ ನಾಮಪದಗಳಿಗೆ ಸಮಾನಾರ್ಥಕ ಪದಗಳನ್ನು ಗುರುತಿಸುವುದುಂಟು. ಆದರೆ ಇತರ ಪದವರ್ಗದ ಪದಗಳಿಗೆ ಹೀಗೆ ಸಮಾನಾರ್ಥಕ ಪದಗಳನ್ನು ಗುರುತಿಸಲು ಸಾಧ್ಯವೇ? ಉದಾ.ಗೆ ಗುಣಪದಗಳನ್ನು ನೋಡೋಣ. ಕೊಂಚ ಎಂಬ ಅರ್ಥ ನೀಡುವ ಹಲವಾರು ಪದಗಳನ್ನು ಕನ್ನಡಿಗರು ಬಳಸುತ್ತಾರೆ. ತುಸು,ಸ್ವಲ್ಪ.ಇಂಕರ,ರವಷ್ಟು,ಹನಿ,ತಟಕು,ವಸಿ,ಚೂರು,ತೊಟ್ಟು,ಚಿಟ್ಟು,ಚಿಟುಕು ಇತ್ಯಾದಿ. ಈ ಪದ ಪಟ್ಟಿಯನ್ನು ಓದುತ್ತಿರುವವರಲ್ಲಿ ಹಲವರು ಈಗಾಗಲೇ ಇವೆಲ್ಲವೂ ಸಮಾನಾರ್ಥಕಗಳಲ್ಲವೆಂದು ತಗಾದೆ ತೆಗೆಯುತ್ತಿರಬಹುದು. ಇವುಗಳಲ್ಲಿ ಕೆಲವು ಒಂದೊಂದು ಪ್ರದೇಶದಲ್ಲಿ ಬಳಕೆಯಾಗುತ್ತವೆ. ಆ ಪದ ಇನ್ನೊಂದು ಕಡೆಯ ಕನ್ನಡಿಗರಿಗೆ ತಿಳಿಯದೇ ಇರರುವ ಸಾಧ್ಯತೆ ಇದೆ.
ಕ್ರಿಯಾಪದಗಳಲ್ಲಿ ಹೀಗೆ ಸಮಾನಾರ್ಥಕ ಪದಗಳು ಇರಬಹುದೇ? ಒಂದೇ ಕ್ರಿಯೆಯನ್ನು ವಿವರಿಸಲು ಒಂದಕ್ಕಿಂತ ಹೆಚ್ಚು ಕ್ರಿಯಾಪದಗಳನ್ನು ನಾವು ಬಳಸುತ್ತೇವೆಯೇ? 'ಊಟ ಬಡಿಸು' ಎಂಬ ವಾಕ್ಯದಲ್ಲಿ ಇರುವ ಕ್ರಿಯಾಪದವನ್ನು ನೋಡಿ. ಇದಕ್ಕೆ ಬದಲಾಗಿ ಇಕ್ಕು,ನೀಡು,ಇಡು,ಹಾಕು,ಕೊಡು ಮುಂತಾದ ಪದಗಳನ್ನು ಬಳಸಬಹುದು. ಇವುಗಳಿಗೆ ಬೇರೆ ಬೇರೆ ಸಂದರ್ಭದ
ಬಳಕೆಯಿದೆ. ಅಂದರೆ ಅವುಗಳ ನಡುವೆ ಸೂಕ್ಷ್ಮವಾದ ವ್ಯತ್ಯಾಸಗಳಿವೆ. ಅಲ್ಲದೆ ಕೆಲವು ಪದಗಳನ್ನು ಎಲ್ಲಕಡೆಯೂ ಬಳಸುವುದಿಲ್ಲ. ಹಾಗೆ ನೋಡಿದರೆ ಸಮಾನಾರ್ಥಕ ಪದಗಳೆಂಬ ಪರಿಕಲ್ಪನೆಯೇ ಸರಿಯಿಲ್ಲವೇನೋ ಏಕೆಂದರೆ ಒಂದು ಅರ್ಥವನ್ನುಳ್ಲ ಎರಡು ಪದಗಳನ್ನು ಅಥವಾ ಒಂದಕ್ಕಿಂತ ಹೆಚ್ಚು ಪದಗಳನ್ನು ಭಾಷೆ ಹೊಂದಲು ಕಾರಣಗಳೇನು? ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಪದಗಳು ಬಳಕೆಯಾಗುತ್ತಿರುವುದು ಒಂದು ಕಾರಣ. 'ಚೆಂಡನ್ನು ಎಸೆ(ಎಸಿ)' ಎಂದು ಕೆಲವು ಕಡೆ ಹೇಳಿದರೆ ಮತ್ತೆ ಕೆಲವು ಕಡೆ 'ಚೆಂಡನ್ನು ಒಸಿ' ಎನ್ನುತ್ತಾರೆ. ಮತ್ತೆ ಕೆಲವು ಕಡೆ 'ಚೆಂಡನ್ನು ಒಗೆ(ಒಗಿ)' ಎನ್ನುತ್ತಿರಬಹುದು. ಮತ್ತೆ ಕೆಲವು ಕಡೆ 'ತೂರು' ಎಂದು ಹೇಳುವರು. ಆದರೆ ಒಂದೇ ಪ್ರದೇಶದಲ್ಲಿ ಒಂದೇ ಸಾಮಾಜಿಕ ವರ್ಗದಲ್ಲಿ ಒಂದೇ ಅರ್ಥವನ್ನು ನೀಡುವ ಎರಡು ಪದಗಳನ್ನು ಬಳಸುತ್ತಿದ್ದರೆ ಅವುಗಳಲ್ಲಿ ಕೆಲವು ಬೇರೆ ಭಾಷೆಯಿಂದ ಬಂದು ಸೇರಿಕೊಂಡಿರುವ ಸಾಧ್ಯತೆಗಳು ಹೆಚ್ಚು.
ನಾವೀಗ ಇಂತಹ ಇನ್ನೊಂದು ಬಗೆಯ ಪದವರ್ಗದಲ್ಲಿರುವ ಸಮಾನಾರ್ಥಕ ಪದಗಳನ್ನು ಗಮನಿಸೋಣ. ಈ ಮುಂದಿನ ಪದಗಳನ್ನು ನೋಡಿ: ಜತೆ(ಗೆ), ಜೊತೆ(ಗೆ), ಜತಿ, ಸಂಗಡ, ಒಡನೆ, ಒಂದಿಗೆ, ಒಟ್ಟಿಗೆ, ಕೂಡ(ಕುಟೆ), ಜೋಡಿ, ಇತ್ಯಾದಿ. ಇವುಗಳೆಲ್ಲವನ್ನು ಸಾಮಾನ್ಯವಾಗಿ ಅವ್ಯಯಗಳೆಂದು ಕರೆಯುವ ಪರಿಪಾಠವಿದೆ. ಇವುಗಳ ಬಳಕೆಯನ್ನು ಗಮನಿಸಿದರೆ ಇವೆಲ್ಲವೂ ಒಂದರ ಬದಲು ಇನ್ನೊಂದು ಬಳಕೆಯಾಗಬಹುದು ಎನಿಸಿದರೂ ಇವುಗಳು ಕನ್ನಡದಲ್ಲಿ ನೆಲೆಗೊಂಡ ಕ್ರಮದಲ್ಲೇ ಹಲವು ಏರುಪೇರುಗಳಿವೆ. 'ಜೊತೆ' ಎಂಬ ಪದವನ್ನೇ ನೋಡಿ. ಇದು ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ದಾಖಲೆಯಂತೆ ಸಂಸ್ಕೃತದ 'ಯುತ' ಎಂಬ ಪದದಿಂದ ರೂಪುಗೊಂಡಿದೆ. ನಿಘಂಟು ಹೀಗೆ ಹೇಳಲು ಇರುವ ಕಾರಣಗಳು ತಿಳಿಯುತ್ತಿಲ್ಲ. ಇದನ್ನು ತದ್ಭವ ಎಂದೇನೂ ಹೇಳುತ್ತಿಲ್ಲ. ಆದರೆ 'ಯುತ' ಎಂಬುದು 'ಜೊತೆ'ಯಾದುದು ಯಾವಾಗ? ಇಪ್ಪತ್ತನೆಯ ಶತಮಾನಕ್ಕೆ ಹಿಂದೆ ಈ ಪದ ಬಳಕೆಯಾಗಿರುವುದಕ್ಕೆ ನಿದರ್ಶನಗಳಿಲ್ಲವೆಂದೇ ನಿಘಂಟು ತಿಳಿಸುತ್ತದೆ. ಹಾಗೆಯೇ 'ಜೋಡಿ' ಪದ ಮರಾಟೀ ಭಾಷೆಯ 'ಜುಡಾ'ದಿಂದ ಬಂದಿದೆ ಎಂದು ದಾಖಲಿಸಲಾಗಿದೆ. ಜೋಡಿ ಮತ್ತು ಜೊತೆಗಳು ನಾಮಪದಗಳಾಗಿಯೂ ಕೆಲಸ ಮಾಡುತ್ತವೆ. ಇದೆಲ್ಲ ಕಾರಣದಿಂದ ಈ ಪದಗಳ ಬಳಕೆಯಲ್ಲಿ ಸಮಾನತೆ ಇರುವಷ್ಟೇ ವ್ಯತ್ಯಾಸಗಳೂ ಇವೆ.
ಇನ್ನೊಂದು ಇಂತಹ ಪದ ಪಟ್ಟಿಯನ್ನು ನೋಡಿ: ಅಲ್ಲಿ, ಒಳಗೆ, ಬಳಿ, ಹತ್ತಿರ. ಇವುಗಳಲ್ಲಿ ಕೆಲವು ಒಂದೊಂದು ಸಂದರ್ಭದಲ್ಲಿ ಇನ್ನೊಂದು ಪದದೊಡನೆ ಸಮಾನಾರ್ಥವನ್ನು (ಅಥವಾ ಸಮಾನ ನಿಯೋಗವನ್ನು) ಹೊಂದಿರುವಂತೆ ತೋರುತ್ತದೆ.'ರೈತರಲ್ಲಿ ಚಿಕ್ಕಾಸೂ ಇಲ್ಲ' ಎಂಬ ವಾಕ್ಯವನ್ನು ಗಮನಿಸಿ.. ಈ ವಾಕ್ಯದಲ್ಲಿ 'ಅಲ್ಲಿ' ಬದಲು 'ಬಳಿ' ಇಲ್ಲವೇ 'ಹತ್ತಿರ' ಪದಗಳನ್ನು ಬಳಸಬಹುದು. ಆದರೆ 'ಒಳಗೆ' ಪದವನ್ನು ಬಳಸಲು ಬರುವುದಿಲ್ಲ. ಆದರೆ 'ಕಣ್ಣುಮಿಟುಕಿಸುವುದರೊಳಗೆ ಎಲ್ಲ ನಡೆದು ಹೋಯಿತು' ಎನ್ನುವ ವಾಕ್ಯದಲ್ಲಿ 'ಒಳಗೆ' ಬದಲು 'ಅಲ್ಲಿ' ಬಳಸಲು ಸಾಧ್ಯ. ಆದರೆ ಈ ವಾಕ್ಯದಲ್ಲಿ 'ಬಳಿ' ಮತ್ತು'ಹತ್ತಿರ' ಪದಗಳಿಗೆ ಜಾಗವಿಲ್ಲ. 'ತಲೆಯಲ್ಲಿ ಕೂದಲಿಲ್ಲ' ಎಂಬ ವಾಕ್ಯದಲ್ಲಿ 'ಅಲ್ಲಿ' ಬದಲು ಉಳಿದ ಮೂರು ಪದಗಳಲ್ಲಿ ಯಾವುದನ್ನೂ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆ ಬಳಸಿದರೆ ಅರ್ಥವೇ ಬದಲಾಗಿಬಿಡುತ್ತದೆ.' ನಾನು ಹೋಗುವುದರೊಳಗೆ ಬಸ್ಸು ಹೊರಟುಹೋಗಿತ್ತು' ಎಂಬ ವಾಕ್ಯದಲ್ಲಿ 'ಒಳಗೆ' ಬದಲು ಈಗಿರುವಂತೆಯೇ (ಅಂದರೆ ವಾಕ್ಯದ ಸ್ವರೂಪವನ್ನು ಬದಲಾಯಿಸದೇ) 'ಅಲ್ಲಿ' ಪದವನ್ನು ಬಳಸುವುದು ಸಾಧ್ಯವಿಲ್ಲ. ಈ ವಿವರಣೆಗಳನ್ನು ಗಮನಿಸಿದರೆ ಮೇಲು ನೋಟಕ್ಕೆ ಒಂದೆ ಅರ್ಥವನ್ನುಹೊಂದಿರುವಂತೆ ತೋರುವ ಪದಗಳು ಬಳಕೆಯಲ್ಲಿ ಹಲವು ವ್ಯತ್ಯಾಸಗಳನ್ನು ಹೊಂದಿರುತ್ತವೆಂಬುದು ಗೊತ್ತಾಗುತ್ತದೆ. ಹಾಗಾಗಿ ಒಂದು ಪದಕ್ಕೆ ಅರ್ಥವೇನು ಎಂಬ ಪ್ರಶ್ನೆಗಿಂತ ಅದು ಭಾಷೆಯಲ್ಲಿ ಏನು ಕೆಲಸ ಮಾಡುತ್ತದೆ ಮತ್ತು ಇತರ ಪದಗಳೊಡನೆ ಅದು ಬಳಕೆಯ ಸಂದರ್ಭದಲ್ಲಿ ಹೊಂದಿರುವ ಸಂಬಂಧ ಏನು ಎಂಬುದು ಮುಖ್ಯವಾಗುತ್ತದೆ.
ಮೇಲಿನ ಕಂಡಿಕೆಯಲ್ಲಿ ಪಟ್ಟಿಮಾಡಿದ ಪದಗಳಲ್ಲಿ 'ಅಲ್ಲಿ' ಎಂಬುದಕ್ಕೆ ಹಲವು ಬಗೆಯ ಬಳಕೆ ಇರುವುದು ಗಮನಿಸಬೇಕಾದ ಸಂಗತಿ. ಇದು ದೂರ ಸೂಚಕ ಸರ್ವನಾಮವಾಗಿ ಬಳಕೆಯಾಗುತ್ತದೆ. ಆಗದು ಸ್ವತಂತ್ರ ಪದ. ಪ್ರತ್ಯಯ ಇಲ್ಲವೇ ಪದೋತ್ತರಿಯಾಗಿ ಬಳಕೆಯಾಗಲು ಮೊದಲಾದದ್ದು ಹೊಸಗನ್ನಡದಲ್ಲಿ. ನಡುಗನ್ನಡದಲ್ಲೂ 'ಅಲಿ' ಮತ್ತು 'ಒಳು' ಎಂಬ ಪದಗಳು ಕ್ರಮವಾಗಿ 'ಅಲ್ಲಿ' ಮತ್ತು 'ಒಳಗೆ' ಪದಗಳಿಗೆ ಬದಲಾಗಿ ಬಳಕೆಯಾಗುತ್ತಿದ್ದವು.ಈ ಒಳ್,ಉಳ್,ಒಳು ಗಳಿಗೆ ಯಾವಾಗ '-ಗೆ' ಪ್ರತ್ಯಯ ಬಂದು ಸೇರಿತು ಮತ್ತು ಅದಕ್ಕೆ ಇರುವ ಕಾರಣಗಳೇನು ಎನ್ನುವುದೇ ಇನ್ನೊಂದು ಚರ್ಚೆಗೆ ಕಾರಣವಾಗುವ ಸಂಗತಿ. 'ಒಳಗೆ' ಎಂಬುದರಲ್ಲಿ ಇರುವ '-ಗೆ' ಎಂಬ ಪ್ರತ್ಯಯಕ್ಕೆ ಸಮಾನವಾದ '-ಕ್ಕೆ' ಎಂಬ ಪ್ರತ್ಯಯವನ್ನು ಬಳಸಿ 'ಒಳಕ್ಕೆ' ಎಂಬ ಪದರೂಪವನ್ನು ಪಡೆದುಕೊಂಡೆವೆಂದುಕೊಳ್ಳಿ. ಆದರೆ ಇವೆರಡೂ ಯಾವಾಗಲೂ ಒಂದೇ ಬಗೆಯ ಕೆಲಸ ಮಾಡುವುದಿಲ್ಲ. 'ಮನೆಯೊಳಗೆ ಹೋಗು' ಎಂಬಲ್ಲಿ 'ಒಳಕ್ಕೆ' ಎಂಬ ಪದ ಬಳಸಬಹುದು. ಆದರೆ 'ಮನೆಯೊಳಗೆ ಇಲಿಯಿದೆ' ಎಂಬ ವಾಕ್ಯದಲ್ಲಿ 'ಒಳಕ್ಕೆ' ಬಳಸಲು ಸಾಧ್ಯವಿಲ್ಲ.
'ಅಲ್ಲಿ' ಪ್ರತ್ಯಯವಾಗಿ ಬಳಕೆಯಾದಾಗ ಅದನ್ನು ಸಪ್ತಮೀ ವಿಭಕ್ತಿ ಸೂಚಕವೆಂದು ವ್ಯಾಕರಣಗಳು ಹೇಳುತ್ತವೆ.ಆದರೆ ಈ ಪದರೂಪಕ್ಕೆ ಹಲವಾರು ಬಗೆಯ ಕೆಲಸಗಳಿರುವಂತೆ ತೋರುತ್ತದೆ.ಅದು ಎಷ್ಟೋ ಸಂದರ್ಭಗಳಲ್ಲಿ ಇನ್ನೊಂದು ಸಪ್ತಮೀ ವಿಭಕ್ತಿ ಸೂಚಕವಾದ 'ಒಳಗೆ'ಪದರೂಪಕ್ಕಿಂತ ಬೇರೆಯಾಗಿಯೇ ವರ್ತಿಸುತ್ತದೆ. 'ಅವರು ಚುನಾವಣೆಗೆ ನಿಂತಲ್ಲಿ ಗೆಲ್ಲುವುದು ಖಚಿತ' ಎನ್ನುವ ವಾಕ್ಯದಲ್ಲಿ ಇರುವ 'ಅಲ್ಲಿ' ಸಪ್ತಮೀ ವಿಭಕ್ತಿ ಸೂಚಕವಲ್ಲ;ಅದು ಸಂಭಾವನಾರ್ಥವನ್ನು (ನಿಂತರೆ ಎನ್ನುವ ಅರ್ಥದಲ್ಲಿ) ಸೂಚಿಸುತ್ತದೆ. ಈ ಬಗೆಯ ಬಳಕೆ ಈಗೀಗ ಕಡಿಮೆಯಾಗುತ್ತಿರುವಂತೆ ತೋರುತ್ತದೆ. ಅಥವಾ ಬರೆವಣಿಗೆಗೆ ಮಾತ್ರ ಸೀಮಿತಗೊಳ್ಳುತ್ತಿದೆ.;ಮಾತಿನಲ್ಲಿ ಮರೆಯಾಗುತ್ತಿರುವಂತಿದೆ.
ಈ ಟಿಪ್ಪಣಿಯ ಉದೇಶವಿಷ್ಟೆ: ನಾವು ಪದಗಳ ಅರ್ಥದ ಬಗೆಗೆ ಹೆಚ್ಚು ಎಚ್ಚರವಹಿಸುತ್ತೇವೆ. ಆದರೆ ಅವುಗಳ ಅರ್ಥವೆಂಬುದು ನಿಗದಿತವಾಗಿರುವುದಿಲ್ಲ. ಅದರಲ್ಲೂ ನಾಮಪದ ಮತ್ತು ಕೆಲವೊಮ್ಮೆ ಕ್ರಿಯಾಪದಗಳು ಹೆಚ್ಚು ಖಚಿತವಾದ ಅರ್ಥವನ್ನು ಹೊಂದಿವೆ ಎಂಬು ನಮಗೆ ತೋರಬಹುದು. ಆದರೆ ಭಾಷೆಯಲ್ಲಿ ಇರುವ ಸಾವಿರಾರು ಇತರ ಪದವರ್ಗದ ಪದರೂಪಗಳಿಗೆ ಹೀಗೆ ಅರ್ಥವೆಂಬುದನ್ನು ನಿಗದಿಯಾಗಿ ಹೇಳುವಂತಿರುವುದಿಲ್ಲ. ಅವು ಬಳಕೆಯಲ್ಲಿ ಪಡೆದುಕೊಳ್ಳುವ 'ವಾಕ್ಯಾತ್ಮಕ ಸಂಬಂಧ'ವನ್ನು ನಾವು ಗುರುತಿಸಬೇಕಾಗುತ್ತದೆ. ಆಗ ಮಾತ್ರ ಅವುಗಳ ನಿಜಸ್ವರೂಪ ನಮಗೆ ತಿಳಿಯಲು ಸಾಧ್ಯವಾಗುತ್ತದೆ. ಹೊಸಗನ್ನಡದಲ್ಲಿ ಹೀಗೆ ಪದರೂಪಗಳ ಬಳಕೆಯನ್ನು ಆಧರಿಸಿದ ವ್ಯಾಕರಣವನ್ನು ಜರೂರಾಗಿ ರಚಿಸುವ ಅಗತ್ಯವಿದೆ. ಅಲ್ಲದೆ ಈ ನಿಟ್ಟಿನಲ್ಲಿ ಹತ್ತೊಂಬತ್ತನೆಯ ಶತಮಾನದವರೆಗೆ ರಚನೆಯಾದ ವ್ಯಾಕರಣಗಳು ನಮ್ಮ ಉಪಯೋಗಕ್ಕೆ ಸಾಲವು. ಹೊಸಗನ್ನಡದ ಬಳಕೆಯ ಚಹರೆಗಳೇ ಬದಲಾಗಿಬಿಟ್ಟಿವೆ. ಆದ್ದರಿಂದ ಇಂದಿನ ಕನ್ನಡವನ್ನು ಗಮನಿಸಿಯೇ ನಮ್ಮ ಹೊಸ ವ್ಯಾಕರಣ ರಚನೆಯಾಗುವ ಅಗತ್ಯವಿದೆ.
Monday, February 26, 2007
Subscribe to:
Post Comments (Atom)
No comments:
Post a Comment